ಕನ್ನಡವೂ ಬೆಳೆಯಲಿ, ಪುಸ್ತಕ ಸಂಸ್ಕೃತಿ ವಿಸ್ತರಿಸಲಿ

'ಕಂಪ್ಯೂಟರ್ ಮತ್ತು ಕನ್ನಡ' ಕೃತಿಯ ಪೀಠಿಕೆ

ಪ್ರಿಯರೇ, ನಮಸ್ಕಾರಗಳು.

`ಕಂಪ್ಯೂಟರ್ ಮತ್ತು ಕನ್ನಡ' - ಈ ಪರ್ಯಾಯ ಪಠ್ಯಪುಸ್ತಿಕೆಯನ್ನು ನಿಮ್ಮ ಕೈಯಲ್ಲಿ ಇಡಲು `ಮಿತ್ರಮಾಧ್ಯಮ'ವು ಸಂತೋಷಪಡುತ್ತದೆ. ಕರ್ನಾಟಕ ರಾಜ್ಯದ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ನೆರವಾಗಲು ಈ ಪುಸ್ತಿಕೆಯನ್ನು ರೂಪಿಸಿದ್ದೇವೆ. ಕಂಪ್ಯೂಟರಿನಲ್ಲಿ ಕನ್ನಡವನ್ನು ಹೇಗೆ ಮತ್ತು ಎಷ್ಟರಮಟ್ಟಿಗೆ ಬಳಸಬಹುದು ಎಂಬ ಪಕ್ಷಿನೋಟವನ್ನು ಈ ಪುಸ್ತಿಕೆಯು ನೀಡುತ್ತದೆ. ಈ ಪುಸ್ತಕವು ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಕಂಪ್ಯೂಟರಿನಲ್ಲಿ ಕನ್ನಡವನ್ನು ಬಳಸಬೇಕೆಂಬ ಕಾಳಜಿ ಮತ್ತು ಆಸಕ್ತಿ ಇರುವ ಎಲ್ಲರಿಗೂ ಉಪಯುಕ್ತವಾಗುತ್ತದೆ ಎಂಬ ವಿಶ್ವಾಸ ನಮ್ಮದು.

ಆದರೆ ಈ ಪುಸ್ತಿಕೆಯು ಕನ್ನಡ - ಕಂಪ್ಯೂಟರಿನ ಎಲ್ಲಾ ಅಂಶಗಳನ್ನೂ ಪಠ್ಯಪುಸ್ತಕಗಳ ಮಾದರಿಯಲ್ಲಿ ವಿವರಿಸುವುದಿಲ್ಲ. ಬದಲಿಗೆ ನೀವು ಕನ್ನಡಪ್ರೀತಿಯನ್ನು ಬೆಳೆಸಿಕೊಳ್ಳುವುದಕ್ಕೆ ಬೇಕಾದ ಅಂಶಗಳತ್ತ ಬೆಳಕು ಚೆಲ್ಲುತ್ತದೆ; ದಿಕ್ಸೂಚಿ ಮಾಹಿತಿ ನೀಡುತ್ತದೆ.

ಇದು ಯುವ ಸಮುದಾಯದಲ್ಲಿ ಕಂಪ್ಯೂಟರ್‌ನಲ್ಲಿ ಕನ್ನಡವನ್ನು ಬಳಸುವ ಬಗ್ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಮ್ಮ ಮೊದಲ ಯತ್ನ. ನೀವು ಈ ಪುಸ್ತಕವನ್ನು ಇಷ್ಟಪಟ್ಟರೆ ಇದನ್ನು ಇನ್ನೂ ಪರಿಷ್ಕರಿಸಿ ಪ್ರಕಟಿಸುವೆವು. ಉಚಿತವಾಗಿ ಹಂಚುವೆವು!

ಈ ಪುಸ್ತಕಕ್ಕೆ ಮೂಲಕಾರಣ, ನಾವು ಬೆಂಗಳೂರಿನ ಸುರಾನಾ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೧೨ರಲ್ಲಿ ಮಾಡಿದ ಪಾಠಗಳು. ಈ ಪಾಠಗಳಿಗೆ ಕೋರಿಕೆ ಇಟ್ಟ ಕಾಲೇಜಿನ ಆಗಿನ ಪ್ರಾಂಶುಪಾಲ ಶ್ರೀ ಎ.ಎಸ್. ಚಂದ್ರಮೌಳಿ ಮತ್ತು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ|| ವತ್ಸಲಾ ಮೋಹನ್. ೨೦೧೨-೧೩ ಸಾಲಿನ ಎಲ್ಲ ವಿದ್ಯಾರ್ಥಿಗಳೂ ನಮ್ಮ ಪಾಠವನ್ನು ಕೇಳಿ ಖುಷಿಪಟ್ಟಿದ್ದಾರೆ. ಮರುವರ್ಷವೂ ಇದೇ ಪಾಠಗಳನ್ನು ನಡೆಸಿಕೊಟ್ಟ ಸಂತಸ ನಮ್ಮದು.

