ಮುಕ್ತ/ಸ್ವತಂತ್ರ ತಂತ್ರಾಂಶ ಚಳುವಳಿ

'ಕಂಪ್ಯೂಟರ್ ಮತ್ತು ಕನ್ನಡ' ಕೃತಿಯಿಂದ ಆಯ್ದ ಅಧ್ಯಾಯ
ಓಂಶಿವಪ್ರಕಾಶ್ ಎಚ್.ಎಲ್

ಅಂಗೈಯಲ್ಲಿ ಇಂದು ಕಂಪ್ಯೂಟರ್ ಹಿಡಿದು ಜಗತ್ತಿನ ಆಗುಹೋಗುಗಳನ್ನೆಲ್ಲಾ ತಿಳಿಯುವ ನಮಗೆ ಅದು ಹೇಗೆ ಕೆಲಸ ಮಾಡುತ್ತದೆ ಎಂದು ಕೇಳಿದಾಕ್ಷಣ ಸಿಗುವ ಉತ್ತರ, ಅದರ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳ ಸಹಾಯದಿಂದ ಎಂಬುದು. ಸಿ.ಪಿಯು, ಮಾನಿಟರ್, ಕೀಬೋರ್ಡ್, ಮೌಸ್ ಹೀಗೆ ನಮ್ಮ ಕಣ್ಣೆದುರಿಗೆ ಕಾಣುವ ಯಂತ್ರಾಂಶಗಳು ಅಂದರೆ ಹಾರ್ಡ್‌ವೇರ್‌ಗಳು ಕಂಪ್ಯೂಟರಿನ ಬಾಹ್ಯರೂಪವನ್ನು ಬಿಂಬಿಸಿದರೆ, ಅದರೊಳಗೆ ಇರುವ ಸಾಫ್ಟ್‌ವೇರ್ ಎಂಬ ತಂತ್ರಾಂಶ ಈ ಎಲ್ಲ ಯಂತ್ರಾಂಶಗಳಿಗೆ ಜೀವ ಕೊಡುವ ಕೆಲಸ ಮಾಡುತ್ತದೆ. ಕಂಪ್ಯೂಟರ್ ಕೊಳ್ಳುವಾಗ ನಾವು ಕೇವಲ ಹಾರ್ಡ್‌ವೇರ್‌ಗೆ ಹಣಕೊಡದೆ, ಅದನ್ನು ಕೆಲಸ ಮಾಡುವಂತೆ ಮಾಡುವ ತಂತ್ರಾಂಶಕ್ಕೆ ಕೂಡ ಹಣ ಕೊಡುವ ಅವಶ್ಯಕತೆ ಇದೆ. ಯಾವುದೋ ಕಂಪೆನಿಯ ಬ್ರಾಂಡೆಡ್ ಕಂಪ್ಯೂಟರ್ ಕೊಂಡ ಸಮಯದಲ್ಲಿ ತಂತ್ರಾಂಶ ಅದರ ಜೊತೆಗೆ ಸಿಗುತ್ತದೆ (ಲ್ಯಾಪ್‌ಟಾಪ್‌ಗಳಲ್ಲಂತೂ ಇದು ಸಾಮಾನ್ಯ). ಆದರೆ ನಮಗೆ ತಿಳಿದಿರುವ ಅಂಗಡಿಯವನ ಬಳಿ ಕಡಿಮೆ ಬೆಲೆಗೆ ಕಂಪ್ಯೂಟರ್ ಕೊಂಡಾಗ ಅಥವಾ ನಾವೇ ಒಂದು ಕಂಪ್ಯೂಟರ್ ಅನ್ನು ಅಸೆಂಬಲ್ (ಜೋಡಿಸಿ ಸಿದ್ಧಪಡಿಸುವುದು) ಮಾಡಿದಾಗ ತಂತ್ರಾಂಶವನ್ನು ಕೊಂಡು ತಂದು ಸ್ಥಾಪಿಸಬೇಕಾಗುತ್ತದೆ. ಹಣ ಎಷ್ಟು ಕಡಿಮೆ ಖರ್ಚುಮಾಡಲು ಸಾಧ್ಯವೋ ಅದಕ್ಕೆ ಬೇಕಾಗಿರುವುದನ್ನೆಲ್ಲಾ ಮಾಡುವ ಆತುರದಲ್ಲಿ, ಅಂಗಡಿಯವನ ಬಳಿ ಇರುವ ಸಾಫ್ಟ್‌ವೇರ್, ಗೆಳೆಯರ ಅಥವಾ ಪಕ್ಕದ ಮನೆಯವರ ಬಳಿ ಇರುವ ಸಾಫ್ಟ್‌ವೇರ್ ನಕಲು ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಳ್ಳುವುದು ಸಾಮಾನ್ಯ. ಪೈರಸಿಯ ಭೂತವನ್ನು ನಿಧಾನವಾಗಿ ಆರಾಧಿಸುವುದನ್ನು ಕಲಿಯುವುದು ಇಲ್ಲಿಂದಲೇ.

ಒಂದಾದ ನಂತರ ಮತ್ತೊಂದು ಹೀಗೆ ಕಂಪ್ಯೂಟರ್ ಬಳಕೆಯ ಸಮಯವೆಲ್ಲಾ, ಯಾವುದೋ ಕಂಪೆನಿಯ ಸಾವಿರಾರು ರೂಪಾಯಿ ಬೆಲೆಬಾಳುವ ತಂತ್ರಾಂಶಗಳನ್ನು ಬಳಸಲೇ ಬೇಕು ಎಂದಾದರೆ ಬೇರೆ ದಾರಿ ಕಾಣದಿರುವುದು ಸಹಜವೇ. ಆದರೆ ಕಾನೂನಿನ ಪ್ರಕಾರ ಪೈರಸಿಯ ಮೊರೆ ಹೋಗುವುದು ಶಿಕ್ಷಾರ್ಹ ಅಪರಾಧ. ಜೊತೆಗೆ ಆ ತಂತ್ರಾಂಶ ಸೃಷ್ಟಿಸಿದ ಕಂಪೆನಿಗೂ ಮೋಸ ಮಾಡಿದಂತೆ ಆಗುತ್ತದೆ ಅಲ್ಲವೇ? ನೀವೇ ಆ ಕಂಪೆನಿಯ ಮಾಲೀಕನಾಗಿದ್ದು, ನಿಮ್ಮ ಗೆಳೆಯರೋ, ಇನ್ಯಾರೋ ತಂತ್ರಾಂಶವನ್ನು ಕದ್ದುಮುಚ್ಚಿ ಬಳಸಿಕೊಂಡರೆ ನಿಮಗೆ ಏನನ್ನಿಸಬಹುದು? ಸ್ವಲ್ಪ ಯೋಚಿಸಿ. ಇದೆಲ್ಲದರ ಜೊತೆಗೆ ಈ ತಂತ್ರಾಂಶಗಳನ್ನು ಬದಲಾಯಿಸಿ, ನಿಮಗೆ ಬೇಕಾದ ರೀತಿಯಲ್ಲಿ ಅವನ್ನು ಪುನಃ ಅಭಿವೃದ್ಧಿಪಡಿಸಿಕೊಳ್ಳುವ ಸಾಧ್ಯತೆಗಳಿವೆಯೇ ಎಂಬುದನ್ನೂ ಪರೀಕ್ಷಿಸಿ. ಖಾಸಗಿ ಸಂಸ್ಥೆಗಳು ಸೃಷ್ಟಿಸುವ ತಂತ್ರಾಂಶಗಳನ್ನು ಬಳಸುವುದರಿಂದ ಹಿಡಿದು, ಅವನ್ನು ಮರುಬಳಕೆಗೆ ತರುವವರೆಗೂ ಎಲ್ಲದಕ್ಕೂ ಒಂದಲ್ಲಾ ಒಂದು ರೀತಿಯ ಲೈಸೆನ್ಸ್ (ಪರವಾನಗಿ) ಪಡೆಯುವುದು ಅನಿವಾರ್ಯ. ಬಳಕೆಗೆ ಬಳಕೆದಾರನ ಲೈಸೆನ್ಸ್, ತಂತ್ರಾಂಶ ಅಭಿವೃದ್ಧಿ ಮಾಡಲು ಡೆವೆಲಪರ್ ಲೈಸೆನ್ಸ್ - ಹೀಗೆ ಒಬ್ಬ ವ್ಯಕ್ತಿ ಕಂಪ್ಯೂಟರ್ ಬಳಕೆ ಮಾಡುವುದನ್ನು ಈ ವ್ಯವಸ್ಥೆ ಅನುವು ಮಾಡಿಕೊಡುತ್ತದೆಯೇ ಹೊರತು, ಕಂಪ್ಯೂಟರ್ ಕೊಂಡ ವ್ಯಕ್ತಿಯೇ ಆ ಕಂಪ್ಯೂಟರ್ ಅನ್ನು ಅಥವಾ ಅದಕ್ಕೂ ಮಿಗಿಲಾದದ್ದನ್ನು ಸೃಷ್ಟಿಸುವ ವ್ಯವಸ್ಥೆ, ಸವಲತ್ತು, ಜ್ಞಾನವನ್ನು ಈ ಲೈಸೆನ್ಸ್‌ಗಳೊಡನೆ ಹಂಚಿಕೊಳ್ಳುವುದಿಲ್ಲ.

ಸಾಫ್ಟ್‌ವೇರ್ ಅಥವಾ ತಂತ್ರಾಂಶಗಳನ್ನು ಯಾವುದೇ ಒಂದು ಕಂಪೆನಿಯಿಂದ ಖರೀದಿ ಮಾಡಿ ಬಳಸುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದದ್ದೇ ಆಗಿದೆ. ಆದರೆ ಹೆಚ್ಚಿನ ಹಣ ಕೊಟ್ಟು ಅಥವಾ ಈಗಾಗಲೇ ತನ್ನ ಗೆಳೆಯನಲ್ಲಿರುವ ತಂತ್ರಾಂಶವನ್ನು ನಕಲು ಮಾಡಿ ಬಳಸುವುದು ಕೂಡ ಕಂಪ್ಯೂಟರ್ ಬಳಕೆದಾರರ ನಡುವೆ ಸರ್ವೇ ಸಾಮಾನ್ಯ. ಸಿನೆಮಾ, ಸಂಗೀತ ಇತ್ಯಾದಿಗಳನ್ನು ನಕಲು ಮಾಡಿ ಮಾರುವುದು ಅಥವಾ ಬಳಸುವುದು ಹೇಗೆ ಅಪರಾಧವೋ ಅದೇ ರೀತಿ ಕಂಪ್ಯೂಟರ್ ತಂತ್ರಾಂಶಗಳನ್ನೂ ಬಳಸುವುದು ತಪ್ಪು ಎಂಬುದನ್ನು ಎಷ್ಟೋ ಬಾರಿ ಗೊತ್ತಿದ್ದೂ ಅನೇಕರು ಜಾಣ ಮರೆವನ್ನು ಪ್ರದರ್ಶಿಸುತ್ತಾರೆ. ಇದರ ಜೊತೆಗೆ ಖಾಸಗೀ ತಂತ್ರಾಂಶಗಳಿಗೆ ಪರ್ಯಾಯವಾಗಿರುವ, ಜನರಿಂದ ಜನರಿಗಾಗಿ, ಜನರಿಗೋಸ್ಕರವೇ ಇರುವ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನು ಕೇವಲ ಪರಿಣಿತರಿಗೆ ಮಾತ್ರ ಎನ್ನುವ ತಪ್ಪು ತಿಳಿವಳಿಕೆ, ಯಾವ ವಯಸ್ಸಿನ ವ್ಯಕ್ತಿಯೇ ಆಗಲಿ ತನ್ನ ಕ್ರಿಯಾತ್ಮಕತೆಯನ್ನು (creativity) ತಂತ್ರಜ್ಞಾನ, ತಂತ್ರಾಂಶಗಳ ಜೊತೆಗೆ ಕೆಲಸ ಮಾಡುವಾಗ ಬಳಸಬಹುದು, ಅದರಿಂದ ತನಗೆ, ಸಮಾಜಕ್ಕೆ ಬೇಕಿರುವ ಅನೇಕ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಿದೆ ಎನ್ನುವ ಮಾಹಿತಿ ಕೊರತೆ ಇತ್ಯಾದಿ ತಂತ್ರಾಂಶ ಮತ್ತು ತಂತ್ರಜ್ಞಾನ ಸ್ವಾವಲಂಭನೆಯನ್ನು ಸಾಧಿಸುವುದಕ್ಕೆ ಮೂಲ ತೊಡಕುಗಳಾಗಿವೆ.

ಪ್ರತಿಯೊಂದೂ ವಸ್ತುವೂ ಚುಕ್ಕಾಸಿನ ಬೆಲೆಗಾದರೂ ಮಾರಾಟವಾಗುವ ಈ ಕಾಲದಲ್ಲಿ, ಎಲ್ಲದನ್ನೂ ಕಡಿಮೆ ಬೆಲೆಯಲ್ಲಿ ಅಥವಾ ಉಚಿತವಾಗಿ ಪಡೆಯುವ ಈ ಕಾಲದಲ್ಲಿ, ಸಮುದಾಯವೊಂದು ಮುಕ್ತವಾಗಿ, ಸ್ವತಂತ್ರವಾಗಿ ತಂತ್ರಾಂಶಗಳನ್ನು ವಿಶ್ವದಾದ್ಯಂತ ಪಸರಿಸುವಂತೆ ಮಾಡುತ್ತಿದೆ. ಜೊತೆಗೆ ತಂತ್ರಾಂಶ ತನ್ನ ಬಳಕೆದಾರನ ಕಂಪ್ಯೂಟರಿನಲ್ಲಿ ಮಾಡುವ ಕಾರ್ಯಗಳು ಇತ್ಯಾದಿಗಳ ಬಗ್ಗೆ ಪಾರದರ್ಶಕತೆಯನ್ನು ಉಳಿಸಿಕೊಳ್ಳುವದರಲ್ಲಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು ಬೇರೆಲ್ಲ ತಂತ್ರಾಂಶಗಳಿಗಿಂತ ಮುಂದಿವೆ.

ಸಾಫ್ಟ್‌ವೇರ್ ಜಗತ್ತಿನಲ್ಲಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ (FOSS)  ಇತ್ತೀಚಿನ ವರ್ಷಗಳ ಬೆಳವಣಿಗೆಗೆಳನ್ನು ನೋಡಿದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ದೈತ್ಯ ಸಾಫ್ಟ್‌ವೇರ್ ಕಂಪನಿಗಳೂ ಇವನ್ನು ಯಥೇಚ್ಛವಾಗಿ ತಮ್ಮ ಕಾರ್ಯವ್ಯಾಪ್ತಿಗೆ ಅಳವಡಿಸಿಕೊಂಡಿವೆ.  ಇದಲ್ಲದೆ ಮುಕ್ತ ಮಾಹಿತಿ (open content), ಮುಕ್ತ ಸಂಸ್ಕೃತಿ (open culture) ನಂತಹ ಚಳುವಳಿಗಳಿಗೂ ಇದು ನಾಂದಿ ಹಾಡಿದ್ದು, ಇದರಿಂದ ಪ್ರಾರಂಭವಾಗಿರುವ ಅನೇಕ ಯೋಜನೆಗಳನ್ನು ಇಂಟರ್‌ನೆಟ್ ಹುಡುಕಿದಾಗ ಸುಲಭವಾಗಿ ತಿಳಿಯುತ್ತದೆ.

ಇತಿಹಾಸ
ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಚಳುವಳಿಯು ಅಮೆರಿಕಾ ಸಂಯುಕ್ತ ಸಂಸ್ಥಾನದ ಕಂಪ್ಯೂಟರ್ ಸೈನ್ಸ್ ಲ್ಯಾಬೋರೇಟರಿಗಳಲ್ಲಿ (ಸ್ಟಾನ್‌ಫರ್ಡ್, ಬರ್ಕ್ಲಿ, ಕಾರ್ನೆಗಿ ಮೆಲ್ಲನ್ ಮತ್ತು ಎಂಐಟಿ) ೧೯೫೦ ಮತ್ತು ೧೯೭೦ರ ದಶಕಗಳಲ್ಲಿ ಶುರುವಾದ 'ಹ್ಯಾಕರ್' ಸಂಸ್ಕೃತಿಯೊಂದಿಗೆ ಹುಟ್ಟಿಕೊಂಡಿತು.

