ಕನ್ನಡ ಮತ್ತು ಡಿಟಿಪಿ

'ಕಂಪ್ಯೂಟರ್ ಮತ್ತು ಕನ್ನಡ' ಕೃತಿಯಿಂದ ಆಯ್ದ ಅಧ್ಯಾಯ
ಬೇಳೂರು ಸುದರ್ಶನ

ಡಿಟಿಪಿ ಎಂದರೆ ಡೆಸ್ಕ್ (D) ಟಾಪ್(T) ಪಬ್ಲಿಶಿಂಗ್(P). ಸಾಮಾನ್ಯವಾಗಿ ಮೇಜಿನ ಮೇಲೆ ಇರುವ ಕಂಪ್ಯೂಟರಿನಲ್ಲಿ ಕೆಲಸ ಮಾಡಿ ಮುದ್ರಣಕ್ಕೆ ಬೇಕಾದ ಕಡತಗಳನ್ನು ತಯಾರಿಸುವುದೇ ಡಿಟಿಪಿ ಎಂದು ಸರಳವಾಗಿ ಹೇಳಬಹುದು.

ಕಂಪ್ಯೂಟರಿನಲ್ಲಿ ಹೀಗೆ ವಿನ್ಯಾಸ ಮಾಡುವ ಕೇಂದ್ರಗಳನ್ನು ಡಿಟಿಪಿ ಸೆಂಟರ್ ಎಂದು ಕರೆಯಲಾಗಿದೆ. ಬೆಂಗಳೂರಿನಲ್ಲಿ ಮತ್ತು ಹಲವು ಜಿಲ್ಲಾ / ತಾಲೂಕು ಕೇಂದ್ರಗಳಲ್ಲಿ ಎಸ್‌ಟಿಡಿ - ಐಎಸ್‌ಡಿ ಫಲಕಗಳ ಹಾಗೆಯೇ `ಇಲ್ಲಿ ಡಿಟಿಪಿ ಮಾಡಲಾಗುವುದು' ಎಂದು ಪ್ರಕಟಿಸಿದ್ದನ್ನು ನೀವು ನೋಡಿರುತ್ತೀರಿ. ಒಂದು ನಿರ್ದಿಷ್ಟ ಶುಲ್ಕವನ್ನು ಪಾವತಿ ಮಾಡಿ ನಿಮಗೆ ಬೇಕಾದ ಮಾಹಿತಿಯನ್ನು, ನಿಮ್ಮ ಇಷ್ಟವಾದ ವಿನ್ಯಾಸದಲ್ಲಿ ರೂಪಿಸಿಕೊಂಡು ಸಾಫ್ಟ್‌ವೇರ್ ಕಡತಗಳನ್ನಾಗಿ ಮುದ್ರಣಾಲಯಕ್ಕೆ ಒಯ್ಯಬಹುದು. ಇತ್ತೀಚೆಗೆ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕಗಳು ಹೆಚ್ಚಾಗಿ ಇರುವುದರಿಂದ ಡಿಟಿಪಿ ಆದ ಕಡತಗಳನ್ನು ನೇರವಾಗಿ ಮುದ್ರಣಾಲಯಕ್ಕೇ ಕಳಿಸಬಹುದು.

ವಿಸಿಟಿಂಗ್ ಕಾರ್ಡ್, ಲೆಟರ್‌ಹೆಡ್, ಕರಪತ್ರಗಳು, ಪುಸ್ತಿಕೆಗಳು, ದೊಡ್ಡ ದೊಡ್ಡ ಪುಸ್ತಕಗಳು, ನಿಘಂಟುಗಳು, ಪ್ರಕಟಣಾ ಸಂಸ್ಥೆಗಳ ಹಲವು ಬಗೆಯ ಪುಸ್ತಕಗಳು, ಈಗ ನಗರಗಳಲ್ಲಿ ಹೆಚ್ಚು ಬಳಕೆಯಲ್ಲಿರುವ ಫ್ಲೆಕ್ಸ್ ಫಲಕಗಳಿಗೆ, ಹೋರ್ಡಿಂಗ್‌ಗಳಿಗೆ  ಬೇಕಾದ ವಿನ್ಯಾಸಗಳು - ಹೀಗೆ ಅಂಗೈ ಅಗಲದ ವಿಸಿಟಿಂಗ್ ಕಾರ್ಡಿನಿಂದ ಹಿಡಿದು  ನೂರು ಅಡಿ ಅಗಲದ ಹೋರ್ಡಿಂಗ್‌ವರೆಗೆ ಎಲ್ಲಾ ಬಗೆಯ ವಿನ್ಯಾಸವನ್ನೂ ಡಿಟಿಪಿ ಕೇಂದ್ರದಲ್ಲಿ ಮಾಡಿಸಬಹುದು.