ಇಲ್ಲಿರುವ ಪಾಠಬರಹಗಳನ್ನು ನಮ್ಮ ಉಪನ್ಯಾಸಗಳಿಂದಲೇ ರೂಪಿಸಲಾಗಿದೆ. ಪುಟಮಿತಿಯ ಕಾರಣದಿಂದ ಪ್ರಯೋಗದ ಅಂಶಗಳನ್ನು ಇಲ್ಲಿ ಸೇರಿಸಿಲ್ಲ. ಆದ್ದರಿಂದ ನೀವು ಈ ಪಾಠಬರಹಗಳನ್ನು ಎದುರಿಗೆ ಕಂಪ್ಯೂಟರ್ ಇಟ್ಟುಕೊಂಡೇ ಓದಿ, ತಿಳಿದು ಕಲಿಯಲು ಯತ್ನಿಸಬೇಕು ಎಂಬುದು ನಮ್ಮ ಆತ್ಮೀಯ ಸಲಹೆ.

ಮೊದಲ ಆವೃತ್ತಿಯ ಎಲ್ಲ ಲೋಪಗಳನ್ನೂ ಈ ಪುಸ್ತಕ ಹೊಂದಿದೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆ ನೀಡಿ, ಪುಸ್ತಕವನ್ನು ಪರಿಷ್ಕರಿಸಲು ನೆರವಾಗಿ ಎಂದು ಮುಕ್ತವಾಗಿ ಕೇಳಿಕೊಳ್ಳುವೆವು.

`ಉಚಿತ ಪುಸ್ತಕ ಸಂಸ್ಕೃತಿ' ಚಳವಳಿಯ ಭಾಗವಾಗಿ ಪ್ರಕಟವಾಗುತ್ತಿರುವ ಈ ಪುಸ್ತಿಕೆಯನ್ನು ಬೆಂಬಲಿಸಿದ ತಮಗೆಲ್ಲರಿಗೂ ಮತ್ತೊಮ್ಮೆ ವಂದನೆಗಳು.

ಭರ್ರನೆ ಬದಲಾಗುತ್ತಿರುವ ಕಾಲಮಾನದಲ್ಲಿ ಉಚಿತ ಪುಸ್ತಕ ಸಂಸ್ಕೃತಿಯೂ ಒಂದು ಪುಟ್ಟ ಹೆಜ್ಜೆ.

ಬೇಳೂರು ಸುದರ್ಶನ 
ರಾಮನಾಥ ಜಿಪಿ ಮಯ್ಯ 
(ಟ್ರಸ್ಟೀಗಳು, ಮಿತ್ರಮಾಧ್ಯಮ)

* * *

ಸುರಾನಾ ಕಾಲೇಜಿನ ಕನ್ನಡ ವಿಭಾಗವು ಶಿಕ್ಷಣಕ್ಕೆ ಪೂರಕವಾಗುವ ಮೌಲ್ಯವರ್ಧನ ಚಟುವಟಿಕೆಗಳಲ್ಲಿ ಬಹಳ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾ ಬಂದಿದೆ. ಪಠ್ಯ ಮತ್ತು ಪಠ್ಯೇತರ ಸಂಬಂಧಿಯಾದ ಅನೇಕ ಕಾರ್ಯಕ್ರಮಗಳನ್ನು ನಡೆಸಿ, ಈ ಕಾರ್ಯಾಗಾರಗಳ ಫಲಶ್ರುತಿಯಾಗಿ ಅನೇಕ ಪುಸ್ತಕಗಳನ್ನೂ ಪ್ರಕಟಿಸಿದೆ. ಇಂದು ಬಿಡುಗಡೆಯಾಗುತ್ತಿರುವ `ಕಂಪ್ಯೂಟರ್ ಮತ್ತು ಕನ್ನಡ' ಎಂಬ ಈ ಪುಸ್ತಕ ವಿಭಾಗದ ಕಿರೀಟಕ್ಕೆ ಮತ್ತೊಂದು ಹೆಮ್ಮೆಯ ಗರಿ ಎಂದು ಹೇಳಿದರೆ ತಪ್ಪಲ್ಲ.