ಈ ಹ್ಯಾಕರ್ ಸಮುದಾಯದಲ್ಲಿದ್ದ ಪ್ರೋಗ್ರಾಮರ್‌ಗಳ ಸಂಖ್ಯೆ ಚಿಕ್ಕದಾಗಿದ್ದು, ಒಬ್ಬರನ್ನೊಬ್ಬರು ಬಹಳ ಹತ್ತಿರದಿಂದ ಬಲ್ಲವರಾಗಿದ್ದರು. ತಾವು ಅಭಿವೃದ್ಧಿಪಡಿಸಿದ ಪ್ರೋಗ್ರಾಮುಗಳ ಮೂಲ(code)ವನ್ನು ಸಮುದಾಯದ ಇತರರೊಡನೆ ಹಂಚಿಕೊಳ್ಳುವುದು ಸಾಮಾನ್ಯದ ಸಂಗತಿಯಾಗಿತ್ತು. ಸಮುದಾಯದ ಯಾರೊಬ್ಬರಾದರೂ ಯಾವುದೇ ತಂತ್ರಾಂಶದ ಮೂಲವನ್ನು ಉತ್ತಮಗೊಳಿಸಿದ್ದಲ್ಲಿ ಅದನ್ನು ಇತರರೊಡನೆ ಹಂಚಿಕೊಳ್ಳಬೇಕಾದ್ದು ಸಮುದಾಯದ ನಿಯಮವಾಗಿತ್ತು. ಉದ್ಧರಿಸಿದ ತಂತ್ರಾಂಶ ಮೂಲವನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಇಚ್ಛಿಸಿದರೆ, ಅದನ್ನು ಉದ್ಧಟತನ ಎನ್ನಲಾಗುತ್ತಿತ್ತು. ಏಕೆಂದರೆ ಅದನ್ನು ಉದ್ಧರಿಸುವಲ್ಲಿ ನಿಮ್ಮ ಗೆಳೆಯರ ಸಹಾಯ ಸಮುದಾಯದ ಮುಖೇನ ದೊರೆತಿದ್ದು, ಸಮುದಾಯಕ್ಕೆ ಮತ್ತು ಗೆಳೆಯರಿಗೆ ಪ್ರತ್ಯುಪಕಾರ ಮಾಡಬೇಕಾದ್ದು ಧರ್ಮ.

FOSS ಚಳವಳಿ ಕಂಪ್ಯೂಟರ್ ಉದ್ದಿಮೆಯ ಪ್ರಾರಂಭದ ವೇಳೆಯಲ್ಲೇ ಶುರುವಾಯಿತು, ಆದರೆ ಅದಕ್ಕೆ ಬೇಕಾದ ರೂಪುರೇಷೆಗಳನ್ನು ರೂಪಿಸಿರಲಿಲ್ಲ ಅಥವಾ ಅದರ ಪರಿಕಲ್ಪನೆ ಇರಲಿಲ್ಲ. ೧೯೭೦ರ ಕೊನೆ ಮತ್ತು ೧೯೮೦ ಮೊದಲ ಭಾಗದಲ್ಲಿ ತಂತ್ರಾಂಶಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಖಾಸಗಿ ಸಾಫ್ಟ್‌ವೇರ್ ಉದ್ಯಮದ ಜೊತೆಗಿನ ವಿರಸಕ್ಕೆ ಕಾರಣವಾಗುತ್ತಾ ಬಂತು. ಬಿಲ್ ಗೇಟ್ಸ್ ಬರೆದ An open letter to hobbyists ಎಂಬ ಪತ್ರದಲ್ಲಿ  `ಹವ್ಯಾಸಿ ತಂತ್ರಜ್ಞರು ಬೇರೆಯವರು ಬರೆದ ತಂತ್ರಾಂಶಗಳನ್ನು ಬಳಸುವುದು ತಂತ್ರಾಂಶವನ್ನು ಕದ್ದಂತಲ್ಲವೇ? ಕಂಪ್ಯೂಟರ್ ಹಾರ್ಡ್‌ವೇರ್‌ಗೆ ಹಣ ವ್ಯಯಿಸುವಂತೆ ಅದಕ್ಕೆ ಬೇಕಾದ ತಂತ್ರಾಂಶವನ್ನು ಅಭಿವೃದ್ಧಿಪಡಿಸುವವರೂ ಅದನ್ನು ಸೃಷ್ಟಿಸಲು ವ್ಯಯಿಸಿದ ಸಮಯಕ್ಕಾದರೂ ಸರಿಯಾದ ಬೆಲೆಯನ್ನು ಪಡೆಯುತ್ತಿದ್ದಾರಾ ಎಂದು ಯಾರಾದರೂ ವಿಚಾರಿಸಿದ್ದೀರಾ?' ಎಂದು ಸಾಫ್ಟ್‌ವೇರ್ ಇತರರೊಡನೆ ಹಂಚಿಕೊಳ್ಳುವುದಕ್ಕೆ ಮಾತ್ರವೇ ಎಂಬ ಪ್ರಶ್ನೆಯನ್ನು ಎತ್ತಿದರು.

ಇದಾದ ನಂತರ ಮುಂದಿನ ದಿನಗಳಲ್ಲಿ ಖಾಸಗೀ ತಂತ್ರಾಂಶಗಳ ಉದ್ಯಮ ವೇಗವಾಗಿ ಬೆಳೆಯಲಿಕ್ಕೆ ಪ್ರಾರಂಭವಾಯ್ತು. MITಯ ಆರ್ಟಿಫಿಷಿಯಲ್ ಇಂಟೆಲಿಜನ್ಸ್ ಲ್ಯಾಬ್‌ನಲ್ಲಿ ೧೯೮೦ರ ಮೊದಲ ಭಾಗದಲ್ಲಿ ಸಿಂಬಾಲಿಕ್ಸ್ ಎಂಬ ಕಂಪೆನಿ ಹುಟ್ಟಿಕೊಂಡಿತು. ಅದುವರೆಗೂ ಉಚಿತವಾಗಿ ಲಭ್ಯವಿದ್ದ LISP ಪ್ರೋಗ್ರಾಮಿಂಗ್ ಭಾಷೆಯ ಮೂಲವನ್ನು ತನ್ನದಾಗಿಸಿಕೊಂಡ ಈ ಕಂಪೆನಿ ಅದನ್ನು ಖಾಸಗಿ ಸ್ವತ್ತನಾಗಿಸಿಕೊಂಡಿತು. ಇದರೊಂದಿಗೆ ತಂತ್ರಾಂಶಗಳನ್ನು ಇತರರೊಡನೆ ಹಂಚಿಕೊಳ್ಳುತ್ತಿದ್ದ ಸಂಸ್ಕೃತಿಯನ್ನು MITಯಲ್ಲಿ ಕೊನೆಯಾಗಿಸಿತು. ಇದರ ಬಗ್ಗೆ ಉಲ್ಲೇಖಗಳನ್ನು Moody, Glyn ಅವರ `Rebel Code' ಪುಸ್ತಕದಲ್ಲಿ ಓದಬಹುದು ಮತ್ತು ವಿಕಿಪೀಡಿಯದಲ್ಲೂ ಕೂಡ ಇದರ ಉಲ್ಲೇಖಗಳಿವೆ.

ಇದರ ಜೊತೆ ಜೊತೆಗೆ ಸಾಫ್ಟ್‌ವೇರ್ ಉದ್ದಿಮೆಗಳು ತಂತ್ರಾಂಶವನ್ನು ಅದರ ಮೂಲ ಸೋರ್ಸ್ ಕೋಡ್ ಕೊಡುವ ಅಭ್ಯಾಸವನ್ನು ತಪ್ಪಿಸಲು ಕಂಪ್ಯೂಟರ್ ಹಾರ್ಡ್‌ವೇರ್‌ನಲ್ಲಿ ಕೆಲಸ ಮಾಡುವ ಬೈನರಿ ಫಾರ್ಮ್ಯಾಟ್‌ಗೆ ತಂತ್ರಾಂಶಗಳನ್ನು ಪರಿವರ್ತಿಸಿ, ಹಾರ್ಡ್‌ವೇರ್ ಜೊತೆಗೇ ಮಾರುವುದನ್ನು ಪ್ರಾರಂಭಿಸಿದರು. ಜೊತೆಗೆ ೧೯೮೦ರಲ್ಲಿ ಕಾಪಿರೈಟ್ ಕಾನೂನನ್ನು ಕಂಪ್ಯೂಟರ್ ತಂತ್ರಾಂಶದ ಮೇಲೂ ಹೇರುವಂತೆ ಮಾಡಿದವು. ನೀವು ಈಗ ಖರೀದಿಸುವ ಕಂಪ್ಯೂಟರಿನ ಜೊತೆಗೆ ಅದಕ್ಕೆ ಬೇಕಿರುವ ಆಪರೇಟಿಂಗ್ ಸಿಸ್ಟಂ ಕೂಡ ದೊರೆಯುತ್ತಿರುವುದು ಇದರಿಂದಾಗಿಯೇ. ಈ ಬೆಳವಣಿಗೆ ಹವ್ಯಾಸಿ ಹ್ಯಾಕರ್ ಸಮುದಾಯದಲ್ಲಿ ತಲ್ಲಣವೆಬ್ಬಿಸಿದ ಕಾರಣ, ಸ್ವತಂತ್ರ ತಂತ್ರಾಂಶ ಫೌಂಡೇಷನ್ (FSF) ಮತ್ತು ಈಗ ನಮ್ಮ ಮುಂದಿರುವ FOSS ಸಂಸ್ಕೃತಿಯ ಸೃಷ್ಟಿಗೆ ಕಾರಣವಾಯ್ತು.

MITಯ ಸದಸ್ಯ ರಿಚರ್ಡ್ ಸ್ಟಾಲ್‌ಮನ್ ಈ ಮೇಲೆ ತಿಳಿಸಿದ ಸಂಗತಿಗಳಿಂದ ವಿಚಲಿತಗೊಂಡು, ಖಾಸಗೀ ತಂತ್ರಾಂಶಗಳ ಬಗ್ಗೆ ತನ್ನ ವಿಚಾರಗಳಿಗೆ ಒಂದು ರೂಪ ಕೊಡಲು ಯತ್ನಿಸಿದಾಗ ಸ್ವತಂತ್ರ ಆಪರೇಟಿಂಗ್ ಸಿಸ್ಟಂ ಒಂದು ಬೇಕು ಎನ್ನುವ ನಿಶ್ಚಯಕ್ಕೆ ಬಂದರು. ತನ್ನ ಕಂಪ್ಯೂಟರ್‌ಗೆ ಎಂದು ಬರೆದುಕೊಂಡ ತಂತ್ರಾಂಶವನ್ನು ತನ್ನ ಗೆಳೆಯರೊಂದಿಗೆ ಮುಕ್ತವಾಗಿ ಹಂಚಿಕೊಂಡರು. ತನ್ನ ಬಿಡುವಿನ ವೇಳೆಯಲ್ಲಿ ಮನೆಯ ಕಂಪ್ಯೂಟರ್‌ನಲ್ಲಿ ಬರೆದ ತನ್ನ ತಂತ್ರಾಂಶ ಇತರ ಗೆಳೆಯರಿಗೆ ಬೇಕಾದೀತು, ಅವರು ಅದನ್ನು ಉಪಯೋಗಿಸಿ ಆತನಿಗೆ ತಮ್ಮ ಅನುಭವವನ್ನು ಹಂಚಿಕೊಂಡಾರು ಎಂಬುದು  ಇವರ ಆಶಯವಾಗಿತ್ತು. ಆದರೆ ತಮಗೆ ಕೆಲಸ ಕೊಡುವ ಕಂಪೆನಿಗಳು ನೀನು ಬರೆದ ಎಲ್ಲ ತಂತ್ರಾಂಶಗಳು ಕಂಪೆನಿಗೆ ಸೇರಿದವಾಗಿದ್ದು, ಅದನ್ನು ನೀನು ಮನಃಬಂದಂತೆ ಬೇರೆಯವರೊಡನೆ ಹಂಚಿಕೊಳ್ಳುವ ಹಾಗಿಲ್ಲ ಎನ್ನುವುದು  ತನ್ನ ಸ್ವಾತಂತ್ರ್ಯವನ್ನು ಕಸಿದಂತೆ ಎನಿಸಿ ೧೯೮೩ರಲ್ಲಿ ಸ್ವತಂತ್ರ ತಂತ್ರಾಂಶ ಆಂದೋಲನವನ್ನೇ ಪ್ರಾರಂಭಿಸಿದರು. GNU Project ತಮ್ಮ ಕನಸಿನ ಸ್ವತಂತ್ರ ಆಪರೇಟಿಂಗ್ ಸಿಸ್ಟಂ ಅನ್ನು ಅಭಿವೃದ್ಧಿಪಡಿಸಲು ಈ ಸಮಯದಲ್ಲಿ ಜನರಿಗೆ ಪರಿಚಯಿಸಿದ ಸ್ಟಾಲ್‌ಮನ್, ಕಂಪ್ಯೂಟರ್ ಉದ್ಯಮದ ಬೆಳವಣಿಗೆಗಳು ಅದರ ಬಳಕೆದಾರನ ಸ್ವಾತಂತ್ರ್ಯವನ್ನು ಕಸಿಯುತ್ತವೆ ಮತ್ತು ನಮ್ಮ ಕಂಪ್ಯೂಟರ್ ಸಮುದಾಯದ  ಸಂಸ್ಕೃತಿಯನ್ನು ಹಾಳುಗೆಡವುತ್ತಿವೆ ಎಂದು ಸಾರಿದರು. ಗ್ನು ಆಪರೇಟಿಂಗ್ ಸಿಸ್ಟಂನ ಅಭಿವೃದ್ಧಿ ಜನವರಿ ೧೯೮೪ರಲ್ಲಿ ಪ್ರಾರಂಭವಾಯಿತು ಮತ್ತು ಈ ಅಭಿವೃದ್ಧಿ ಕಾರ್ಯವನ್ನು ಬೆಂಬಲಿಸಲು ಮತ್ತು ಸ್ವತಂತ್ರ ತಂತ್ರಾಂಶ ಚಳುವಳಿಯನ್ನು ಪ್ರಚುರ ಪಡಿಸಲು ಅಕ್ಟೋಬರ್ ೧೯೮೫ರಲ್ಲಿ ಸ್ವತಂತ್ರ ತಂತ್ರಾಂಶ ಫೌಂಡೇಷನ್ (FSF) ಅನ್ನು ರಚಿಸಲಾಯಿತು. ಸ್ಟಾಲ್‌ಮನ್ ಸ್ವತಂತ್ರ ತಂತ್ರಾಂಶದ ವ್ಯಾಖ್ಯಾನವನ್ನೂ ಮತ್ತು ಕಾಪಿರೈಟ್‌ಗಳಿಂದ ಸಾಫ್ಟ್‌ವೇರ್‌ಗಳನ್ನು ಮುಕ್ತ ಗೊಳಿಸಿ ಎಲ್ಲರಿಗೂ ಸಾಫ್ಟ್‌ವೇರ್ ದೊರೆಯುವಂತೆ ಮಾಡುವ ಪರಿಕಲ್ವನೆಯಾದ ಕಾಪಿಲೆಫ್ಟ್ (copyleft) ಅನ್ನು ಪರಿಚಯಿಸಿದರು.