ಯಾರಿಗೆ ಡಿಟಿಪಿ ಬೇಕು? 
ಡಿಟಿಪಿ ಎಲ್ಲರಿಗೂ ಬೇಕು! ಲೇಖಕರು ತಮ್ಮ ಪುಸ್ತಕಗಳನ್ನು ಡಿಟಿಪಿ ಮಾಡಿಸಿಯೇ ಪ್ರಕಾಶಕರಿಗೆ ಕೊಡುತ್ತಾರೆ. ವೆಬ್‌ಸೈಟ್‌ಗಳಲ್ಲಿ ಬೇಕಾದ ವಿನ್ಯಾಸಗಳನ್ನು ಮಾಡಿಸಲೂ ಡಿಟಿಪಿ ನೆರವಿಗೆ ಬರುತ್ತದೆ. ಟೆಲಿವಿಜನ್ ಚಾನೆಲ್‌ಗಳಲ್ಲಿ ಬರುವ ವಿನ್ಯಾಸಗಳನ್ನೂ ಡಿಟಿಪಿಯಿಂದಲೇ ರೂಪಿಸುತ್ತಾರೆ. ರೇಡಿಯೋದಂಥ ಶ್ರವ್ಯ ಮಾಧ್ಯಮವೊಂದನ್ನು ಬಿಟ್ಟರೆ ಮುದ್ರಣ, ದೃಶ್ಯ ಮತ್ತು ಆನ್‌ಲೈನ್ ಮಾಧ್ಯಮಗಳಿಗೆ ಡಿಟಿಪಿ ಬೇಕು.

ವರ್ಡ್‌ನಲ್ಲಿ ಡಿಟಿಪಿ ಬರುವುದಿಲ್ಲವೆ? 
ಎಂಎಸ್ ವರ್ಡ್ ಅಥವಾ ಮೈಕ್ರೋಸಾಫ್ಟ್ ವರ್ಡ್ ಎನ್ನುವುದು ಮೈಕ್ರೋಸಾಫ್ಟ್ ಸಂಸ್ಥೆಯು ರೂಪಿಸಿರುವ, ಒಂದು ವರ್ಡ್ ಪ್ರಾಸೆಸರ್ / ಪದಸಂಸ್ಕರಣ ತಂತ್ರಾಂಶ. ಇದು ಪಾವತಿಸಿ ಬಳಸಬೇಕಾದ ತಂತ್ರಾಂಶ. ಮುಕ್ತವಾಗಿ ಲಭ್ಯವಿರುವ ಓಪನ್ ಆಫೀಸ್, ಲಿಬ್ರೆಆಫೀಸ್‌ನಂಥ ತಂತ್ರಾಂಶಗಳೂ ವರ್ಡ್ ಪ್ರಾಸೆಸರ್‌ಗಳೇ ಆಗಿವೆ. ಇವುಗಳಲ್ಲಿ ನೀವು ಅಕ್ಷರ ಜೋಡಣೆ ಮಾಡಬಹುದು; ಕೆಲವೆಡೆ ಚಿತ್ರಗಳನ್ನೂ ಸೇರಿಸಬಹುದು. ಆದರೆ ವರ್ಡ್ ಪ್ರಾಸೆಸರ್‌ಗಳಲ್ಲಿ ಕೆಲವು ಅನಾನುಕೂಲಗಳಿವೆ:

ವರ್ಡ್ ಪ್ರಾಸೆಸರ್‌ಗಳಲ್ಲಿ ಚಿತ್ರಗಳನ್ನು ಬದಲಿಸುವ, ತಿದ್ದುವ, ಬೇಕಾದ ಸ್ಥಳದಲ್ಲಿ ಬೇಕಾದ ರೀತಿಯಲ್ಲಿ ಸ್ಥಾಪಿಸುವುದಕ್ಕೆ ಆಗುವುದಿಲ್ಲ; ಇರುವ ಸೀಮಿತ ಅವಕಾಶಗಳಲ್ಲಿ ಈ ಚಿತ್ರಗಳನ್ನು ಪಠ್ಯದ ಪಕ್ಕದಲ್ಲೋ, ಪಠ್ಯದ ಕೆಳಭಾಗದಲ್ಲೋ ಸುಮ್ಮನೆ ಇಡಬಹುದೇ ಹೊರತು ಹೆಚ್ಚಿನ ಸಾಧ್ಯತೆಗಳಿಲ್ಲ.

ವರ್ಡ್ ಪ್ರಾಸೆಸರ್‌ಗಳಲ್ಲಿ ಪಠ್ಯವನ್ನು ವಿವಿಧ ವಿನ್ಯಾಸಗಳಿಗೆ ತಕ್ಕಂತೆ ರೂಪಿಸುವ ಅವಕಾಶಗಳೂ ತುಂಬಾ ಸೀಮಿತ. ಅಲ್ಲದೆ ಅಲ್ಲಲ್ಲಿ ಪಠ್ಯಗಳನ್ನು ಎತ್ತಿ ತೆಗೆಯುವ, ಪುಟದ ಹೊರಗಡೆ ಇಟ್ಟುಕೊಳ್ಳುವ, ಅಥವಾ ಪಠ್ಯಭಾಗವನ್ನು ಬೇಕೆಂದ ಸ್ಥಳದಲ್ಲಿ ಕೂರಿಸುವ ಅವಕಾಶವಿಲ್ಲ.