ಕಳೆದ ವರ್ಷ ಅಂದರೆ ೨೦೦೧೩-೧೪ರ ಸಾಲಿನ ಶೈಕ್ಷಣಿಕ ವರ್ಷದಲ್ಲಿ `ಮಿತ್ರಮಾಧ್ಯಮ ಟ್ರಸ್ಟ್'ನ ಸಹಯೋಗದೊಂದಿಗೆ ಮೂರನೆಯ ಸೆಮಿಸ್ಟರ್ ಬಿ.ಕಾಂ ಹಾಗೂ ಬಿ.ಬಿ.ಎಂ ವಿದ್ಯಾರ್ಥಿಗಳಿಗಾಗಿ ಕನ್ನಡ ಕಂಪ್ಯೂಟರ್ ಲೋಕದ ವಿವಿಧ ವಿಚಾರಗಳನ್ನು ತರಗತಿ ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ಕಲಿಸಿಕೊಡಲಾಯಿತು. ಸರ್ವಶ್ರೀ ಟಿ.ಜಿ.ಶ್ರೀನಿಧಿ, ಡಾ|| ಎ ಸತ್ಯನಾರಾಯಣ, ಡಾ|| ಯು.ಬಿ.ಪವನಜ, ಓಂಶಿವಪ್ರಕಾಶ್, ಎನ್‌ಎಎಂ ಇಸ್ಮಾಯಿಲ್ ಮತ್ತು ಬೇಳೂರು ಸುದರ್ಶನ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಇವರೆಲ್ಲರಿಗೆ ಕಾಲೇಜು ಮತ್ತು ವಿಭಾಗದ ಪರವಾಗಿ ಹೃತ್ಪೂರ್ವಕ ವಂದನೆಗಳು.

ಈ ಕಾರ್ಯಾಗಾರದಲ್ಲಿ ಮಾಡಿದ ಉಪನ್ಯಾಸಗಳನ್ನು ನಮ್ಮ ವಿಭಾಗ ಮಿತ್ರಮಾಧ್ಯಮದ ಸಹಯೋಗದೊಂದಿಗೆ ಹೊರತರುತ್ತಿದೆ. ಕಾರ್ಯಾಗಾರವನ್ನು ನಡೆಸಲು ಎಲ್ಲ ಬಗೆಯ ಉತ್ತೇಜನ ಹಾಗೂ ಮಾರ್ಗದರ್ಶನವನ್ನು ಇತ್ತ ನಮ್ಮ ಮಾಜಿ ಪ್ರಾಂಶುಪಾಲರಾದ ಶ್ರೀ ಎ.ಎಸ್.ಚಂದ್ರಮೌಳಿ ಅವರಿಗೆ ನಮ್ಮ ಕೃತಜ್ಞತೆಗಳು. ನಮಗೆ ಸದಾ ಉತ್ತೇಜನ ನೀಡಿ ಪ್ರೋತ್ಸಾಹಿಸುತ್ತಿರುವ ನಮ್ಮ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಅರ್ಚನಾ ಸುರಾನಾ ಮತ್ತು ನಮ್ಮ ಪ್ರಾಂಶುಪಾಲರಾದ ಡಾ|| ಬಿ.ಎಸ್. ಶ್ರೀಕಂಠ ಅವರನ್ನು ಪ್ರೀತಿಯಿಂದ ನೆನೆಯುತ್ತೇವೆ. ನಮಗೆ ಕಂಪ್ಯೂಟರ್ ಲ್ಯಾಬಿನಲ್ಲಿ ಎಲ್ಲ ಬಗೆಯ ಸಹಾಯವನ್ನು ಒದಗಿಸಿ ಕೊಟ್ಟ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಶ್ರೀ ಶ್ರೀನಿವಾಸ್, ಅಧ್ಯಾಪಕರು ಹಾಗೂ ಸಿಬ್ಬಂದಿಗಳನ್ನು ಮತ್ತು ವಿದ್ಯಾರ್ಥಿ ವೃಂದವನ್ನು ಪ್ರೀತಿಯಿಂದ ನೆನೆಯುತ್ತೇವೆ.

ಡಾ|| ವತ್ಸಲಾ ಮೋಹನ್
ಡಾ|| ವಿಶಾಲಾ ವಾರಣಾಶಿ
(ಕನ್ನಡ ವಿಭಾಗ, ಸುರಾನಾ ಕಾಲೇಜು)

0 comments:

Post a Comment