ಕಂಪ್ಯೂಟರ್ ಇತ್ಯಾದಿಗಳನ್ನು ಖರೀದಿಸಿದ ಜನರು, ಅದನ್ನು ನಡೆಸಲು ಬೇಕಿರುವ ತಂತ್ರಾಂಶಗಳನ್ನು ತಾವಾಗಿಯೇ ಅಭಿವೃದ್ಧಿಪಡಿಸಿ, ಅದನ್ನು ಬೇರೆಯವರೊಡನೆ ಹಂಚಿಕೊಂಡು, ಇತರರೂ ಅಷ್ಟೇ ಸ್ವತಂತ್ರವಾಗಿ ತಮಗೆ ದೊರೆತ ಹಾಗೂ ತಾವೇ ಅಭಿವೃದ್ಧಿಪಡಿಸಿದ ತಂತ್ರಾಂಶವನ್ನು ಮತ್ತೆ ಇನ್ನಿತರರಿಗೂ ಹಂಚಿಕೊಳ್ಳುವ, ಒಂದು ಡಿಸ್ಕ್‌ನಿಂದ ಇನ್ನೊಂದಕ್ಕೆ ಅದನ್ನು ಕಾಪಿ ಮಾಡುವ ಇತ್ಯಾದಿ ಸ್ವಾತಂತ್ರ್ಯಗಳನ್ನು `ಜನರಲ್ ಪಬ್ಲಿಕ್ ಲೈಸೆನ್ಸ್ (GPL)'  ಎಂಬ ಪರವಾನಗಿಯೊಂದಿಗೆ ಒದಗಿಸುವುದೇ 'ಸ್ವತಂತ್ರ ತಂತ್ರಾಂಶ ಆಂದೋಲನ'ದ ಮುಖ್ಯ ಉದ್ದೇಶವಾಗಿತ್ತು. ಇದರ ಒಂದು ಭಾಗವಾಗಿ ಪ್ರಾರಂಭಗೊಂದ ಗ್ನು ಯೋಜನೆ (GNU - Gnu is Not Unix) ಕಂಪ್ಯೂಟರ್ ತಂತ್ರಾಂಶಗಳ ಅಭಿವೃದ್ಧಿಗೆ ಬೇಕಾದ ಮೂಲ ತಂತ್ರಾಂಶಗಳನ್ನು ಸಮಾನ ಮನಸ್ಕ ಜನರ ಸಹಾಯದಿಂದ ಅಭಿವೃದ್ಧಿಪಡಿಸುವಲ್ಲಿ ಹೆಜ್ಜೆ ಇಟ್ಟಿತು. ಇದೇ ಜನರ ಗುಂಪು ಮುಂದೆ ದೊಡ್ಡ ಸಮುದಾಯವಾಗಿ ಬೆಳೆಯತೊಡಗಿತು. ಮುಂದಿನ ಒಂದು ದಶಕದಲ್ಲಿ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂಗೆ ಬೇಕಾದ ಅದೆಷ್ಟೋ ಮಹತ್ವದ ಟೂಲ್‌ಗಳನ್ನು ಈ ಯೋಜನೆ ಅಭಿವೃದ್ಧಿಪಡಿಸಿದರೂ, ಆಪರೇಟಿಂಗ್ ಸಿಸ್ಟಂಗೆ ಹೃದಯ ಭಾಗ ಎನ್ನಬಹುದಾದ ಕರ್ನೆಲ್‌ನ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ.

೧೯೯೧ರಲ್ಲಿ  ಹೆಲ್ಸಿಂಕಿ ವಿಶ್ವವಿದ್ಯಾನಿಲಯದಲ್ಲಿ ೨ನೇ ವರ್ಷದ ವಿದ್ಯಾರ್ಥಿಯಾಗಿದ್ದ ಲಿನಸ್ ಟೋರ್ವಾಲ್ಡ್  ತನ್ನ ವಿಶ್ವವಿದ್ಯಾನಿಲಯದ ಕಂಪ್ಯೂಟರ್‌ಗಳನ್ನು ಸುಲಭವಾಗಿ ಒಂದು ಕಡೆ ಕುಳಿತು ನೆಟ್‌ವರ್ಕ್ ಮೂಲಕ ಸಂಭಾಳಿಸುವುದಕ್ಕೊಸ್ಕರ ಯುನಿಕ್ಸ್‌ನಂತಹ ಕರ್ನೆಲ್ ಒಂದನ್ನು ಬರೆದು ಹವ್ಯಾಸಿ ತಂತ್ರಜ್ಞರ ಸಮುದಾಯದ ಜೊತೆಗೆ ಹಂಚಿಕೊಂಡರು. ಮುಂದೆ ಇದೇ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂನ ಸೃಷ್ಟಿಗೆ ಕಾರಣವಾಯ್ತು.

ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಎಂದರೇನು?
ಡೇವಿಡ್ ಹೀಲರ್ ಪ್ರಕಾರ ಸಂಕ್ಷಿಪ್ತವಾಗಿ ಹೇಳಬೇಕೆಂದರೆ,ಓಪನ್(ಮುಕ್ತ) ಸೋರ್ಸ್ ತಂತ್ರಾಂಶ/ಸ್ವತಂತ್ರ (free) ತಂತ್ರಾಂಶ ಯೋಜನೆಗಳು ತಮ್ಮ ಪರವಾನಗಿ/ಕೃತಿಸಾಮ್ಯಗಳ ಮೂಲಕ  ಕಂಪ್ಯೂಟರ್ ಬಳಕೆದಾರರಿಗೆ ತಂತ್ರಾಂಶಗಳನ್ನು ಯಾವುದೇ ಕಾರ್ಯಗಳಿಗೆ ಬಳಸುವ, ಅದನ್ನು ಅಭ್ಯಸಿಸುವ, ಬದಲಾಯಿಸುವ ಮತ್ತು ಇತರರೊಡನೆ ಮೂಲ ರೂಪದಲ್ಲಿ ಅಥವಾ ಬದಲಾಯಿಸಿ ಹಂಚಿಕೊಳ್ಳುವ ಸ್ವಾತಂತ್ರ್ಯವನ್ನು ನೀಡುತ್ತವೆ (ಈ ಹಿಂದೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ ತಂತ್ರಜ್ಞರಿಗೆ ಯಾವುದೇ ರೀತಿಯ ಗೌರವ ಹಣ ನೀಡದೆ).

ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ತತ್ವಜ್ಞಾನ (Philosophy)
ಇದು ಸ್ವತಂತ್ರ ತಂತ್ರಾಂಶ ಫೌಂಡೇಶನ್ (FSF) ಮತ್ತು ಓಪನ್ ಸೋರ್ಸ್ ಇನಿಶಿಯೇಟೀವ್ (OSI) ತತ್ವಜ್ಞಾನಗಳೆಂಬ ನಾಣ್ಯದ ಎರಡು ಮುಖಗಳಿದ್ದಂತೆ.

ಸ್ವತಂತ್ರ ತಂತ್ರಾಂಶ ಫೌಂಡೇಶನ್‌ನ (FSF) ಫಿಲಾಸಫಿ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಇದರ ಇತಿಹಾಸವನ್ನು ಮುಂದಿನ ಭಾಗಗಳಲ್ಲಿ ವಿವರಿಸಲಾಗಿದ್ದು, ಚಳುವಳಿಯಲ್ಲಿ ಬಹುಮುಖ್ಯ ಪಾತ್ರವನ್ನು ಹೊಂದಿದೆ.

`ಸ್ವತಂತ್ರ ತಂತ್ರಾಂಶ' ಸ್ವಾತಂತ್ರ್ಯದ ಅಂಶ, ಹೊರತು ಬೆಲೆಯಲ್ಲ. ಇದನ್ನ ಅರಿಯಲು ನೀವು `ಸ್ವತಂತ್ರ ಸಂವಾದ'ದಲ್ಲಿನ `ಸ್ವತಂತ್ರ' ಎಂಬುದಾಗಿ ಅರ್ಥೈಸಿಕೊಳ್ಳಬೇಕು, `ಉಚಿತ ದೋಸೆ'ಯಲ್ಲಿನ `ಉಚಿತ' ವೆಂಬಂತಲ್ಲ.

ಸ್ವತಂತ್ರ ತಂತ್ರಾಂಶ ಬಳಕೆದಾರರ ಬಳಕೆ, ಅನುಕರಣೆ ಮತ್ತು ವಿತರಣೆ, ಅಧ್ಯಯನ, ಬದಲಿಸುವಿಕೆ ಮತ್ತು ಅಭಿವೃದ್ಧಿಯ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಅಂಶವಾಗಿದೆ. ವಿಸ್ತರಿಸಿ ಹೇಳುವುದಾದರೆ, ಇದು ನಾಲ್ಕು ರೀತಿಯ ಸ್ವಾತಂತ್ರ್ಯವನ್ನು ತಂತ್ರಾಂಶ ಬಳಕೆದಾರರಿಗೆ ಸೂಚಿಸುತ್ತದೆ :

ಸ್ವಾತಂತ್ರ್ಯ ೦ : ಪ್ರೊಗ್ರಾಮನ್ನು ಯಾವುದೇ ಉದ್ದೇಶಕ್ಕೆ ಬಳಸುವ ಸ್ವಾತಂತ್ರ್ಯ
ಸ್ವಾತಂತ್ರ್ಯ ೧ : ಪ್ರೊಗ್ರಾಮ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ನಮ್ಮ ಅವಶ್ಯಕತೆಗೆ ತಕ್ಕಂತೆ ಹೇಗೆ ಅಳವಡಿಸಿಕೊಳ್ಳುವುದು ಎಂಬುದನ್ನು ಅಧ್ಯಯನ ಮಾಡುವ ಸ್ವಾತಂತ್ರ್ಯ ಮೂಲ ಗ್ರಂಥ/ರೂಪ ನೋಡಲು (source code) ಮಾಡಿಕೊಡುವ ಪೂರ್ವ ಕರಾರು ಇದಕ್ಕೆ ಅನ್ವಯಿಸುತ್ತದೆ.
ಸ್ವಾತಂತ್ರ್ಯ ೨ : ಪ್ರತಿಗಳನ್ನು ಮರುವಿತರಣೆ ಮಾಡುವ ಸ್ವಾತಂತ್ರ್ಯ, ಇದರಿಂದ ನಿಮ್ಮ ನೆರೆಹೊರೆಯವರಿಗೆ ನೆರವಾಗಲು ಸಾಧ್ಯವಾಗುತ್ತದೆ.
ಸ್ವಾತಂತ್ರ್ಯ ೩ : ತಂತ್ರಾಂಶಗಳನ್ನು ಅಭಿವೃದ್ಧಿ ಮಾಡುವ, ಮತ್ತು ಪರಿಷ್ಕರಿಸಿದ ಆವೃತ್ತಿಗಳನ್ನು ಸಮುದಾಯದ ಒಳಿತಿಗಾಗಿ ಸಾರ್ವಜನಿಕರಿಗೆ ಬಿಡುಗಡೆಗೊಳಿಸುವ ಸ್ವಾತಂತ್ರ್ಯ. ಮೂಲ ಗ್ರಂಥ/ರೂಪ ನೊಡಲು (source code) ಮಾಡಿಕೊಡುವ ಪೂರ್ವ ಕರಾರು ಇದಕ್ಕೆ ಅನ್ವಯಿಸುತ್ತದೆ.

Non-free ಅಥವಾ ಸ್ವತಂತ್ರ ಸಾಫ್ಟ್‌ವೇರ್ ಅಲ್ಲದ, ಖಾಸಗಿ ಕಂಪೆನಿಗಳಿಂದ ಸೃಷ್ಟಿಸಲ್ಪಟ್ಟ ತಂತ್ರಾಂಶಗಳು ಯಾವುದೇ ರೀತಿಯ ಸ್ವಾತಂತ್ರ್ಯವನ್ನು ತನ್ನ ಬಳಕೆದಾರರಿಗೆ ನೀಡುವುದಿಲ್ಲ ಮತ್ತು ಅದರ ಕಾರ್ಯವೈಖರಿಯನ್ನು ಅರ್ಥ ಮಾಡಿಕೊಳ್ಳಲೂ ಬಿಡುವುದಿಲ್ಲ. ಎಫ್.ಎಸ್.ಎಫ್ ಪ್ರಕಾರ ಇದು ನೈತಿಕವಲ್ಲ. ಇದೆಲ್ಲದರ ಜೊತೆಗೆ ಸಾಫ್ಟ್‌ವೇರ್ ಪೇಟೆಂಟುಗಳನ್ನೂ ಮತ್ತು ಕಾಪಿರೈಟ್ ಕಾಯಿದೆಗಳಲ್ಲಿ ಹೇರಲ್ಪಡುವ ಇತರೆ ಅಧಿಕ ಮಿತಿಗಳನ್ನೂ ಎಫ್.ಎಸ್.ಎಫ್ ವಿರೋಧಿಸುತ್ತದೆ. ತಂತ್ರಾಂಶಗಳು ಏಕೆ ಮುಕ್ತವಾಗಿರಬೇಕು ಮತ್ತು ಸ್ವತಂತ್ರವಾಗಿರಬೇಕು ಹಾಗೂ ಮೇಲೆ ಹೇಳಿದ ಎಲ್ಲ ೪ ಸ್ವಾತಂತ್ರ್ಯಗಳನ್ನೂ ನೀಡಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ಜಾಲತಾಣಗಳನ್ನು ಜಾಲಾಡಿ: GNU | FSF

ಒ.ಎಸ್.ಐ ತತ್ವಜ್ಞಾನ / ಓಪನ್ ಸೋರ್ಸ್ ಸಾಫ್ಟ್‌ವೇರ್ ಫಿಲಾಸಫಿ
ಇದು ಸ್ವತಂತ್ರ ತಂತ್ರಾಂಶ ಫಿಲಾಸಫಿಗಿಂತ ಸ್ವಲ್ಪ ಭಿನ್ನ. ಇದರ ಸಾಮಾನ್ಯ ಕಲ್ಪನೆ/ಉದ್ದೇಶ ಬಹಳ ಸುಲಭವಾದದ್ದು: ಪ್ರೋಗ್ರಾಮರ್‌ಗಳು ಯಾವುದೇ ತಂತ್ರಾಂಶದ ಮೂಲವನ್ನು (source code) ಓದಲು, ಹಂಚಿಕೊಳ್ಳಲು ಮತ್ತು ಮಾರ್ಪಡಿಸಲು ಸಾಧ್ಯವಾದಲ್ಲಿ, ತಂತ್ರಾಂಶ ಬೆಳೆಯುತ್ತದೆ.  ಜನರು ಇವನ್ನು ಸುಧಾರಿಸುತ್ತಾರೆ, ತಮ್ಮ ಅವಶ್ಯಕತೆಗಳಿಗೆ ಅಳವಡಿಸಿಕೊಳ್ಳುತ್ತಾರೆ, ಅದರಲ್ಲಿನ ನ್ಯೂನತೆಗಳನ್ನು ಸರಿಪಡಿಸುತ್ತಾರೆ. ಮತ್ತು ಇದೆಲ್ಲಾ ನಡೆಯುವ ವೇಗವನ್ನು ನೋಡಿದರೆ, ಸಾಂಪ್ರದಾಯಿಕ ತಂತ್ರಾಂಶ ಅಭಿವೃದ್ಧಿಯ ನಿಧಾನಗತಿಯ ಬೆಳವಣಿಗೆಯ ವೇಗ ನಿಮ್ಮನ್ನು ಚಕಿತಗೊಳಿಸಬಹುದು.

ಓಪನ್‌ಸೋರ್ಸ್ ಇನಿಶಿಯೇಟಿವ್  (OSI) ತನ್ನ ಗಮನವನ್ನು ಶಕ್ತಿಶಾಲಿ, ನಂಬಿಕಾರ್ಹ ಮತ್ತು ಎಫ್.ಎಸ್.ಎಫ್ ಗಿಂತಲೂ ಹೆಚ್ಚು ಉದ್ಯಮ ಸ್ನೇಹಿಯಾದ ತಂತ್ರಾಂಶಗಳ ತಾಂತ್ರಿಕ ಮೌಲ್ಯಗಳ ಕಡೆಗೆ ಹರಿಸುತ್ತದೆ. ಸ್ವತಂತ್ರ ತಂತ್ರಾಂಶಗಳ ನೈತಿಕ ಸಮಸ್ಯೆಗಳ ಕಡೆ ಕಡಿಮೆ ಗಮನಹರಿಸಿ, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಹಂಚಿದ/ಹರಡಿದ (distributed) ಅಭಿವೃದ್ಧಿ ವಿಧಾನ ಪ್ರಾಯೋಗಿಕ ಉಪಯುಕ್ತತೆಯ ಕಡೆಗೆ ಹೆಚ್ಚು ಗಮನ ನೀಡುತ್ತದೆ.