ವರ್ಡ್ ಪ್ರಾಸೆಸರ್‌ಗಳಲ್ಲಿ ಚಿತ್ರ ಮತ್ತು ಪಠ್ಯಗಳನ್ನು ಹಲವು ವಿಭಿನ್ನ ವಿನ್ಯಾಸಗಳಿಗೆ ರೂಪಾಂತರಿಸುವ ವಿಪುಲ ಅವಕಾಶವಿಲ್ಲ.
ಆದ್ದರಿಂದ, ಅಸಂಖ್ಯ ವಿನ್ಯಾಸದ ಸಾಧ್ಯತೆಗಳನ್ನು ಹೊಂದಿರುವ ಡಿಟಿಪಿ ತಂತ್ರಾಂಶಗಳನ್ನೇ ನಾವು ಡಿಟಿಪಿ ಮಾಡಲು ಬಳಸಬೇಕಿದೆ. ಆರಂಭದ ಅಕ್ಷರಜೋಡಣೆಗೆ ಮಾತ್ರವೇ ವರ್ಡ್ ಪ್ರಾಸೆಸರ್‌ನ್ನು ಬಳಸಬಹುದಾಗಿದೆ.

ವಿನ್ಯಾಸ ಎಂದರೇನು?  ಯಾಕೆ ಬೇಕು? ಎಷ್ಟಿರಬೇಕು? 
ಮೇಲೆ ತಿಳಿಸಿದ ಮಾಹಿತಿಯಿಂದ ಒಂದು ವಿಷಯ ಸ್ಪಷ್ಟವಾಗುತ್ತದೆ: ಯಾವುದೇ ಚಿತ್ರ - ಪಠ್ಯವನ್ನು ವಿನ್ಯಾಸಗೊಳಿಸುವುದು ಪ್ರಕಟಣೆಯ ಅತಿಮುಖ್ಯ ಅಂಶವಾಗಿದೆ. ಹಾಗಾದರೆ ವಿನ್ಯಾಸ ಎಂದರೆ ಏನು ಎಂದು ತಿಳಿಯಬೇಕಿದೆ, ಅಲ್ಲವೆ?

ವಿನ್ಯಾಸ ಎಂದರೆ ಓದುಗರು / ನೋಡುಗರು ಕಣ್ಣಿಗೆ ಶ್ರಮವಿಲ್ಲದೆ ಓದಲು ಅನುಕೂಲವಾಗುವಂತೆ, ಓದುಗರಿಗೆ ಆಸಕ್ತಿ ಹುಟ್ಟಿಸುವಂತೆ ಮತ್ತು ನೀಡಬೇಕಾದ ಮಾಹಿತಿಗಳನ್ನು ಅಚ್ಚುಕಟ್ಟಾಗಿ ರೂಪಿಸಲು ಒಂದು ಶಿಸ್ತಿನಲ್ಲಿ ಜೋಡಿಸುವ ಪ್ರಕ್ರಿಯೆ. ಉದಾಹರಣೆಗೆ ಎರಡು ಚಿತ್ರಗಳನ್ನು ಹೋಲಿಕೆಗಾಗಿ ನೀಡಬೇಕಿದೆ ಎಂದುಕೊಳ್ಳೋಣ. ಎರಡೂ ಚಿತ್ರಗಳ ಅಗಲ, ಉದ್ದ ಒಂದೇ ಇದ್ದರೆ ಹೋಲಿಸಲು ಸಾಧ್ಯ. ಮೂಲದಲ್ಲಿ ದೊರೆತ ಚಿತ್ರಗಳು ದೊಡ್ಡದಿದ್ದರೂ, ಪುಟದಲ್ಲಿ ಅವನ್ನು ಒಂದೇ ಗಾತ್ರಕ್ಕೆ ತರಬೇಕು; ಅಲ್ಲದೆ ಅವುಗಳು ಒಂದೇ ಮಟ್ಟದಲ್ಲಿ ಕಾಣಿಸಬೇಕು. ಅವುಗಳಿಗೆ ಒಂದೇ ತಲದಲ್ಲಿ ಶೀರ್ಷಿಕೆ ಇರಬೇಕು. ಎರಡೂ ಚಿತ್ರಗಳ ಬಣ್ಣಗಳ ಸಂಯೋಜನೆ ಸಮಾನವಾಗಿರಬೇಕು. ಹೀಗೆ ಎರಡೂ ಚಿತ್ರಗಳನ್ನು ಒಂದೇ ಪ್ರಮಾಣಕ್ಕೆ ತಂದು ಪುಟದಲ್ಲಿ ಅಚ್ಚುಕಟ್ಟಾಗಿ ಕೂರಿಸಿದರೆ ಅದು ವಿನ್ಯಾಸ ಎನ್ನಿಸಿಕೊಳ್ಳುತ್ತದೆ.