ಈ ಎರಡೂ ಚಳುವಳಿಗಳ ಮೂಲ ತತ್ವಜ್ಞಾನಗಳು ಬೇರೆಯಾಗಿದ್ದರೂ, ಎಫ್.ಎಸ್.ಎಫ್ ಮತ್ತು ಓ.ಎಸ್.ಐ ಒಂದೇ ನೆಲೆಯನ್ನು  ಹಂಚಿಕೊಂಡು ತಂತ್ರಾಂಶ ಅಭಿವೃದ್ಧಿ, ಖಾಸಗೀ ತಂತ್ರಾಂಶಗಳ ವಿರುದ್ಧ ದನಿ ಎತ್ತುವಿಕೆ, ತಂತ್ರಾಂಶ ಹಕ್ಕುಸಾಮ್ಯಗಳು (patents) ಮುಂತಾದ ಪ್ರಾಯೋಗಿಕ ನೆಲೆಗಳ ಮೇಲೆ ರಿಚರ್ಡ್ ಸ್ಟಾಲ್‌ಮನ್ ಹೇಳುವಂತೆ ಒಂದೇ ಸಮುದಾಯದ ಎರಡು ರಾಜಕೀಯ ಪಕ್ಷಗಳಂತೆ ಕೆಲಸ ಮಾಡುತ್ತವೆ.

ತಂತ್ರಾಂಶಗಳು - ಉಚಿತವೇ? ಕೊಳ್ಳಬೇಕೆ?
ಸ್ವತಂತ್ರ ತಂತ್ರಾಂಶಗಳು ಖಾಸಗಿ ಕಂಪೆನಿಗಳ ತಂತ್ರಾಂಶಗಳಿಗೆ ತದ್ವಿರುದ್ಧ. ಇವು ನಿಮಗೆ ಮುಕ್ತವಾಗಿ, ಸ್ವತಂತ್ರವಾಗಿ ದೊರೆಯುತ್ತವೆ. ಜಿಂಪ್, ಓಪನ್/ಲಿಬ್ರೆ ಆಫೀಸ್, ಇಂಕ್ ಸ್ಕೇಪ್ ಹೀಗೆ ಪ್ರತಿಯೊಂದೂ ತಂತ್ರಾಂಶಕ್ಕೂ ಸ್ವತಂತ್ರ ತಂತ್ರಾಂಶದ ಬದಲಿ ವ್ಯವಸ್ಥೆ ಇಂದು ಲಭ್ಯವಿದೆ. ಈ ವೆಬ್‍ಸೈಟ್‌ನಲ್ಲಿ ನೀವು ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಕಾಣಬಹುದು.

ವಿದ್ಯಾರ್ಥಿಗಳಿಗೆ ತಂತ್ರಾಂಶ
ಶೈಕ್ಷಣಿಕ ಬಳಕೆಗೆ ಬೇಕಿರುವ ಅನೇಕ ತಂತ್ರಾಂಶಗಳನ್ನು ಎಫ್.ಎಸ್.ಎಫ್‌ನ ಈ ಕೊಂಡಿಯಲ್ಲಿ ಪಟ್ಟಿ ಮಾಡಲಾಗಿದೆ.

ನಿಮಗೆ ಬೇಕಿರುವ ತಂತ್ರಾಂಶಕ್ಕೆ ಬದಲಿಯಾಗಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು ಬೇಕೆಂದಲ್ಲಿ -
http://osalt.com/
http://www.opensourcealternative.org/
http://alternativeto.net/software/open-source-software-directory/

ಲಿನಕ್ಸ್ - ನೀವೂ ಬಳಸಬಹುದು

ಲೈವ್ ಸಿ.ಡಿ: ಸಾಮಾನ್ಯವಾಗಿ ಲಿನಕ್ಸ್ ಸಿ.ಡಿ ಕೈಗೆ ಸಿಕ್ಕ ತಕ್ಷಣ ಅದನ್ನು ಉಪಯೋಗಿಸಿ ನಿಮ್ಮ ಕಂಪ್ಯೂಟರ್ ಬೂಟ್ ಮಾಡಿ ಲಿನಕ್ಸ್‌ನಲ್ಲಿ ಕೆಲಸ ಮಾಡಬಹುದು. ಹೌದು, ಇನ್‌ಸ್ಟಾಲ್  ಮಾಡದೆಯೇ ಲಿನಕ್ಸ್ ಡೆಸ್ಕ್‌ಟಾಪ್ ನಿಮ್ಮ ಪರದೆಯ ಮುಂದೆ ಬರುತ್ತದೆ. ಲಿನಕ್ಸ್‌ನ ಎಲ್ಲ ಮುಖ್ಯ ಡಿಸ್ಟ್ರಿಬ್ಯೂಷನ್‌ಗಳು ಇಂದು ಲೈವ್ ಸಿ.ಡಿ ಆವೃತ್ತಿಯಲ್ಲಿ ಸಿಗುತ್ತವೆ. ಉಬುಂಟು, ಫೆಡೋರ, ಓಪನ್ ಸುಸೆ, ಕ್ನಾಪಿಕ್ಸ್, ಲಿನಕ್ಸ್ ಮಿಂಟ್‌ಗಳ ವೆಬ್‌ಸೈಟ್‌ಗಳಿಂದ ನೀವು ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಲೈವ್ ಯು.ಎಸ್.ಬಿ: ನಿಮ್ಮ ಬಳಿ ಯು.ಎಸ್.ಬಿ ಡ್ರೈವ್ ಇದೆಯೇ? ಅದನ್ನು ನಿಮ್ಮ ಕಂಪ್ಯೂಟರಿನಲ್ಲಿ ಲಿನಕ್ಸ್ ಬಳಸಲು ಉಪಯೋಗಿಸಬಹುದು. ಹೌದು, ಕಂಪ್ಯೂಟರಿಗೆ ನೇರವಾಗಿ ಲಿನಕ್ಸ್ ಇನ್‌ಸ್ಟ್ಟಾಲ್ ಮಾಡಿಕೊಳ್ಳುವುದರ ಬದಲು ನಿಮ್ಮ ಬಳಿ ಇರುವ ಯು.ಎಸ್.ಬಿ ಬಳಸಬಹುದು. Unetbootin ಎಂಬ ತಂತ್ರಾಂಶ ಬಳಸಿ ಲಿನಕ್ಸ್ ಸಿ.ಡಿಯನ್ನು ಯು.ಎಸ್.ಬಿ ಗೆ ಇಳಿಸಿಕೊಳ್ಳಬಹುದಾಗಿದೆ. ಇತ್ತೀಚೆಗೆ ಲಿನಕ್ಸ್ ಡಿಸ್ಟ್ರಿಬ್ಯೂಷನ್‌ಗಳು ನೇರವಾಗಿ ಯು.ಎಸ್.ಬಿ ಗೆ ಎಂದೇ ಡೌನ್‌ಲೋಡ್‌ಗೆ ಸಿಗುತ್ತವೆ. ಯು.ಎಸ್.ಬಿ ಬೂಟ್ ಮಾಡಲು ಮೊದಲೇ ಹೇಳಿದಂತೆ, POST ಸ್ಕ್ರೀನ್ ನಲ್ಲಿ ಸಿಗುವ ಬೂಟ್ ಆಪ್ಶನ್ ನ ಕೀ ಒತ್ತಿ ಯು.ಎಸ್.ಬಿ ಆಯ್ದುಕೊಂಡರಾಯ್ತು.

ವರ್ಚುಅಲೈಸೇಷನ್
ಇತ್ತೀಚೆಗೆ ಪೇಟೆಯಲ್ಲಿ ಸಿಗುವ ಕಂಪ್ಯೂಟರ್‌ಗಳ ಕಾರ್ಯಕ್ಷಮತೆ ಎಷ್ಟಿರುತ್ತದೆ ಎಂದರೆ, ಒಂದು ಆಪರೇಟಿಂಗ್ ಸಿಸ್ಟಂನ ಒಳಗೆ ಇನ್ನೂ ಒಂದೆರಡು ಆಪರೇಟಿಂಗ್ ಸಿಸ್ಟಂಗಳನ್ನು ನಡೆಸಬಹುದು. ಅಂದರೆ, ನೀವು ಮೂರು ನಾಲ್ಕು ಕಂಪ್ಯೂಟರ್ ಗಳನ್ನು ಇಟ್ಟುಕೊಂಡು ಬೇರೆಬೇರೆ ಆಪರೇಟಿಂಗ್ ಸಿಸ್ಟಂ ಇನ್‌ಸ್ಟಾಲ್  ಮಾಡಿ ಬಳಸುವ ಬದಲು, ವರ್ಚುಯಲೈಸೇಷನ್ ತಂತ್ರಜ್ಞಾನ ಬಳಸಿ ನಿಮ್ಮ ಮೂಲ ಆಪರೇಟಿಂಗ್ ಸಿಸ್ಟಂನೊಳಗೇ ಬೇರೆ ಬೇರೆ ಆಪರೇಟಿಂಗ್ ಸಿಸ್ಟಂಗಳ ವರ್ಚುಅಲ್ ಮೆಶಿನ್‌ಗಳ ಜೊತೆ ಕೆಲಸ ಮಾಡಬಹುದು.

ಉದಾ: VMware, VirtualBoxನಂತಹ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡು, ಅವುಗಳ ಮೂಲಕ ವಾಸ್ತವಿಕ/ವರ್ಚುಅಲ್ ವಾಗಿ ವಿಂಡೋಸ್ ನಲ್ಲಿ ಲಿನಕ್ಸ್, ಲಿನಕ್ಸ್ ನಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಗಳನ್ನು ಇನ್‌ಸ್ಟಾಲ್  ಮಾಡಿ ಉಪಯೋಗಿಸಬಹುದು.  ಲಿನಕ್ಸ್ ಇನ್‌ಸ್ಟಾಲ್  ಮಾಡಿಕೊಂಡು ಉಪಯೋಗಿಸುವುದನ್ನು ಕಲಿಯ ಬೇಕು ಎಂದೆನಿಸಿದವರಿಗೆ ವರ್ಚುಅಲೈಸೇಷನ್ ಒಂದು ವರದಾನವೇ ಸರಿ.

ದಿನನಿತ್ಯದ ಕೆಲಸಗಳಲ್ಲಿ ಗ್ನು/ಲಿನಕ್ಸ್, FOSS ಬಳಕೆ
 • ಕಲಿಕೆ ಹಾಗೂ ಸಂಶೋಧನೆ
 • ಸಂಪರ್ಕ ಹಾಗೂ ಸಂವಹನೆ
 • ತಂತ್ರಜ್ಞಾನ ಹಾಗೂ ತಂತ್ರಾಂಶ ಅಭಿವೃದ್ಧಿಯಲ್ಲಿ
 • ಮನರಂಜನೆಗಾಗಿ (ದೃಶ್ಯ, ಶ್ರಾವ್ಯ, ಆಟಗಳು ಇತ್ಯಾದಿ)
 • ವಾಣಿಜ್ಯ ಉದ್ದೇಶಗಳು
 • ಅತ್ಯಾಧುನಿಕ ಅಂತರ್ಜಾಲ ಸೇವೆಗಳು (ಕ್ಲೌಂಡ್ ಕಂಪ್ಯೂಟಿಂಗ್ ಇತ್ಯಾದಿ)
ಮೊಬೈಲ್, ಟ್ಯಾಬ್ಲೆಟ್ ಇತ್ಯಾದಿಗಳಲ್ಲಿ ಸುಲಭವಾಗಿ ಬಳಸಲು ಸಾಧ್ಯವಾಗುವಂತೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು ಇಂದು ಅಭಿವೃದ್ಧಿಗೊಂಡಿವೆ. ಎಲ್ಲರ ಕೈಗಳಲ್ಲಿರುವ ಆಂಡ್ರಾಯ್ಡ್ ಫೋನುಗಳು ಇದಕ್ಕೆ ಒಂದು ಉತ್ತಮ ಉದಾಹರಣೆ.  ಲಿಬ್ರೆ ಆಫೀಸ್, ವಿ.ಎಲ್.ಸಿ, ಸ್ಟೆಲ್ಲೇರಿಯಂ ನಿಮ್ಮ ದಿನ ನಿತ್ಯದ ಡಿ.ಟಿ.ಪಿ, ಮನರಂಜನೆ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಅವಶ್ಯಕತೆಗಳನ್ನು ಪೂರೈಸುತ್ತವೆ.

ಲಿನಕ್ಸ್ ಬಳಕೆಯ ಬಗ್ಗೆ ಹೆಚ್ಚಿನದನ್ನು ಲಿನಕ್ಸಾಯಣ.ನೆಟ್ನಲ್ಲಿ ವಿಡಿಯೋಗಳ ಮೂಲಕ ತೋರಿಸಲಾಗಿದೆ.

ತಂತ್ರಜ್ಞಾನ ಮತ್ತು ತಂತ್ರಾಂಶ ಅಭಿವೃದ್ಧಿಯಲ್ಲಿ ಸಮುದಾಯದ ಪಾತ್ರ
ಸಮುದಾಯಗಳು ತಂತ್ರಜ್ಞಾನ ಮತ್ತು ತಂತ್ರಾಂಶ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರವಹಿಸುವುದರ ಮೂಲಕ ಸಾಮಾಜಿಕ ಜವಾಬ್ದಾರಿ, ಜ್ಞಾನದ ಹಂಚಿಕೆ, ತಂತ್ರಜ್ಞಾನ ಹಾಗೂ ತಂತ್ರಾಂಶ ಸ್ವಾತಂತ್ರ್ಯಕಾಪಾಡಿಕೊಳ್ಳುವುದು, ತಂತ್ರಜ್ಞಾನ ಕಲಿಕೆ, ತಂತ್ರಜ್ಞಾನ ಅಳವಡಿಸುವಿಕೆಯಲ್ಲಿ ಉಳಿತಾಯ ಹಾಗೂ ಅದರ ಗುಣಮಟ್ಟ ಕಾಯ್ದುಕೊಳ್ಳುವುದರ ಮೂಲಕ ತಮ್ಮ ಕೊಡುಗೆ ನೀಡಬಹುದು. ಇದರಿಂದ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ಪೋಲಾಗುವುದನ್ನು ತಪ್ಪಿಸಲು ಸಾಧ್ಯವಿದೆ.

FOSS ಅಭಿವೃದ್ಧಿವಿಧಾನ (Development Methodology)
FOSS ಅಭಿವೃದ್ಧಿವಿಧಾನ ವಿಶಿಷ್ಟವಾದದ್ದು, ಇಂಟರ್ನೆಟ್ ಮತ್ತು ಸಮೂಹ ಸಾಧನಗಳ ಆವಿಷ್ಕಾರಗಳಿಂದ ಸಾಧ್ಯವಾಯಿತು. ಕಾಥಡ್ರೆಲ್ ಮತ್ತು ಬಜಾರ್ ಎನ್ನುವ ಪುಸ್ತಕದಲ್ಲಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಅಭಿವೃದ್ಧಿಯ ವಿಧಾನವನ್ನು ಸಾಂಪ್ರದಾಯಿಕ ತಂತ್ರಾಂಶ ಅಭಿವೃದ್ಧಿ ವಿಧಾನಗಳೊಂದಿಗೆ ತಾಳೆ ಹಾಕಿ ನೋಡಲಾಗಿದೆ.