ಪ್ರತಿಯೊಂದು ಅಧ್ಯಾಯಕ್ಕೆ ಸೂಕ್ತ ಗಾತ್ರದ ಶೀರ್ಷಿಕೆ ಕೊಡುವುದು, ಲೇಖಕರ ಹೆಸರನ್ನು ಸೂಕ್ತವಾಗಿ ದಪ್ಪ ಅಕ್ಷರಗಳಲ್ಲಿ ನಮೂದಿಸುವುದು, ಪ್ಯಾರಾಗಳ ಶೀರ್ಷಿಕೆಗಳನ್ನು ಸ್ಪಷ್ಟವಾಗಿ ಕಾಣಿಸುವುದು, ಚಿತ್ರಶೀರ್ಷಿಕೆಗಳನ್ನು ಕೊಡುವುದು - ಹೀಗೆ ಎಲ್ಲವನ್ನೂ ವಿನ್ಯಾಸದ ಕೆಲಸಗಳು ಎಂದೇ ಹೆಸರಿಸಬಹುದು.

ಮದುವೆಯ ಆಹ್ವಾನಪತ್ರಗಳನ್ನೂ ಡಿಟಿಪಿ ಮೂಲಕವೇ ರೂಪಿಸುತ್ತಾರೆ. ಇಲ್ಲಿ  ಸಾಂಪ್ರದಾಯಿಕ ಅಲಂಕಾರವೇ ಮುಖ್ಯ. ಆದರೆ ಪ್ರಬಂಧ ಸಂಕಲನದಲ್ಲಿ ಪಠ್ಯಕ್ಕೇ ಆದ್ಯತೆ. ಹೀಗೆ ಯಾವ ಕೆಲಸಕ್ಕೆ ಎಷ್ಟು ಪ್ರಮಾಣದ ಬಣ್ಣ, ಚಿತ್ರ, ವಿನ್ಯಾಸ, ಅಲಂಕಾರ ಬೇಕು ಎಂಬುದನ್ನು ಅರಿತುಕೊಂಡೇ ಡಿಟಿಪಿ ಮಾಡಬೇಕು. ಇದು ಅನುಭವದಿಂದಲೇ ಮೂಡಿಬರುತ್ತದೆ.

ಡಿಟಿಪಿ ಮಾಡಲು ಇರಬೇಕಾದ ಆಸಕ್ತಿಗಳೇನು?   
ಡಿಟಿಪಿ ಮಾಡಲು ಮುಖ್ಯವಾಗಿ ವಿನ್ಯಾಸ ಮಾಡುವ ಆಸಕ್ತಿ ಇರಬೇಕು. ಈಗ ಮಾರುಕಟ್ಟೆಯಲ್ಲಿ, ವೆಬ್‌ಸೈಟ್‌ಗಳಲ್ಲಿ ಇರುವ ವಿನ್ಯಾಸಗಳನ್ನು ಸದಾ ಗಮನಿಸುತ್ತ ಇರಬೇಕಾಗುತ್ತದೆ. ಇದಲ್ಲದೆ ಮುದ್ರಣ ರಂಗದ ಕಿರು ಪರಿಚಯ ಕೂಡಾ ಇರಬೇಕು. ಪುಸ್ತಕ, ಕರಪತ್ರ, ಹೋರ್ಡಿಂಗ್, ಪೋಸ್ಟರ್ - ಎಲ್ಲದಕ್ಕೂ ಒಂದು ನಿರ್ದಿಷ್ಟ ಆಕಾರ ಮತ್ತು ಗಾತ್ರ ಇರುತ್ತದೆ. ಮುದ್ರಣ ಮಾಧ್ಯಮದ ಅಳತೆಗಳು, ಪರಿಭಾಷೆ - ಎಲ್ಲವನ್ನೂ ಪ್ರಾಥಮಿಕ ಮಟ್ಟದಲ್ಲಾದರೂ ತಿಳಿದುಕೊಂಡಿರಬೇಕು. ಉದಾಹರಣೆಗೆ ಡೆಮಿ ಚತುರ್ದಳ (ಡೆಮಿ ಒನ್ ಫೋರ್ಥ್) ಕ್ರೌನ್ ಅಷ್ಟದಳ (ಕ್ರೌನ್ ಒನ್ ಏಯ್‌ಥ್) - ಇವುಗಳ ಅಳತೆಯು ಮಿಲಿಲೀಟರ್‌ಗಳಲ್ಲಿ ಎಷ್ಟು, ಇಂಚುಗಳಲ್ಲಿ ಎಷ್ಟು ಎಂದು ಗೊತ್ತಿಲ್ಲದೇ ಹೋದರೆ ವಿನ್ಯಾಸ ಮಾಡಲು ಅಸಾಧ್ಯ. ಒಂದು ಪುಸ್ತಕದ ಗಾತ್ರವೇ ಗೊತ್ತಿಲ್ಲದಿದ್ದರೆ, ಅದಕ್ಕೆ ಬೇಕಾದ ಸ್ಪೈನ್ (ಪುಸ್ತಕದ ಬೆನ್ನುಹುರಿ, ಅರ್ಥಾತ್ ಪುಸ್ತಕದ ಮಧ್ಯಭಾಗದ ದಪ್ಪದ ಜಾಗ) ಎಷ್ಟು ಅಗಲ ಎಂದು ತಿಳಿಯುವುದಿಲ್ಲ. ಆಗ ವಿನ್ಯಾಸವೇ ಕೆಟ್ಟುಹೋಗುತ್ತದೆ. ಮುಖಪುಟದ ಬಣ್ಣವು ಹಿಂಪುಟಕ್ಕೂ ಅನಗತ್ಯವಾಗಿ ಹರಿಯುತ್ತದೆ.