ಸಾಂಪ್ರದಾಯಿಕ ತಂತ್ರಾಂಶ ಅಭಿವೃದ್ಧಿ ಪ್ರಾಚೀನ ಕಾಲದಲ್ಲಿ ಕಟ್ಟಲಾಗಿದ್ದ ಚರ್ಚುಗಳಂತೆ; ಹೇಗೆಂದರೆ, ಚಿಕ್ಕ ಚಿಕ್ಕ ಗುಂಪುಗಳಲ್ಲಿರುತ್ತಿದ್ದ ಕುಶಲಕರ್ಮಿಗಳು ಬಾಹ್ಯ ಪ್ರಪಂಚದಿಂದ ಬೇರ್ಪಟ್ಟು, ಗುಪ್ತವಾಗಿ ಚರ್ಚಿನ ಮಾದರಿಗಳನ್ನು, ಕಲಾಕೃತಿಗಳನ್ನು ರಚಿಸುತ್ತಿದ್ದರು ಮತ್ತು ಒಂಟಿಯಾಗಿ ನಿರ್ಮಿಸುತ್ತಿದ್ದರು. ಒಮ್ಮೆ ಕಟ್ಟಿದ ನಂತರ ಚರ್ಚುಗಳ ನಿರ್ಮಾಣದ ಕೆಲಸ ಸಂಪೂರ್ಣವಾಗಿರುತ್ತಿತ್ತು ಮತ್ತು ಕೆಲವೇ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾತ್ರ ಮಾಡಲಾಗುತ್ತಿತ್ತು. ಸಾಂಪ್ರದಾಯಿಕವಾಗಿ ತಯಾರಾಗುತ್ತಿದ್ದ ತಂತ್ರಾಂಶಗಳೂ ಕೂಡ ಇದೇ ರೀತಿ ಅಭಿವೃದ್ಧಿಗೊಳ್ಳುತ್ತಿದ್ದವು. ತಂತ್ರಾಂಶ ಪರಿಣಿತರ ತಂಡ ಎಚ್ಚರಿಕೆಯಿಂದ ಪೂರ್ವಸಿದ್ಧತೆಗಳ ಜೊತೆ ಅಭಿವೃದ್ಧಿಯನ್ನು ನಿಯಂತ್ರಣದಲ್ಲಿ ಇರಿಸಿಕೊಂಡು, ತಂತ್ರಾಂಶ ತಯಾರಾಗಿ ಜಗತ್ತಿಗೆ ಪರಿಚಿತವಾಗಿಸುವವರೆಗೆ ಇತರರಿಂದ ಪ್ರತ್ಯೇಕಗೊಂಡು ಕೆಲಸ ನಿರ್ವಹಿಸುತ್ತಿದ್ದರು. ಒಮ್ಮೆ ತಂತ್ರಾಂಶದ ಅಭಿವೃದ್ಧಿ ಕಾರ್ಯ ಮುಗಿದಿದೆ ಎಂದು ಖಾತ್ರಿಯಾದ ಮೇಲೆ ಅತಿ ಕಡಿಮೆ ಅಭಿವೃದ್ಧಿ ಕಾರ್ಯಗಳನ್ನು ಮಾತ್ರ ತಜ್ಞರ ತಂಡ ಮಾಡುವಂತೆ ನೋಡಿಕೊಳ್ಳಲಾಗುತ್ತದೆ.

ಇದಕ್ಕೆ ತದ್ವಿರುದ್ದವಾಗಿ, FOSS ಅಭಿವೃದ್ಧಿವಿಧಾನ ಬಜಾರ್ ಅಥವಾ ಮಾರುಕಟ್ಟೆ ಇದ್ದಹಾಗೆ, ಇದು ನಿಧಾನವಾಗಿ ಬೆಳೆಯುತ್ತಾ ಬರುತ್ತದೆ. ವ್ಯಾಪಾರಿಗಳು ಬರುವುದು, ತಮ್ಮ ಅಂಗಡಿಗಳನ್ನು ಕಟ್ಟಿ ತಮ್ಮ ವ್ಯವಹಾರವನ್ನು ಪ್ರಾರಂಭಿಸುವುದರ ಜೊತೆಗೆ ಮಾರುಕಟ್ಟೆ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವುದು, ಇದೆಲ್ಲ ಮಾರುಕಟ್ಟೆಯ ಆ ಗಲಾಟೆ ಗೊಂದಲಗಳ ನಡುವೆಯೇ ನೆಡೆದು ಹೋಗುತ್ತದೆ. ವ್ಯಾಪಾರಿಗಳು ತಮ್ಮ ವ್ಯವಹಾರ ಪ್ರಾರಂಭಿಸಲು ಬೇಕಾದ ಕನಿಷ್ಠ ಸೌಲಭ್ಯಗಳಿರುವ ಅಂಗಡಿಗಳನ್ನು ತೆರೆದು, ವ್ಯವಹಾರ ಬೆಳೆದಂತೆ ಅಂಗಡಿಯನ್ನು ಅಭಿವೃದ್ಧಿಪಡಿಸಿಕೊಳ್ಳುವ ಹಾಗೆ, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಯಾವುದೇ ವ್ಯವಸ್ಥಿತ ಯೋಜನೆ ಇಲ್ಲದೆ ಬೆಳೆಯಲು ಪ್ರಾರಂಭಿಸುತ್ತದೆ. ತಂತ್ರಾಂಶ ಪರಿಣಿತರು ತಾವು ಅಭಿವೃದ್ಧಿಪಡಿಸಲು ಸಾಧ್ಯವಾದ ಸಣ್ಣ ಪ್ರಮಾಣದ ತಂತ್ರಾಂಶಗಳ ಕೆಲಸ ಮಾಡುವಂತಹ ಸೋರ್ಸ್ ಕೋಡ್ ಅನ್ನು ಜನ ಸಾಮಾನ್ಯರಿಗೆ ಬಿಡುಗಡೆ ಮಾಡುತ್ತಾರೆ ಮತ್ತು ತಮಗೆ ಲಭಿಸಿದ ಪ್ರತಿಕ್ರಿಯೆಗಳ ಮುಖೇನ ಅದನ್ನು ಮುಂದೆ ಬದಲಿಸುವ ಅಥವಾ ಅದಕ್ಕೆ ಹೆಚ್ಚಿನ ಸವಲತ್ತುಗಳನ್ನು ಸೇರಿಸುವ ಕೆಲಸ ಮಾಡುತ್ತಾರೆ. ಇತರೆ ತಂತ್ರಾಂಶ ಅಭಿವೃದ್ಧಿಕಾರರು ಕೂಡ ಮುಂದೆ ಇವರ ಕೈ ಜೋಡಿಸುವ ಸಾಧ್ಯತೆಗಳೂ ಇವೆ. ಅವರು ಮೂಲ ಸೋರ್ಸ್‌ಕೋಡ್ ಪಡೆದು ಅದನ್ನು ತಮಗೆ ಇಷ್ಟವಾಗುವಂತೆ ಬದಲಾಯಿಸಿಕೊಂಡು, ನಂತರ ಮೂಲ ತಂತ್ರಾಂಶಕ್ಕೆ ಅದನ್ನು ಜೋಡಿಸುವ ಅಥವಾ ತಮ್ಮ ಆವೃತ್ತಿಯನ್ನೇ ಇತರರಿಗೆ ಲಭ್ಯವಾಗಿಸುತ್ತಾ ಹೋಗುತ್ತಾರೆ. ಈ ವಿಧಾನದಲ್ಲಿ ಮಾರುಕಟ್ಟೆಯಂತೆ ತಂತ್ರಾಂಶಗಳು, ಆಪರೇಟಿಂಗ್ ಸಿಸ್ಟಂಗಳು  ಇತ್ಯಾದಿ ಅಭಿವೃದ್ಧಿ ಹೊಂದುತ್ತವಲ್ಲದೇ, ಹೊಸ ಆವಿಷ್ಕಾರಗಳಿಗೂ ಇವು ಕಾರಣವಾಗಬಲ್ಲವು.

ಬಜಾರ್‌ನಲ್ಲಿ ಲಭ್ಯವಾಗುವ ವಸ್ತುಗಳು ಮತ್ತು ಸೇವೆಗಳಲ್ಲಿ ಕಾಲಕಳೆದಂತೆ ನಮಗೆ ಕಾಣುವ ಪಕ್ವತೆ, ತಂತ್ರಾಂಶ ಅಭಿವೃದ್ಧಿಯಲ್ಲೂ ಕಾಣುತ್ತದೆ. ಅದರ ಮುಖ್ಯ ಅನುಕೂಲತೆಗಳು ಇಂತಿವೆ:
 • ಶ್ರಮದ ಪುನರಾವರ್ತನೆಯಾಗುವುದನ್ನು ಕಡಿಮೆ ಮಾಡುತ್ತದೆ.
 • ಇತರರು ಮಾಡಿರುವ ಸಂಶೋಧನೆ ಮತ್ತು ಕೆಲಸದ ಫಲಿತಾಂಶವನ್ನು ಬಳಸಿಕೊಂಡು ಕೆಲಸ ಮಾಡಲು ಸಾಧ್ಯವಾಗುತ್ತದೆ.
 • ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ನೆರವಾಗುತ್ತದೆ.
 • ನಿರ್ವಹಣೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಮುಕ್ತ ಜ್ಞಾನ ಭಂಡಾರಗಳು
ವಿಕಿಪೀಡಿಯ, ಕಣಜದಂತಹ ಮುಕ್ತ ಜ್ಞಾನ ಭಂಡಾರಗಳು ಕೂಡ ಮುಕ್ತ ಸಂಸ್ಕೃತಿಯ ಒಂದು ಭಾಗವಾಗಿದ್ದು, ಜನರೇ ಜನರಿಂದ, ಜನರಿಗಾಗಿ ಲಭ್ಯವಾಗಿಸಿಕೊಂಡಿರುವ ಯೋಜನೆಗಳು ಇವಾಗಿವೆ. ವಿದ್ಯಾರ್ಥಿಗಳು  ಜ್ಞಾನ ಭಂಡಾರಗಳ ಮೂಲಕ ಜ್ಞಾನಾರ್ಜನೆ ಮಾತ್ರವಲ್ಲದೇ, ಅವುಗಳ ಮೂಲಕ ಸಂಶೋಧನೆ ಇತ್ಯಾದಿಗಳಿಗೆ ತೊಡಗಿ, ಜ್ಞಾನ ಭಂಡಾರಗಳನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವುದರಲ್ಲೂ ಪ್ರಮುಖ ಪಾತ್ರವಹಿಸಬಹುದು.

ವಿಕಿಪೀಡಿಯ
ಸ್ವತಂತ್ರವಾಗಿ ತನ್ನ ಇಚ್ಛಾನುಸಾರ ಭೂಮಿಯ ಮೇಲೆ ಜೀವಿಸುತ್ತಿರುವ ಮಾನವ, ತನ್ನಲ್ಲಿನ ತಿಳಿವಳಿಕೆಯನ್ನೂ ಹಾಗೆಯೇ ತನ್ನ ಮುಂದಿನ ತಲೆಮಾರುಗಳಿಗೆ ಹಂಚುತ್ತಾ ಬಂದಿದ್ದಾನೆ. ವೇದೋಪನಿಷತ್ತುಗಳು, ರಾಮಾಯಣ, ಮಹಾಭಾರತದಂತಹ ಪುರಾಣ ಕಥೆಗಳಿಂದ ಹಿಡಿದು, ಅಂತರಜಾಲದ ಮೂಲಕ ನಮ್ಮ ಅಂಗೈ ಸೇರುತ್ತಿರುವ ಡಿಜಿಟಲ್ ಎನ್‌ಸೈಕ್ಲೋಪೀಡಿಯಗಳು, ತಂತ್ರಜ್ಞಾನದ ಸಹಾಯ ಹೆಚ್ಚುತ್ತಿದ್ದಂತೆ ವ್ಯಾಪಾರದ ಹಾದಿಯನ್ನೂ ಹಿಡಿದಿರುವುದು ನಮ್ಮ ಕಣ್ಣಮುಂದಿದೆ. ಇದೆಲ್ಲದರ ನಡುವೆ ಅಂತರಜಾಲದಲ್ಲೇ ವಿಕಿಪೀಡಿಯ ಎಂಬ ಸ್ವತಂತ್ರ ವಿಶ್ವಕೋಶ ಮಾನವ ಸಮುದಾಯವನ್ನು ಒಟ್ಟುಗೂಡಿಸಿ, ಜಗತ್ತಿನ ಎಲ್ಲರ ಬಳಿ ಲಭ್ಯವಿರುವ ಮಾಹಿತಿಯನ್ನು ಒಟ್ಟುಗೂಡಿಸಲು, ಎಲ್ಲಾ ರೀತಿಯಲ್ಲೂ ಬಳಸಿಕೊಳ್ಳಲು, ಮಾರ್ಪಡಿಸಲು, ಚರ್ಚಿಸಲು, ಇತರರೊಡನೆ ಹಂಚಿಕೊಳ್ಳಲು ಸಾಧ್ಯವಾಗುವಂತಹ ವೇದಿಕೆಯನ್ನು ಸೃಷ್ಟಿಸಿ ಈಗಾಗಲೇ ಹನ್ನೆರಡು ವರ್ಷ ಕಳೆದಿದೆ.

ವಿಕಿಪೀಡಿಯ - ಅಂತರಜಾಲದ ಒಂದು ಸ್ವತಂತ್ರ ವಿಶ್ವಕೋಶವಾಗಿದ್ದು, ವಿಶ್ವದ ಲಕ್ಷಾಂತರ ಮಂದಿ ಸ್ವಯಂಸೇವಕರ ಸಮುದಾಯವೊಂದು ಒಟ್ಟಿಗೆ ಸೇರಿ ಸಹಕಾರ ಮನೋಭಾವದಿಂದ ಸಂಪಾದಿಸಿದ್ದಾಗಿದೆ. ವಿಕಿಮೀಡಿಯ ಫೌಂಡೇಷನ್ ಎಂಬ ಲಾಭರಹಿತ ಸಂಸ್ಥೆಯ ಬೆಂಬಲದಿಂದ ಕಾರ್ಯಾಚರಣೆಯಲ್ಲಿರುವ ವಿಕಿಪೀಡಿಯದಲ್ಲಿ ಜಗತ್ತಿನ ೨೮೭ ಭಾಷೆಗಳ ೩೦ ಮಿಲಿಯನ್ ಲೇಖನಗಳಿವೆ. ಅದರಲ್ಲಿ ೨೦ಕ್ಕೂ ಹೆಚ್ಚು ಭಾರತೀಯ ಭಾಷೆಗಳೂ ಸೇರಿವೆ. ಇಂಟರ್ನೆಟ್ ಸಂಪರ್ಕವಿರುವ ಯಾರು ಬೇಕಾದರೂ ವಿಶ್ವದ ಯಾವುದೇ ಮೂಲೆಯಿಂದ ಯಾವುದೇ ಭಾಷೆಯ ವಿಕಿಪೀಡಿಯದಲ್ಲಿ, ಯಾವುದೇ ವಿಷಯದ ಲೇಖನಗಳ ಸಂಪಾದನೆಗೆ ತೊಡಗಿಸಿಕೊಳ್ಳಲು ಇಲ್ಲಿ ಅವಕಾಶವಿದೆ. ವಿಶ್ವಕೋಶದ ಪ್ರತಿಯೊಂದೂ ವಿಷಯಕ್ಕೆ ಆಕರವನ್ನು (reference) ಸೂಚಿಸುವ ಇಂಟರ್ನೆಟ್‌ನ ಅತಿ ದೊಡ್ಡ ಮತ್ತು ಪ್ರಸಿದ್ದ ತಾಣವಾಗಿ ವಿಕಿಪೀಡಿಯ ಎಲ್ಲರಿಗೂ ಚಿರಪರಿಚಿತ ಹಾಗೂ ಅತಿ ಹೆಚ್ಚು ಓದುಗರನ್ನು ಪಡೆದಿರುವ ವಿಶ್ವದ ೬ನೇ ಮುಖ್ಯ ಜಾಲತಾಣ.

ಜ್ಞಾನ, ವಿಜ್ಞಾನ, ತಂತ್ರಜ್ಞಾನ, ತಂತ್ರಾಂಶಗಳನ್ನು ಸ್ವತಂತ್ರವಾಗಿ ಮತ್ತು ಮುಕ್ತವಾಗಿ ಇರುವಂತೆ ನೋಡಿಕೊಳ್ಳಲು ಪ್ರಾರಂಭವಾಗಿ, ಸಫಲವಾಗುತ್ತಿರುವ ಯೋಜನೆಗಳಲ್ಲಿ ವಿಕಿಪೀಡಿಯ ಕೂಡ ಒಂದು. ವಾಸ್ತವ ಜಗತ್ತಿನಲ್ಲೂ ಸಮುದಾಯವೊಂದನ್ನು ಕಟ್ಟಿ, ಅದರಲ್ಲೂ ಸ್ವಾತಂತ್ರ್ಯದ ಅಂಶವನ್ನು ಎತ್ತಿ ಹಿಡಿದಿರುವ ವಿಕಿಪೀಡಿಯ, ವಿಶ್ವದ ಭಾಷೆಗಳನ್ನು ತನ್ನ ಒಡಲಲ್ಲಿರಿಸಿಕೊಂಡು, ಅವುಗಳ ಇತಿಹಾಸ, ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕಾಗಿ ಉಳಿಸುತ್ತಿದೆ.

ಜನವರಿ ೧೫, ೨೦೦೧ ರಲ್ಲಿ ಅಂತರಜಾಲದ ಉದ್ಯಮಿ ಜಿಮ್ಮಿ ವೇಲ್ಸ್ ಮತ್ತು ತಂತ್ರಾಂಶ ಪರಿಣಿತ ಲ್ಯಾರಿ ಸ್ಯಾಂಗರ್ ವಿಕಿಪೀಡಿಯವನ್ನು ಪ್ರಾರಂಭಿಸಿದರು. ಆದರೆ ಇದರ ಪರಿಕಲ್ಪನೆ ಮತ್ತು ತಾಂತ್ರಿಕತೆ ಬಹು ಹಿಂದಿನದ್ದು.