ಇದಲ್ಲದೆ ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರಜೋಡಣೆ ಮಾಡುವುದು, ಕರಡು ತಿದ್ದುವುದು, ಬಣ್ಣಗಳ ಸಂಯೋಜನೆ, ಚಿತ್ರಗಳನ್ನು ಸಂಪಾದಿಸುವುದು - ಈ ಎಲ್ಲ  ಕುಶಲತೆಗಳನ್ನು ಪ್ರಾಥಮಿಕ ಹಂತದಲ್ಲಾದರೂ ಕಲಿತಿರಬೇಕು. ಕಾಲಕ್ರಮೇಣ ಆಸಕ್ತಿ ಬೆಳೆಸಿಕೊಂಡರೆ ಈ ಎಲ್ಲಾ ಸಂಕೀರ್ಣ ಕೆಲಸಗಳೂ ಸುಲಭವಾಗುತ್ತವೆ ಮತ್ತು ಹೆಚ್ಚು ಹೆಚ್ಚು ಆಸಕ್ತಿ ಹುಟ್ಟಿಸುತ್ತವೆ.

ಡಿಟಿಪಿ ಸಾಫ್ಟ್‌ವೇರ್‌ಗಳ ಪರಿಚಯ 
ಡಿಟಿಪಿ ಮಾಡುವುದಕ್ಕೆ ಹಲವು ಖಾಸಗಿ ಸಂಸ್ಥೆಗಳು ಸಂಕೀರ್ಣ ಮತ್ತು ಬಹುಸಾಧ್ಯತೆಗಳ ತಂತ್ರಾಂಶಗಳನ್ನು ರೂಪಿಸಿವೆ. ಇವುಗಳು ಸಾಮಾನ್ಯ ಭಾರತೀಯರ ಖರೀದಿ ಸಾಮರ್ಥ್ಯಕ್ಕೆ ಹೋಲಿಸಿದರೆ ತುಂಬಾ ದುಬಾರಿ ಎನ್ನಿಸುತ್ತದೆ. ಉದಾಹರಣೆಗೆ ಅಡೋಬ್ ಸಂಸ್ಥೆಯ ಅತ್ಯುತ್ಕೃಷ್ಟ ಡಿಟಿಪಿ ತಂತ್ರಾಂಶ ಇನ್‌ಡಿಸೈನ್. ಇದರ ವಾರ್ಷಿಕ ಬಳಕೆ ಬೆಲೆ (೨೦೧೪ರಲ್ಲಿ) ಸುಮಾರು ೧೮ ಸಾವಿರ ರೂ.ಗಳು. ಇನ್‌ಡಿಸೈನ್ ಜೊತೆಗೇ ಚಿತ್ರಗಳನ್ನು ಸಂಪಾದಿಸಲು, ಹಲವು ಬಗೆಯ ಚಿತ್ರಾಂಶಗಳನ್ನು ಡಿಟಿಪಿಯಲ್ಲಿ ಸೇರಿಸಲು (ಇದನ್ನು ಇಂಗ್ಲಿಷಿನಲ್ಲಿ ಗ್ರಾಫಿಕ್ಸ್ ಎಂದು ಕರೆಯುತ್ತಾರೆ) ಫೋಟೋಶಾಪ್ (ಚಿತ್ರಗಳ ಸಂಪಾದನೆ), ಇಲಸ್ಟ್ರೇಟರ್ (ಸಂಸ್ಥೆಗಳ ಚಿಹ್ನೆ ತಯಾರಿಸುವ, ವಿವಿಧ ಕಲಾಕೃತಿಗಳನ್ನು, ಕೋಷ್ಟಕಗಳನ್ನು ರಚಿಸುವ ಸಾಧನ), - ಹೀಗೆ ಹಲವು ತಂತ್ರಾಂಶಗಳ ಸರಣಿಯನ್ನೇ ಅಡೋಬ್ ಸಂಸ್ಥೆಯು ಮಾರುಕಟ್ಟೆಗೆ ತಂದಿದೆ. (ಈ ಪಾಠದ ಕೊನೆಯಲ್ಲಿ ಒಂದು ಪಟ್ಟಿ ನೀಡಿದೆ, ಗಮನಿಸಿ)

ಗಮನಿಸಿ: ಈ ಹಿಂದೆ ಭಾರತದಲ್ಲಿ ಜನಪ್ರಿಯವಾಗಿದ್ದ ಅಡೋಬ್ ಪೇಜ್‌ಮೇಕರ್ ತಂತ್ರಾಂಶವೂ ಇದೇ ಸಂಸ್ಥೆಗೆ ಸೇರಿದ್ದು, ಈಗ ಅದರ ಅಭಿವೃದ್ಧಿಯನ್ನು ನಿಲ್ಲಿಸಲಾಗಿದೆ. ಆದರೆ ಪೇಜ್‌ಮೇಕರ್ ಕಡತಗಳನ್ನು ಇನ್‌ಡಿಸೈನ್‌ನಲ್ಲಿ ತೆರೆಯಬಹುದಾಗಿದೆ.  

ತಂತ್ರಾಂಶ ರಂಗದಲ್ಲಿ ಹಲವು ಮುಕ್ತ ತಂತ್ರಾಂಶಗಳೂ ಸಿಗುತ್ತವೆ. ಇವುಗಳಲ್ಲಿ  ಸ್ಕ್ರೈಬಸ್, ಇಂಕ್‌ಸ್ಕೇಪ್, ಗಿಂಪ್ ಮತ್ತು ಕ್ರಿತಾ ಮುಖ್ಯವಾದವು. ಖರೀದಿಗೆ ಸಿಗುವ ಮತ್ತು ಮುಕ್ತವಾಗಿ ಸಿಗುವ ತಂತ್ರಾಂಶಗಳ ಪಟ್ಟಿಯನ್ನು ಈ ಪಾಠದ ಕೊನೆಯಲ್ಲಿ ನೀಡಲಾಗಿದೆ. ಇವೆಲ್ಲವೂ ಬಹುತೇಕ ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ಸ್ಥಾಪನೆಯಾಗುತ್ತವೆ.

ವಿನ್ಯಾಸದ ಮೂಲ ಗುಣಗಳು  
ಯಾವುದೇ ಕೃತಿಯನ್ನು ಡಿಟಿಪಿ ಮೂಲಕ ವಿನ್ಯಾಸಗೊಳಿಸಬೇಕು ಎಂದರೆ ಈ ಅಂಶಗಳನ್ನು ಗಮನಿಸಬೇಕು: ವಿನ್ಯಾಸದ ಗಾತ್ರ, ಪುಟಗಳು, ಮುದ್ರಣದ ಮತ್ತು ಬೈಂಡ್ ಆಗುವ ಮಾಹಿತಿಗಳು, ಇತ್ಯಾದಿ.

ಪಠ್ಯ, ಚಿತ್ರಗಳ ಮೂಲ ಅಂಶಗಳು
ಪ್ರತಿಯೊಂದೂ ಡಿಟಪಿ ತಂತ್ರಾಂಶದಲ್ಲಿ ಪರದೆಯ ಮೇಲ್ಭಾಗದಲ್ಲಿ ಮೆನ್ಯು ಇದ್ದೇ ಇರುತ್ತದೆ. ವರ್ಡ್ ಪ್ರಾಸೆಸರ್‌ಗಳಲ್ಲಿ ಇರುವಂತೆಯೇ ಈ ಮೆನ್ಯುಗಳು ಕಾಣಿಸಿದರೂ, ಇಲ್ಲಿ ಆಯ್ಕೆಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ ಮತ್ತು ಮುದ್ರಣರಂಗದ, ಕಲಾರಂಗದ ಹಲವು ಅಂಶಗಳನ್ನು ಹೊಂದಿರುತ್ತವೆ. ಕಾಪಿ ಪೇಸ್ಟ್, ಪೇಸ್ಟ್ ಆಪ್ಶನ್ಸ್, ಚಿತ್ರವನ್ನು ಸೇರಿಸುವ ಪ್ಲೇಸ್ ಆಯ್ಕೆ - ಹೀಗೆ ಕೆಲವು ಸರ್ವೇಸಾಧಾರಣ ಆಯ್ಕೆಗಳ   ಜೊತೆಗೇ ಹಲವು ಆಕಾರಗಳನ್ನು ಜೋಡಿಸುವ, ಪಠ್ಯ ಮತ್ತು ಚಿತ್ರಗಳನ್ನು ಹೊಂದಿಸುವ,  ಇತರೆ ಸಂಕೀರ್ಣ ಅವಕಾಶಗಳನ್ನೂ ಈ ತಂತ್ರಾಂಶಗಳು ನೀಡುತ್ತವೆ.