ಜಿಮ್ಮಿ ವೇಲ್ಸ್ ಮತ್ತು ಸ್ಯಾಂಗರ್ ಉಚಿತ ಆನ್‌ಲೈನ್ ವಿಶ್ವಕೋಶವನ್ನು ಹೊರತರುವ ಉದ್ದೇಶದಿಂದ ೨೦೦೦ದಲ್ಲಿ ಜೊತೆಯಾಗಿ `ನುಪೀಡಿಯ' ಯೋಜನೆಯನ್ನು ಪ್ರಾರಂಭಿಸುತ್ತಾರೆ. ಆಯಾ ವಿಷಯಗಳಲ್ಲಿ ಪರಿಣಿತರಾದವರನ್ನು ಒಂದುಗೂಡಿಸಿ, ಲೇಖನಗಳನ್ನು ಬರೆಯಿಸಿ, ಪುನರ್ವಿಮರ್ಶೆಗೆ ಒಳಪಡಿಸಿದ ನಂತರ ಮೈಕ್ರೋಸಾಫ್ಟ್ ಎನ್ಕಾರ್ಟಾ ಮತ್ತು ಎನ್ಸೈಕ್ಲೋಪೀಡಿಯ ಬ್ರಿಟಾನಿಕಾಗಳಿಗಿಂತ ಭಿನ್ನವಾಗಿ ಜನರಿಗೆ ಒದಗಿಸುವ ಉದ್ದೇಶವನ್ನು ನುಪೀಡಿಯ ಒಳಗೊಂಡಿತ್ತು.
ಅಂತರಜಾಲದಲ್ಲಿ ಆನ್ಲೈನ್ ಎನ್‌ಸೈಕ್ಲೋಪೀಡಿಯ ತರಬೇಕು ಎಂದು ಯೋಚಿಸಿದವರಲ್ಲಿ ಮೊದಲಿಗರಾದ ರಿಕ್ ಗೇಟ್ಸ್ ೧೯೯೩ರಲ್ಲೇ ಯೋಜನೆಯೊಂದನ್ನು ಸಿದ್ಧಪಡಿಸಿದ್ದರು. ವಿಶ್ವಕೋಶದ ಸಂಪಾದನೆಯು ಯಾವುದೇ ಸಂಸ್ಥೆಯ ಹಿಡಿತದಲ್ಲಿರಬಾರದು ಎನ್ನುವ ಉದ್ದೇಶವಿದ್ದ ಆನ್‌ಲೈನ್ ಸ್ವತಂತ್ರ ವಿಶ್ವಕೋಶವನ್ನು ಡಿಸೆಂಬರ್ ೨೦೦೦ದಲ್ಲಿ ಸ್ವತಂತ್ರ ತಂತ್ರಾಂಶದ ಹರಿಕಾರ ರಿಚರ್ಡ್ ಸ್ಟಾಲ್‌ಮನ್ ಪ್ರತಿಪಾದಿಸಿದ್ದರು.

ವಾರ್ಡ್ ಕನ್ನಿಂಗಾಮ್ ೧೯೯೫ರಲ್ಲಿ ಅಭಿವೃದ್ಧಿಪಡಿಸಿದ್ದ ಪ್ರಖ್ಯಾತ 'ವಿಕಿ' ತಂತ್ರಜ್ಞಾನವನ್ನು ತಮ್ಮ ನುಪೀಡಿಯದಲ್ಲಿ ಬಳಸಿದ್ದ ಜಿಮ್ಮಿ ವೇಲ್ಸ್ ಮತ್ತು ಲ್ಯಾರಿ ಸ್ಯಾಂಗರ್, ಅಂತರಜಾಲದಲ್ಲಿ ಆಗುತ್ತಿದ್ದ ಬದಲಾವಣೆಗಳು ಮತ್ತು ಸ್ಟಾಲ್‌ಮನ್‌ರ ಪರಿಕಲ್ಪನೆಗಳನ್ನು ಗಮನಿಸಿ, ತಮ್ಮ ನುಪೀಡಿದ ಲೇಖನಗಳ ಕೃತಿಸಾಮ್ಯವನ್ನು GFDL (GNU Free Documentation License) ಲೈಸೆನ್ಸ್‌ಗೆ ೨೦೦೧ರಲ್ಲಿ ಬದಲಿಸಿದರು. ಇದನ್ನು ಲ್ಯಾರಿ ಸ್ಯಾಂಗರ್ `ವಿಕಿಪೀಡಿಯ' ಎಂದು ಹೆಸರಿಟ್ಟರು. ನುಪೀಡಿಯಗೆ ಸಹಾಯವಾಗುವಂತೆ ಸಂಪಾದಕರು ಲೇಖನಗಳ ಚರ್ಚೆಗೆ ಬಳಸಿಕೊಳ್ಳಲು ಇದನ್ನು ಮೊದಲು ಪ್ರಾರಂಭಿಸಿದರೂ, ಅಂತರಜಾಲದಲ್ಲಿ ಯಾವುದೇ ಸ್ಥಳದಿಂದ ಸಂಪಾದನೆಗೆ ತೊಡಗುವುದರ ಜೊತೆಗೆ ಇತರರೊಡನೆ ವಿಷಯಾದಾರಿತ ಚರ್ಚೆ ಇತ್ಯಾದಿಗಳಿಗೆ ಅತ್ಯಂತ ಸೂಕ್ತವಾಗಿದ್ದ ವಿಕಿಪೀಡಿಯ ಮುಂದಿನ ದಿನಗಳಲ್ಲಿ ನುಪೀಡಿಯವನ್ನು ಹಿಂದಿಕ್ಕಿತು. ೨೦೦೩ರಲ್ಲಿ ನುಪೀಡಿಯ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸಮಯದಲ್ಲಿ ಕೇವಲ ೨೪ ಲೇಖನಗಳನ್ನು ಸೃಷ್ಟಿಸಲು ಶಕ್ತವಾಗಿದ್ದರೆ, ವಿಕಿಪೀಡಿಯ ಇದೇ ಸಮಯದಲ್ಲಿ ೨೦,೦೦೦ ಲೇಖನಗಳನ್ನು ಸಮುದಾಯ ಸಹಕಾರದಿಂದ ಸಂಪಾದಿಸಿತ್ತು.

ಲೇಖನಗಳನ್ನು ಯಾರು ಬೇಕಾದರೂ ಸಂಪಾದಿಸಬಹುದು ಎನ್ನುವ ಅಂಶವನ್ನು ಬೆಂಬಲಿಸಿದ ಸಮುದಾಯಕ್ಕೆ ಪ್ರತಿಕ್ರಿಯಿಸಿದ ಜಿಮ್ಮಿವೇಲ್ಸ್ ನುಪೀಡಿಯವನ್ನು ಸಂಪೂರ್ಣವಾಗಿ ಮುಚ್ಚಿ ವಿಕಿಪೀಡಿಯಕ್ಕೆ ಹೆಚ್ಚಿನ ಬೆಂಬಲವನ್ನು ನೀಡಲು ನಿರ್ಧರಿಸಿದರು. ಇದನ್ನು ಒಪ್ಪದ ಲ್ಯಾರಿ ಸ್ಯಾಂಗರ್, ವಿಕಿಪೀಡಿಯ ಯೋಜನೆಯಿಂದ ಹೊರನಡೆದರು. ಅಂದಿನಿಂದ ಇಂದಿನವರೆಗೆ ಮಾಧ್ಯಮ ಇತ್ಯಾದಿಗಳ ಮೂಲಕ ಅನೇಕ ವಿಮರ್ಶಾತ್ಮಕ ಪ್ರಶ್ನೆಗಳನ್ನು ಎದುರಿಸುತ್ತಾ, ತನ್ನ ಕಾರ್ಯನೀತಿಗಳಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತಾ ಮುಕ್ತ, ಸ್ವತಂತ್ರ ಹಾಗೂ ಆನ್‌ಲೈನ್ ವಿಶ್ವಕೋಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮುದಾಯವೊಂದರ ಮೂಲಕ ಕಟ್ಟಲು ವಿಕಿಪೀಡಿಯ ಅನುವು ಮಾಡಿಕೊಟ್ಟಿತು. ಎರಡು ತಿಂಗಳಲ್ಲಿ ಜರ್ಮನ್ ನಂತರ ಫ್ರೆಂಚ್, ಚೀನಿ, ಡಚ್, ಹಿಬ್ರೂ, ಇಟಾಲಿಯನ್, ರಷಿಯನ್ ಭಾಷೆಗಳಲ್ಲೂ ವಿಕಿಪೀಡಿಯ ಪ್ರಾರಂಭವಾಯಿತು.

ಆರಂಭದಲ್ಲಿ ಭಾರತೀಯ ಭಾಷೆಗಳು ವಿಕಿಪೀಡಿಯದಲ್ಲಿ ಕಾಣದಿದ್ದರೂ, ಜೂನ್ ೨೦೦೨ರಲ್ಲಿ ಪಂಜಾಬಿ, ಅಸ್ಸಾಮಿ ಹಾಗೂ ಒರಿಯಾ ಭಾಷೆಗಳ ಮೂಲಕ ಭಾರತೀಯರಿಗೆ ದೊರೆಯುವಂತಾದವು. ಕನ್ನಡ ವಿಕಿಪೀಡಿಯಕ್ಕೆ ಜೂನ್ ೧೨, ೨೦೦೩ರಲ್ಲಿ ಸೇರ್ಪಡೆಯಾಗಿದ್ದು, ಇದುವರೆಗೆ ಹದಿನಾಲ್ಕು ಸಾವಿರ ಲೇಖನಗಳನ್ನು ಒಳಗೊಂಡಿದೆ (ಕನ್ನಡ ವಿಕಿಪೀಡಿಯ).

ಸಮುದಾಯ
ವಿಕಿಪೀಡಿಯ ಸಮುದಾಯ, ಅದರ ಸಾಮಾನ್ಯ ಓದುಗನಿಂದ ಹಿಡಿದು, ಬರಹಗಳನ್ನು ಸಂಪಾದನೆ ಮಾಡುವ, ವಿಕಿಮೀಡಿಯ ಫೌಂಡೇಶನ್‌ನ ಒಡಗೂಡಿ, ಅದನ್ನು ನಡೆಸಲು ಬೇಕಾಗುವ ತಂತ್ರಜ್ಞರು, ನಿರ್ವಾಹಕರು ಮುಂತಾದವರನ್ನು ಒಳಗೊಂಡಿದೆ. ಇವರೆಲ್ಲರನ್ನೂ ವಿಕಿಪೀಡಿಯನ್ನರು ಎಂದು ಕರೆಯಲಾಗುತ್ತದೆ.

ವಿಶ್ವದ ಅನೇಕ ಭಾಗಗಳಲ್ಲಿ ಜನರು ಸ್ಥಳೀಯ ವಿಕಿ ಸಮುದಾಯಗಳನ್ನು ಕಟ್ಟಿಕೊಂಡು ವಿಕಿಪೀಡಿಯದ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ತಮ್ಮ ಭಾಷೆಯ ವಿಕಿಪೀಡಿಯ ಕಟ್ಟಲು ಹೊಸಬರನ್ನು ಅಣಿಗೊಳಿಸುವ ಕೆಲಸದ ಜೊತೆಗೆ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಅಭಿವೃದ್ಧಿಯ ಮೇಲೆ ಆಸಕ್ತಿ ತೋರಿಸುವವರಿಗೆ ಹ್ಯಾಕಥಾನ್(hackathon)ಗಳನ್ನೂ, ವಿಷಯ ಸಂಪಾದನೆಗೆ ಎಡಿಟಥಾನ್(editathon) ಆಯೋಜಿಸುತ್ತಾರೆ. ಸಮುದಾಯಕ್ಕೆ ಕೊಡುಗೆ ನೀಡುವುದರ ಜೊತೆಗೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಅಧ್ಯಯನಕ್ಕೂ ಇದು ಹೆಚ್ಚಿನ ಅವಕಾಶಗಳನ್ನು ಕಂಡುಕೊಂಡಿರುವ ಅನೇಕರು ವಿಕಿಪೀಡಿಯ ಸಮುದಾಯದಲ್ಲಿದ್ದಾರೆ. ಇದೇ ಕಾರಣಕ್ಕಾಗಿ ಇಂದು ಅನೇಕ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ವಿಕಿಪೀಡಿಯವನ್ನು ತಮ್ಮ ಶಿಕ್ಷಣ ವ್ಯವಸ್ಥೆಯಲ್ಲೂ ಬಳಸಲು ಮುಂದೆ ಬಂದಿದ್ದು, ತಮ್ಮ ವಿದ್ಯಾರ್ಥಿಗಳನ್ನು ವಿಕಿಪೀಡಿಯದ ಸಂಪಾದನೆಯಲ್ಲಿ ತೊಡಗಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ.

ವಿಕಿಮೀಡಿಯ ಫೌಂಡೇಷನ್
ವಿಕಿಮೀಡಿಯ ಫೌಂಡೇಶನ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು ವಿಕಿಪೀಡಿಯ ನೆಡೆಸಲು ಬೇಕಿರುವ ತಂತ್ರಜ್ಞಾನ, ಸರ್ವರ್‌ಗಳು ಹಾಗೂ ಇತರೆ ಸಂಪನ್ಮೂಲಗಳನ್ನು ಒಂದುಗೂಡಿಸುವ ಕೆಲಸವನ್ನು ಮಾಡುತ್ತದೆ. ವಿಕಿಪೀಡಿಯದ ಸಾಮಾನ್ಯ ಬಳಕೆದಾರರಿಂದ ಸಂಗ್ರಹಿಸಲಾಗಿದ್ದ ದೇಣಿಗೆ ಅಲ್ಲದೆ, ಇದರ ಜನಪ್ರಿಯತೆಯಿಂದಾಗಿ ಇತ್ತೀಚೆಗೆ ಅನೇಕ ಸರ್ಕಾರಗಳು ಹಾಗೂ ಕಾರ್ಪೋರೇಟ್ ಸಂಸ್ಥೆಗಳು ವಿಕಿಮೀಡಿಯ ಫೌಂಡೇಷನ್‌ಗೆ ಸಹಾಯ ಮಾಡಲು ಮುಂದೆ ಬರುತ್ತಿವೆ. ವಿಕಿಪೀಡಿಯದ ಯೋಜನೆಯ ಬೆಳವಣಿಗೆಗೆ ಕಾರ್ಯತಂತ್ರಗಳನ್ನು ರೂಪಿಸುವುದು, ಅವುಗಳ ನಿರ್ವಹಣೆ, ತಂತ್ರಜ್ಞಾನದ ಅಭಿವೃದ್ಧಿ, ಕಾನೂನು ಇತ್ಯಾದಿಗಳತ್ತ ಕೂಡ ಫೌಂಡೇಷನ್ ಗಮನ ಹರಿಸುತ್ತದೆ.

ಭಾಗವಹಿಸುವಿಕೆ, ಲೇಖನಗಳ ಸಂಪಾದನೆ
ವಿಕಿಪೀಡಿಯದಲ್ಲಿ ತಮ್ಮದೊಂದು ಬಳಕೆದಾರನ ಹೆಸರನ್ನು ನೊಂದಾಯಿಸಿಕೊಳ್ಳುವುದರ ಮೂಲಕ ಯಾರು ಬೇಕಾದರೂ ಸಂಪಾದಕರಾಗಬಹುದು ಮತ್ತು ತಮಗೆ ಇಷ್ಟವಾದ ವಿಷಯಗಳ ಸಂಪಾದನೆಯಲ್ಲಿ ತೊಡಗಬಹುದು. ವಿಕಿಪೀಡಿಯದ ಎಲ್ಲಾ ಯೋಜನೆಗಳಿಗೆ (ಎಲ್ಲಾ ಭಾಷೆಗಳನ್ನೂ ಒಳಗೊಂಡಂತೆ) ಈ ಬಳಕೆದಾರನ ಹೆಸರೊಂದೇ ಸಾಕಾಗುವುದು.