ಡಿಟಿಪಿ ಕೆಲಸಕ್ಕೆ ಕಲರ್ ಪ್ರಿಂಟಿಂಗ್‌ನ ಸೂತ್ರಗಳ ಪ್ರಾಥಮಿಕ ಮಾಹಿತಿಯೂ ಅಗತ್ಯ. ಆರ್‌ಜಿಬಿ (ರೆಡ್ ಗ್ರೀನ್ ಬ್ಲೂ),  ಸಿಎಂವೈಕೆ (ಸಯಾನ್, ಮೆಜೆಂಟಾ, ಯೆಲ್ಲೋ, ಬ್ಲಾಕ್) ಗ್ರೇಸ್ಕೇಲ್, ಡಿಪಿಐ (ಡಾಟ್ಸ್ ಪರ್ ಇಂಚಸ್), - ಹೀಗೆ ಕೆಲವು ತಾಂತ್ರಿಕ ಮಾಹಿತಿಗಳನ್ನು ಅರಿಯಬೇಕು. ಚಿತ್ರಗಳ ವಿಷಯಕ್ಕೆ ಬಂದರೆ ಜೆಪೆಗ್, ಟಿಫ್, ಬಿಟ್‌ಮ್ಯಾಪ್, ಜಿಫ್, ಪಿಎನ್‌ಜಿ ಫಾರ್ಮಾಟ್‌ಗಳ ಬಗ್ಗೆ ಅರಿವು ಇರಬೇಕಾಗುತ್ತದೆ.

ಡಿಟಿಪಿ ಮಾಡುವಾಗ ಫ್ಲೋ, ರನಾನ್, ಶೀರ್ಷಿಕೆ, ಫುಟರ್, ಹೆಡರ್, ಬಾಕ್ಸ್, ಪರಿವಿಡಿ, ಮುಖಪುಟ, ಹಿಂಪುಟ, ಫೋಲಿಯೋ, ವಿಡೋ ಮತ್ತು ಆರ್ಫನ್, ಅಲೈನ್‌ಮೆಂಟ್, ಗಟರ್ ಸ್ಪೇಸ್, ಬ್ರೀದಿಂಗ್ ಸ್ಪೇಸ್, ಡ್ರಾಪ್‌ಕ್ಯಾಪ್ ಮುಂತಾದ ಡಿಟಿಪಿ ಕೇಂದ್ರಿತ ಪದ / ಪದಗುಚ್ಛಗಳನ್ನು ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಂದೂ ಮೆನ್ಯುವಿನಲ್ಲಿ ಇಂಥ ಹತ್ತಾರು ಪದಗಳಿರುತ್ತವೆ. ನಿಧಾನವಾಗಿ ಒಂದು ಖಾಲಿ ಪುಟದಲ್ಲಿ ಕೆಲವು ಪಠ್ಯಗಳನ್ನು ನಮೂದಿಸಿ ಈ ಆಯ್ಕೆಗಳನ್ನು ಮಾಡಿ ಪ್ರಯೋಗ ಮಾಡಿಯೇ ಇವುಗಳ ಅರ್ಥ ತಿಳಿಯಬೇಕು. ಕೊನೆಯ ಮೆನ್ಯುವಿನಲ್ಲಿ ಸಾಮಾನ್ಯವಾಗಿ ಸಹಾಯದ ಅಧ್ಯಾಯ ಇರುತ್ತದೆ. ಇಲ್ಲಿ ನೀವು ಈ ತಂತ್ರಾಂಶವನ್ನು, ಅದರ ಸಂಕೀರ್ಣ ಮೆನ್ಯುವನ್ನು ಬಳಸಿಕೊಳ್ಳುವುದು ಹೇಗೆ ಎಂಬ ಸಚಿತ್ರ ವಿವರಣೆ ಇರುತ್ತದೆ. ಇತ್ತೀಚೆಗೆ ಈ ಸಹಾಯಪುಟವು ಆನ್‌ಲೈನ್ ಕೋಶಕ್ಕೆ ಜೋಡಣೆಯಾಗಿರುತ್ತದೆ. ಆದ್ದರಿಂದ ನೀವು ತಾಜಾ ಮಾಹಿತಿಯನ್ನು ಪಡೆಯಬಹುದು.

ಡಿಟಿಪಿ ಕಲಿಯುವುದು ಒಂದು ಕಲೆ. ಅದಕ್ಕೆ ದಿನದ ನಿರ್ದಿಷ್ಟ ಕಾಲವನ್ನು ನೀಡಬೇಕು. ಗಮನವಿಟ್ಟು ಕಲಿಯಬೇಕು. ಅನುಭವಿಗಳಲ್ಲಿ ಕೇಳಿ ತಿಳಿಯಬೇಕು. ಪದೇ ಪದೇ ವಿವಿಧ ಆಯ್ಕೆಗಳನ್ನು ಪ್ರಯೋಗಿಸಿ ಅರಿಯಬೇಕು.