ವಿದ್ಯಾರ್ಥಿಗಳು ಹಾಗೂ ತಂತ್ರಜ್ಞರಾಗಿದ್ದಲ್ಲಿ ವಿಕಿಪೀಡಿಯದ ತಂತ್ರಾಂಶ, ಸರ್ವರ್ ಇತ್ಯಾದಿಗಳನ್ನು ನೋಡಿಕೊಳ್ಳುತ್ತಿರುವ ಇತರೆ ವಿಕಿಪೀಡಿಯನ್ನರನ್ನು ಸೇರಬಹುದು. ವಿಕಿಪೀಡಿಯದ ಮೂಲ ಸ್ವತಂತ್ರ ತಂತ್ರಾಂಶ `ಮೀಡಿಯ ವಿಕಿ' ಅಭಿವೃದ್ಧಿಗೆ ಕೂಡ ಸಹಾಯ ಮಾಡಬಹುದು. ಭಾಷಾಪರಿಣಿತರಾಗಿದ್ದಲ್ಲಿ, ಮಾತೃಭಾಷೆಗೆ ಸಂಬಂಧಿಸಿದ ಅನೇಕ ತಂತ್ರಜ್ಞಾನ ಹಾಗೂ ತಂತ್ರಾಂಶಗಳ ಅಭಿವೃದ್ಧಿಗೂ ಕೂಡ ವಿಕಿಪೀಡಿಯ ಒಂದು ಉತ್ತಮ ವೇದಿಕೆ.

ಲೇಖನಗಳ ಸಂಪಾದನೆಗೆ ತೊಡಗಲು, ನಿಮ್ಮ ಇಷ್ಟದ ವಿಷಯವೊಂದನ್ನು ಆರಿಸಿಕೊಳ್ಳಿ. ಅದನ್ನು ವಿಕಿಪೀಡಿಯದಲ್ಲಿ ಹುಡುಕಾಟ ನಡೆಸಿದಲ್ಲಿ ಸಂಬಂಧಿಸಿದ ವಿಷಯ ಈಗಾಗಲೇ ಲಭ್ಯವಿದ್ದಲ್ಲಿ ಅದರ ಪುಟ ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಇಲ್ಲವಾದಲ್ಲಿ ಆ ಪುಟವನ್ನು ಪ್ರಾರಂಭಿಸಲು ನಮಗೆ ಸೂಚಿಸುವ ಕೊಂಡಿ ನಮ್ಮ ಪರದೆಯ ಮೇಲೆ ಮೂಡುತ್ತದೆ. ಈ ಕೊಂಡಿಯನ್ನು ಕ್ಲಿಕ್ಕಿಸುವುದರ ಮೂಲಕ ವಿಕಿಪೀಡಿಯಕ್ಕೆ ಹೊಸ ಲೇಖನವೊಂದನ್ನು ಸೇರಿಸುವ ನಮ್ಮ ಕಾರ್ಯ ಪ್ರಾರಂಭವಾಗುತ್ತದೆ. ಈಗಾಗಲೇ ಲೇಖನ ಲಭ್ಯವಿದ್ದರೆ, ಪುಟದ ಮೇಲ್ಭಾಗದಲ್ಲಿ ಕಾಣುವ ಸಂಪಾದಿಸಿ ಎಂಬ ಕೊಂಡಿಯನ್ನು ಕ್ಲಿಕ್ಕಿಸಿ ಲೇಖನವನ್ನು ಅಭಿವೃದ್ಧಿಪಡಿಸಲು ಅನುವಾಗಬಹುದು.

ವಿಕಿಪೀಡಿಯದ ಯಾವುದೇ ಲೇಖನಕ್ಕೆ ವಿಷಯಗಳನ್ನು ಸೇರಿಸುವಾಗ, ನಮ್ಮ ಮಾಹಿತಿಯನ್ನು ದೃಢೀಕರಿಸುವ ಸೂಕ್ತ ಉಲ್ಲೇಖಗಳನ್ನು ಸೇರಿಸುವುದು ಬಹುಮುಖ್ಯ. ನಾವು ಸೇರಿಸುವ ಉಲ್ಲೇಖಗಳು ವಿಕಿಪೀಡಿಯದ ಕಾರ್ಯನೀತಿಯಾದ 'ನಿಷ್ಪಕ್ಷಪಾತ ದೃಷ್ಟಿಕೋನ'ವನ್ನು ಎತ್ತಿ ಹಿಡಿಯುವುದರ ಜೊತೆಗೆ, ಲೇಖನಗಳನ್ನು ವಿಶ್ವಾಸಾರ್ಹವೂ ಮತ್ತು ಸಂಪದ್ಭರಿತವೂ ಆಗುವಂತೆ ಮಾಡುತ್ತವೆ.

ವಿಕಿಪೀಡಿಯದಲ್ಲಿ ಇರುವ ಯಾವುದೇ ವಿಷಯಗಳ ಬಗ್ಗೆ ದ್ವಂದ್ವ, ಸಂಶಯ, ಪ್ರಶ್ನೆಗಳು ಇದ್ದಲ್ಲಿ ಯಾರುಬೇಕಾದರೂ ಆ ಲೇಖನದ ಚರ್ಚಾ ಪುಟದಲ್ಲಿ ಚರ್ಚೆಯೊಂದನ್ನು ಪ್ರಾರಂಭಿಸುವುದರ ಮೂಲಕ, ಸಮುದಾಯದ ಸಹಾಯದಿಂದ ಲೇಖನದ ತಪ್ಪುಒಪ್ಪುಗಳನ್ನು ಒಟ್ಟಿಗೆ ಸೇರಿ ತಿದ್ದಬಹುದಾಗಿದೆ.

ವಿಕಿಪೀಡಿಯ ಬಳಗದ ಇತರೆ ಯೋಜನೆಗೆಳು
ವಿಕಿಪೀಡಿಯ ಕೇವಲ ಮಾಹಿತಿಕೋಶವಾಗಿ ಉಳಿಯದೆ ಮೀಡಿಯ, ಉಕ್ತಿಗಳು (ವಿಕಿಮೀಡಿಯ ಕಾಮನ್ಸ್), ಸುದ್ದಿ (ವಿಕಿ ನ್ಯೂಸ್), ಮುಕ್ತ ಸಾಹಿತ್ಯ (ವಿಕಿ ಸೋರ್ಸ್), ಮುಕ್ತ ಪುಸ್ತಕಗಳು(ವಿಕಿ ಬುಕ್ಸ್), ಜೈವಿಕ ಮಾಹಿತಿ ಕಣಜ (ವಿಕಿ ಸ್ಪೀಷೀಸ್), ಸ್ವತಂತ್ರ ನಿಘಂಟು (ವಿಕ್ಷನರಿ) ಹೀಗೆ ಹತ್ತು ಹಲವಾರು ಯೋಜನೆಗಳಿಗೆ ಆಶ್ರಯ ನೀಡಿದೆ. ಈ ಎಲ್ಲ ಯೋಜನೆಗಳು, ಎಲ್ಲ ಭಾಷೆಯ ವಿಕಿಪೀಡಿಯಗಳಿಗೂ ಲಭ್ಯವಿರುವುದು ವಿಶೇಷ.

ವಿಕಿಮೀಡಿಯ ಕಾಮನ್ಸ್ ಮುಕ್ತವಾಗಿ ಬಳಸಿಕೊಳ್ಳಬಹುದಾದ ಮಿಲಿಯಾಂತರ ಚಿತ್ರಗಳು, ದೃಶ್ಯ, ಶ್ರಾವ್ಯ ಮಾಹಿತಿಗಳನ್ನು ಒಳಗೊಂಡಿದ್ದು, ವಿಕಿಪೀಡಿಯದ ಬಹು ಮುಖ್ಯ ಯೋಜನೆಯಾಗಿದೆ.

ವಿಕಿಪೀಡಿಯ ಮಾಹಿತಿಯ ಬಳಕೆ ಮತ್ತು ಕೃತಿ ಸ್ವಾಮ್ಯಗಳು
ವಿಕಿಪೀಡಿಯದ ಮಾಹಿತಿಯು ಕ್ರಿಯೇಟೀವ್ ಕಾಮನ್ಸ್ (Creative Commons Attribution-ShareAlike 3.0 Unported License) ಮತ್ತು ಜಿ.ಎಫ್.ಡಿ.ಎಲ್ ಲೈಸೆನ್ಸ್‌ಗಳನ್ನು ಬಳಸಿಕೊಳ್ಳುತ್ತದೆ. ಈ ಕೃತಿ ಸ್ವಾಮ್ಯಗಳು ಮಾಹಿತಿಯನ್ನು ವಿಕಿಪೀಡಿಯದಿಂದ ಪಡೆದದ್ದು ಎಂದು ಉಲ್ಲೇಖಿಸಿ, ಮೂಲಪುಟದ ಕೊಂಡಿಯೊಡನೆ ನಕಲು ಮಾಡಿ ಹಂಚಿಕೊಳ್ಳಬಹುದು ಮತ್ತು/ಅಥವಾ ಬದಲಿಸಿಕೊಳ್ಳಲು ಅನುಮತಿಯನ್ನು ನೀಡುತ್ತದೆ. ಜಿ.ಎಫ್.ಡಿ.ಎಲ್ ಲೈಸೆನ್ಸ್‌ನಡಿ ಬರುವ ಲೇಖನಗಳನ್ನು ಯಾವುದೇ ಬದಲಾವಣೆಗಳಿಲ್ಲದೆ, ಮುಖ ಪುಟ ಅಥವಾ ಕೊನೆಯ ಪುಟದ ಪಠ್ಯದ ಜೊತೆಗೆ ಬಳಸಿಕೊಳ್ಳಬಹುದು.

ತುಳು ಮತ್ತು ಕೊಂಕಣಿ ವಿಕಿಪೀಡಿಯಗಳೂ ಸೇರಲಿವೆ
ಕನ್ನಡದ ಜೊತೆಗೆ ಕರ್ನಾಟಕದ ಕಡಲತೀರ ಪ್ರದೇಶಗಳಲ್ಲಿ ಬಳಸುವ ತುಳು ಮತ್ತು ಕೊಂಕಣಿ ಭಾಷೆಗಳೂ ವಿಕಿಪೀಡಿಯಾದ ಇನ್‌ಕ್ಯುಬೇಟರ್‌ನಲ್ಲಿ ಬೆಳೆಯುತ್ತಿವೆ. ತುಳು ಮತ್ತು ಕೊಂಕಣಿ ಭಾಷಿಕರು ಕೈಜೋಡಿಸಿದ್ದೇ ಆದಲ್ಲಿ ಇವನ್ನೂ ಮುಂದೆ ಪರಿಪೂರ್ಣವಾಗಿ ನೋಡುವ ಕಾಲ ದೂರವಿಲ್ಲ.

ಮೊಬೈಲ್‌ನಲ್ಲೂ ವಿಕಿಪೀಡಿಯ
ಮೊಬೈಲ್‌ನಲ್ಲೂ ಕೂಡ ವಿಕಿಪೀಡಿಯ ಲೇಖನವನ್ನು ಓದಬಹುದು. ಅದಕ್ಕೆಂದೇ ಇರುವ ವಿಕಿಪೀಡಿಯ ಅಪ್ಲಿಕೇಷನ್ ಅನ್ನು ಗೂಗಲ್ ಆಂಡ್ರಾಯ್ಡ್‌ನಲ್ಲಿ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಐ.ಒಎಸ್ ನಲ್ಲೂ ಇದಕ್ಕೆ ಸಂಬಂಧಪಟ್ಟ ತಂತ್ರಾಂಶಗಳಿವೆ. ಅದೇನೂ ಇಲ್ಲದೆಯೂ ವಿಕಿಪೀಡಿಯ ಬ್ರೌಸ್ ಮಾಡಿದಲ್ಲಿ, ಅದರ ಮೊಬೈಲ್ ಆವೃತ್ತಿ ನಮ್ಮ ಫೋನ್ ಪರದೆಯ ಮೇಲೆ ತೆರೆದುಕೊಳ್ಳುವಂತಹ ವ್ಯವಸ್ಥೆ ಇದೆ. ಮೊಬೈಲ್ ಅಪ್ಲಿಕೇಷನ್ನುಗಳು ಈಗಾಗಲೇ ಅನೇಕ ಭಾಷೆಗಳ ವಿಕಿಪೀಡಿಯಗಳನ್ನು ಅದೇ ಭಾಷೆಯಲ್ಲಿ ಓದುವ ಅವಕಾಶ ಮಾಡಿಕೊಟ್ಟಿವೆ.

ಎಸ್.ಎಂ.ಎಸ್, ಜಿ.ಪಿ.ಆರ್.ಎಸ್ ಮೂಲಕವೂ
ಅನೇಕ ದೇಶಗಳಲ್ಲಿ ಮಾಹಿತಿಯನ್ನು ಸುಲಭವಾಗಿ ಹರಿದುಬಿಡುವ ಮೂಲಕ ಜನರ ಜ್ಞಾನಾರ್ಜನೆಗೆ ಕಾರಣವಾಗಬಹುದು ಎಂದು ವಿಕಿಪೀಡಿಯ ಜೀರೋ ಎಂಬ ಯೋಜನೆ ತೋರಿಸಿಕೊಟ್ಟಿದ್ದು, ಎಸ್.ಎಂ.ಎಸ್ ಮತ್ತು ಮೊಬೈಲ್ ಇಂಟರ್ನೆಟ್ ಮೂಲಕ ಮುಕ್ತವಾಗಿ ವಿಕಿಪೀಡಿಯ ಮಾಹಿತಿ ಒದಗಿಸಲು ಅನೇಕ ಮೊಬೈಲ್ ಸೇವಾ ಕಂಪೆನಿಗಳು ಮುಂದೆ ಬರುತ್ತಿವೆ.

ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಹಾಗೂ ನಾವು
ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳು ನಾವು ಖರೀದಿಸಿದ ಕಂಪ್ಯೂಟರ್ ಇತ್ಯಾದಿ ಹಾರ್ಡ್‌ವೇರ್‌ಗಳನ್ನು ನಡೆಸಲು ಬಳಸುವ ತಂತ್ರಾಂಶಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದರ ಜೊತೆಗೆ, ಬಳಕೆದಾರನಿಗೆ ಆಯ್ಕೆ, ಅಭಿವೃದ್ಧಿ, ಹಂಚಿಕೆ ಹೀಗೆ ಅನೇಕ ಸ್ವಾತಂತ್ರ್ಯಗಳನ್ನು ಅವನಿಗೆ ನೀಡುತ್ತವೆ. ಖಾಸಗಿ ಕಂಪೆನಿಯೊಂದರ ತಂತ್ರಾಂಶದ ಜೊತೆ ತನ್ನಂತಾನೇ ಬಂದಿಯಾಗುವುದನ್ನು ತಪ್ಪಿಸುತ್ತದೆ. ಇದು ಖಾಸಗಿ ಕಂಪೆನಿ ಮುಚ್ಚುವುದರಿಂದ, ಅಥವಾ ತಂತ್ರಾಂಶ ಅಭಿವೃದ್ಧಿ ಹೊಂದಿದಂತೆಲ್ಲಾ, ಮತ್ತೆ ಹೊಸ ತಂತ್ರಾಂಶ ಕೊಳ್ಳುವ ನಷ್ಟದಿಂದ ಬಳಕೆದಾರರನ್ನು ಸಂರಕ್ಷಿಸುತ್ತದೆ. ಇತ್ತೀಚಿನ ಗ್ನು/ಲಿನಕ್ಸ್ ತಂತ್ರಾಂಶ ಕೂಡ ಹಳೆಯ ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್ ಅನ್ನು ಸುಲಭವಾಗಿ ಕಾರ್ಯಾಚರಣೆಗೆ ಒಳಪಡಿಸಬಲ್ಲದು. ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರವಾದ ಭಾರತಕ್ಕೆ ತನ್ನ ಸರ್ಕಾರೀ ಸೇವೆಗೆ ಬಳಸಿಕೊಳ್ಳುತ್ತಿರುವ ಕಂಪ್ಯೂಟರುಗಳ ನಿರ್ವಹಣೆಯನ್ನು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳಲ್ಲಿ ಮಾಡಿದ್ದೇ ಆದಲ್ಲಿ, ಕೋಟಿಗಟ್ಟಲೆ ಹಣ ಹೊರ ದೇಶಗಳ ಖಾಸಗಿ ಕಂಪೆನಿಗಳ ಕಿಸೆ ತುಂಬುವುದು ತಪ್ಪುತ್ತದೆ. ನಮ್ಮ ತೆರಿಗೆ ಹಣ ದೇಶದ ಅಭಿವೃದ್ಧಿಗೆ ಲಭ್ಯವಿರುತ್ತದೆ. ಈ ನಿಟ್ಟಿನಲ್ಲಿ ರಷ್ಯಾ, ಚೀನಾ ಇತರೆ ದೇಶಗಳು ತಮ್ಮದೇ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂಗಳನ್ನು ದೇಶದ ಕಂಪ್ಯೂಟರೀಕರಣದಲ್ಲಿ ಬಳಸಿಕೊಂಡು ಮೊದಲ ಹೆಜ್ಜೆ ಇಟ್ಟಿವೆ. ನಮ್ಮಲ್ಲಿನ್ನೂ ಆ ಕಾರ್ಯ ನಿಧಾನವಾಗಿ ನಡೆದಿದೆ.

ಯಾವುದೇ ಒಂದು ತಂತ್ರಾಂಶಕ್ಕೆ ಒಗ್ಗಿಕೊಳ್ಳುವುದು, ನಾವದನ್ನು ಉಪಯೋಗಿಸುವುದರ ಮೇಲೆ ಅವಲಂಬಿತವಾಗಿದೆ. ನಮ್ಮ ಪಕ್ಕದಲ್ಲಿ ಅದನ್ನು ಅರಿತವರು ದೊರೆತರೆ ಯಾವುದನ್ನೂ ಕಲಿಯುವುದು ನಮಗೆ ಸುಲಭಸಾಧ್ಯ. ಜೊತೆಗೆ ಶಾಲಾಕಾಲೇಜುಗಳಲ್ಲಿ ಭೋದನೆಗೆ ಅಳವಡಿಸಿಕೊಂಡಲ್ಲಿ, ಮುಂದೆ ಯಾವುದೇ ಕೆಲಸಕ್ಕೆ ಬೇಕಾದ ನುರಿತ ಕೆಲಸಗಾರರು ಲಭ್ಯರಿರುತ್ತಾರೆ.

ಶಾಲಾಕಾಲೇಜುಗಳ ಹೊರನಿಂತು ನೋಡಿದರೂ ಇಂದಿನ ಯುವ ಪೀಳಿಗೆಗೆ ಪ್ರಾಯೋಗಿಕವಾಗಿ ಹೊಸತನ್ನು ಕಲಿಯುವ, ಹೊಸತನ್ನು ಅಭಿವೃದ್ಧಿಪಡಿಸುವ ವಿಪುಲ ಅವಕಾಶಗಳಿವೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಬೆಳವಣಿಗೆಗಳನ್ನು ಗಮನಿಸಿದಾಗ ನಮ್ಮ ಸಮಾಜಕ್ಕೆ ಬೇಕಾದ ತಂತ್ರಾಂಶ ಇತ್ಯಾದಿಗಳನ್ನು ಅಭಿವೃದ್ಧಿಪಡಿಸಲು ನಮ್ಮ ಯುವಕ ಯುವತಿಯರು ಮುಂದಾಗಿ, ಈಗಾಗಲೇ ಲಭ್ಯವಿರುವ ಮಾಹಿತಿಗಳನ್ನು ಇಂಟರ್‌ನೆಟ್ ಮೂಲಕ ಪಡೆದು, ಮುಕ್ತ ತಂತ್ರಾಂಶ ಸಮುದಾಯಗಳತ್ತ ಮುಖಮಾಡಿ ಸಮಾನಮನಸ್ಕರ ಜೊತೆಗೂಡಿ ಕೆಲಸ ಮಾಡಬಹುದಾಗಿದೆ. ಇದರಿಂದ ಸ್ವಾವಲಂಬನೆ ದೊರೆಯುವುದಲ್ಲದೇ, ನಮ್ಮದೇ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿಕೊಂಡು ಸಮಾಜವನ್ನೂ ಬಲಪಡಿಸಿದ ಹೆಮ್ಮೆ ನಮ್ಮದಾಗುತ್ತದೆ. ಗೂಗಲ್ ಕಂಪೆನಿ ಪ್ರತಿವರ್ಷ `ಗೂಗಲ್ ಸಮ್ಮರ್ ಆಫ್ ಕೋಡ್' ಎಂಬ ಯೋಜನೆಯ ಮೂಲಕ ತಾಂತ್ರಿಕ ಪರಿಣಿತಿ ಹೊಂದಿದ, ಹೊಂದಿಲಿಚ್ಚಿಸುವ ಅನೇಕರಿಗೆ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಮೇಲೆ ಕೆಲಸಮಾಡಲು ಅವಕಾಶ ಮಾಡಿಕೊಡುತ್ತದೆ. ಮುಖ್ಯವಾಗಿ ವಿದ್ಯಾರ್ಥಿಗಳನ್ನು ಉದ್ದೇಶವಾಗಿಟ್ಟಿಕೊಂಡಿರುವ ಇಂತಹ  ಯೋಜನೆಯ ಬಗ್ಗೆ ಕಾಲೇಜು ವಿದ್ಯಾರ್ಥಿಗಳು ತಿಳಿಯುವುದು ಒಳಿತು.

ಮುಕ್ತ ತಂತ್ರಾಂಶಗಳು ಕೆಲವೊಮ್ಮೆ ಹವ್ಯಾಸಕ್ಕೆಂದು ಬರೆದರೂ, ನಂತರ ಮಿಲಿಯನ್‌ಗಟ್ಟಲೆ ಹಣವನ್ನು ದುಡಿಯುವ ಸಂಸ್ಥೆಗಳನ್ನು ಹುಟ್ಟುಹಾಕುವಲ್ಲಿ ನೆರವಾದವು. ಅನೇಕರಿಗೆ ಉದ್ಯೋಗಾವಕಾಶಗಳನ್ನೂ ಕಲ್ಪಿಸಿಕೊಟ್ಟವು.

ಜೊತೆಗೆ `Free Culture' ಅಥವಾ 'ಮುಕ್ತ ಸಂಸ್ಕೃತಿ'ಯನ್ನು ಪಸರಿಸಿದ ಈ ಆಂದೋಲನ ಇಂದು ಮತ್ತು ನಾಳೆಗೆ ಬೇಕಿರುವ ಜ್ಞಾನ  ಬಂಡಾರವನ್ನು ನಮ್ಮ ಮುಂದೆ ಇಟ್ಟಿದೆ. Free Culture ಬಗ್ಗೆ ಹೆಚ್ಚು ತಿಳಿಯಲು ಲಾರೆನ್ಸ್ ಲೆಸ್ಸಿಗ್ ಬರೆದ ಈ ಪುಸ್ತಕ ಓದಿ. ಇದು ಮುಕ್ತವಾಗಿ ನಿಮಗೆ ಲಭ್ಯವಿದೆ.

ಸರ್ಕಾರಿ ಕಾರ್ಯತಂತ್ರವನ್ನು ನಡೆಸಲು,  ಸಾಮಾಜಿಕ ಚಟುವಟಿಕೆಗಳನ್ನು ನೆಡೆಸುವ ಸಂಘ ಸಂಸ್ಥೆಗಳು,  ಶಿಕ್ಷಣ ಸಂಸ್ಥೆಗಳು, ಪತ್ರಿಕೋದ್ಯಮ, ಖಾಸಗಿ ಹಾಗೂ ಸರ್ಕಾರೀ ಸಂಘಸಂಸ್ಥೆಗಳು, ಸಾರ್ವಜನಿಕರು ಇಂದು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಮೊರೆ ಹೋಗಿ ದೈನಂದಿನ ಕೆಲಸ ಕಾರ್ಯಗಳಿಗೆ ಬೇಕಿರುವ ತಂತ್ರಾಂಶಗಳನ್ನು ಪಡೆಯಬಹುದು.  ಲಭ್ಯವಿಲ್ಲದಲ್ಲಿ ಸಮುದಾಯವನ್ನು ಸಂಪರ್ಕಿಸಲು ಪ್ರಯತ್ನಿಸಿದಲ್ಲಿ ಉತ್ತರ ಸಿಗುವುದು ಖಾತ್ರಿ. ಇದಕ್ಕೆ ಉದಾಹರಣೆಗಳು  ನಮ್ಮ ಮುಂದಿವೆ.

ಕರ್ನಾಟಕದಲ್ಲಿ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಅರಿವನ್ನು ಹೆಚ್ಚಿಸುವ, ಬಳಕೆ, ಅನುಸ್ಥಾಪನೆ, ಇತ್ಯಾದಿಗಳ ಬಗ್ಗೆ ಅರಿವನ್ನು ಹಂಚಿಕೊಳ್ಳುವ ಕೆಲಸ ಹೆಚ್ಚಬೇಕಿದೆ. ಸರಕಾರದ ಮಟ್ಟದಲ್ಲಿ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಅವಲಂಬನೆಯ ಬಗ್ಗೆ ಕಾರ್ಯೋನ್ಮುಖವಾಗಬೇಕಿದೆ. ಕನ್ನಡ ಟೈಪಿಸುವುದು, ಓದುವುದು ಮಾತ್ರವಲ್ಲದೇ ಇತರೆ ತಂತ್ರಾಂಶಗಳನ್ನು ತನ್ನ ಸರ್ಕಾರೀ ಕೆಲಸಗಳಿಗೆ ತಾನೇ ಅಭಿವೃದ್ಧಿಪಡಿಸಿಕೊಳ್ಳುತ್ತಾ, ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು,   ಸರ್ಕಾರೀ ಶಾಲೆ ಇತ್ಯಾದಿಗಳಲ್ಲಿ ಮುಕ್ತ ತಂತ್ರಾಂಶವನ್ನು ವಿತರಿಸುವುದಲ್ಲದೇ, ಅದನ್ನು ಬಳಸಲು ಬೇಕಿರುವ ಕುಶಲತೆ, ಮಾತೃಭಾಷೆಯಲ್ಲಿ ಅದಕ್ಕೆ ಬೇಕಿರುವ ಆಕರ ಪಠ್ಯ, ಇತ್ಯಾದಿಗಳನ್ನು ಮೊದಲು ಶಿಕ್ಷಕರಿಗೆ ಕರಗತ ಗೊಳಿಸಿ, ಅವರನ್ನು ಸಬಲರನ್ನಾಗಿಸಿ ನಂತರ ಮಕ್ಕಳಿಗೂ ಅದರ ಅರಿವು ಮೂಡುವಂತೆ ಮಾಡಬೇಕಿದೆ.  ಕಾಲೇಜು ಪಠ್ಯದಲ್ಲಿ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಬೋಧನೆಯ ಜೊತೆ ಅದನ್ನು ಪ್ರಾಯೋಗಿಕ ಕಲಿಕೆಯಲ್ಲಿ ಬಳಸಿಕೊಳ್ಳುತ್ತಾ ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆಗಳನ್ನು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಹೇಗೆ ಪ್ರಾರಂಭಿಸಬಹುದು ಎಂಬುದನ್ನು ಒತ್ತಿ ಹೇಳಬೇಕಿದೆ.  ಇದು ಅತ್ಯಂತ ಕಠಿಣ ಕೆಲಸವಾಗಿದ್ದು, ಯುವ ಜನಾಂಗ ಇದರಲ್ಲಿ ತಮ್ಮ ಕೊಡುಗೆಯನ್ನು ನೀಡಬಹುದು.

ಮುಕ್ತ ಹಾಗೂ ಸ್ವತಂತ್ರ  ತಂತ್ರಾಂಶದ ಅಭಿವೃದ್ಧಿಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಎಂದರೆ ಕನ್ನಡದಲ್ಲಿ ಎಲ್ಲ ತಂತ್ರಾಂಶಗಳು ಇರಬೇಕು ಎಂಬುದು ಮಾತ್ರವಲ್ಲ. ಕನ್ನಡಿಗರಿಗೆ ಬೇಕಿರುವ ಎಲ್ಲ ತರಹದ ತಂತ್ರಾಂಶಗಳು, ಅಂದರೆ ದೈನಂದಿನ ಚಟುವಟಿಕೆ, ಕಲಿಕೆ, ಅಭಿವೃದ್ಧಿ, ಅನ್ವೇಷಣೆ, ಆವಿಷ್ಕಾರ ಇತ್ಯಾದಿಗಳಿಗೆ ಬೇಕಾದ ಸವಲತ್ತುಗಳನ್ನು ಕನ್ನಡಿಗರು ಸುಲಭದಲ್ಲಿ ಗ್ರಹಿಸಿ, ತಾವಾಗೇ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ ಸ್ವಾವಲಂಬಿಗಳಾಗುವತ್ತ ಮುನ್ನೆಡೆಯುವುದು. ಕಂಪ್ಯೂಟರ್, ಮೊಬೈಲ್ ಇಷ್ಟೇ ಅಲ್ಲದೆ ಶಾಲೆ, ಕಾಲೇಜು, ಅಂಗಡಿ, ಆಸ್ವತ್ರೆ, ಬ್ಯಾಂಕ್ ಹೀಗೆ ಹತ್ತು ಹಲವಾರು ಸ್ಥಳಗಳಲ್ಲಿ ದುಡಿಯುವ, ಕಲಿಯುವ ಕನ್ನಡಿಗನಿಗೆ ಕನ್ನಡ ತಂತ್ರಾಂಶಗಳ  ಕೊರತೆ ಇರಬಾರದು, ಇದ್ದರೂ ಅದು ಹೊರೆಯಾಗದಂತೆ ಮುಕ್ತವಾಗಿ, ಸ್ವತಂತ್ರವಾಗಿ ದೊರೆಯುವಂತಾಗಬೇಕು.

ನಮಗೆ ತಿಳಿದ ಹಾಗು ತಿಳಿಯದ ವಿಷಯಗಳ ಬಗ್ಗೆ ವಿಚಾರವಿನಿಮಯ ಮಾಡುವ - ಹರಟೆ ಕಟ್ಟೆಯನ್ನು ಕಲಿಕೆಯ ಕಟ್ಟೆಯನ್ನಾಗಿಸುವ ಸಂಸ್ಕೃತಿ (ನಮ್ಮ ಹಿರಿಯ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ಕಟ್ಟಲು ಈ ಕೆಲಸ ಮಾಡುತ್ತಿದ್ದುದನ್ನು ಕೇಳಿದ್ದೇನೆ)ಯನ್ನು ನಾವು ಬೆಳೆಸಬೇಕಿದೆ. ಇದರ ಮುಖೇನ ಹೊಸ ಜನಾಂಗಕ್ಕೆ ವೈಜ್ಞಾನಿಕ, ತಾಂತ್ರಿಕ ಕುಶಲತೆಯನ್ನು ಕೊಂಡೊಯ್ಯಲು ಸಾಧ್ಯ. ಮುಕ್ತ ತಂತ್ರಾಂಶದ ಸಮುದಾಯದ ಬೆಳವಣಿಗೆಗೆ ಇಂತಹ ವೇದಿಕೆಗಳು ಮುಖ್ಯ, ಕೊನೆಗೆ ಇದರ ಫಲವನ್ನು ಅನುಭವಿಸುವವರೂ ನಾವೇ ಅಲ್ಲವೇ?


ಯುವ ಸಾಫ್ಟ್‌ವೇರ್ ತಂತ್ರಜ್ಞರಾದ ಓಂಶಿವಪ್ರಕಾಶ್ ಮುಕ್ತ ತಂತ್ರಾಂಶ, ಲಿನಕ್ಸ್, ಕನ್ನಡ ವಿಕಿಪೀಡಿಯಾಗಳಲ್ಲಿ ಸಕ್ರಿಯರು. 'ಹೆಜ್ಜೆ' ಕನ್ನಡ ಯುವ ಸಮುದಾಯದ ಸಂಚಾಲಕರು. 'ಲಿನಕ್ಸಾಯಣ' ಜಾಲತಾಣವನ್ನು ನಡೆಸುತ್ತಿದ್ದಾರೆ.

1 comment:

 1. In online gaming, where gamers compete to outdo each other, an introduction bonus is a crucial element. The same is true at casinos, that are used as a part of} their promotions to draw new customers. This platform features one of the appealing web sites within the online gaming market or online playing web site, which is one of the|is amongst the|is doubtless considered one of the} reasons 1xbet korea for the 7Bit Casino rating’s rise. The finest characteristic about the deposit bonuses is that the wagering requirement is merely 25x.

  ReplyDelete