ಡಿಟಿಪಿ ಸೂತ್ರಗಳು 
ಪುಸ್ತಕದಂಥ ಪಠ್ಯದ ಸಂದರ್ಭದಲ್ಲಿ ಬರೀ ಉದ್ದುದ್ದ ಸಾಲುಗಳು, ಪ್ಯಾರಾಗಳು ಇರಬಾರದು. ಅಲ್ಲಲ್ಲಿ ಸೂಕ್ತವಾದ ಪ್ಯಾರಾ ಶೀರ್ಷಿಕೆಗಳನ್ನು ಬರೆಯಬೇಕು.

ಲೈನ್‌ಸ್ಪೇಸ್ (ಸಾಲು ಅಂತರ): ಓದುವ ಪಠ್ಯಭಾಗವನ್ನು ರನ್‌ಆನ್ ಟೆಕ್ಸ್ಟ್  ಎಂದು ಕರೆಯುತ್ತಾರೆ. ಈ ಸಾಲುಗಳ ಅಂತರವನ್ನು ತಂತ್ರಾಂಶದಲ್ಲೇ ಅಳವಡಿಸಲಾಗಿದೆ. ಸಾಮಾನ್ಯ ಸಂದರ್ಭಗಳಲ್ಲಿ ಈ `ಆಟೋ ಸ್ಪೇಸ್'ನ್ನೇ ಬಳಸಬೇಕು. ವಿನ್ಯಾಸದ ಸಂದರ್ಭಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಅಂತರವನ್ನು ಬದಲಿಸಬಹುದು.

ಎರಡು ಅಥವಾ ಹೆಚ್ಚು ಕಾಲಂಗಳಿರುವ ಕಡೆ ಬದಿಯ ಅಂತರವನ್ನು ಪುಸ್ತಕದ ಗಾತ್ರಕ್ಕೆ ತಕ್ಕಂತೆ ಇಟ್ಟುಕೊಳ್ಳಬೇಕು. ಕಾಲಂಗಳ ನಡುವಣ ಅಂತರವನ್ನು `ಗಟರ್‌ಸ್ಪೇಸ್' ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಕನಿಷ್ಠ ೫ ಮಿಲಿಮೀಟರ್ ಇರುತ್ತದೆ.

ವಿನ್ಯಾಸದಲ್ಲಿ ಪಠ್ಯವನ್ನು ಜಾಗ ಇದ್ದಲ್ಲೆಲ್ಲ ತುಂಬುವುದಕ್ಕಿಂತ ಬದಿಗಳಲ್ಲಿ, ಮೇಲೆ ಮತ್ತು ಕೆಳಭಾಗದಲ್ಲಿ ಕಲಾತ್ಮಕವಾಗಿ ಬಿಳಿ ಜಾಗವನ್ನು ಬಿಡಬೇಕು. ಇದನ್ನು ಬ್ರೀದಿಂಗ್ ಸ್ಪೇಸ್ ಎನ್ನುತ್ತಾರೆ. ಇದನ್ನು ಅನುಭವದಿಂದಲೇ ಕರಗತ ಮಾಡಿಕೊಳ್ಳಬೇಕು.

ಇದಲ್ಲದೆ ಡಿಟಿಪಿ ಕೆಲಸಗಳಲ್ಲಿ ಅಂಚುಗಳನ್ನು ಹಾಕುವುದು, ರಿವರ್ಸ್ ಪಠ್ಯ, ಸ್ಕ್ರೀನ್, ಗೆರೆ ಮತ್ತು ಬಾಕ್ಸ್‌ಗಳನ್ನು ಹಾಕುವುದು - ಮುಂತಾದ ಆಯ್ಕೆಗಳಿರುತ್ತವೆ. ಇವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬೇಕೇ ವಿನಃ ಅವಕಾಶ ಇದೆ ಎಂದು ಪದೇ ಪದೇ ಬಳಸಬಾರದು.

ಕನ್ನಡದಲ್ಲಿ ಹೈಫೆನೇಶನ್: ಡಿಟಿಪಿ ತಂತ್ರಾಂಶಗಳು ಹೆಚ್ಚಾಗಿ ಇಂಗ್ಲಿಷ್ ಪಠ್ಯಕ್ಕೆಂದೇ ರೂಪಿಸಿದ್ದು. ಆದ್ದರಿಂದ ಕನ್ನಡದ ಪಠ್ಯವನ್ನು ಸರಿಯಾಗಿ ಹೈಫನೇಶನ್ (ಪದಭಾಗ ಮಾಡುವುದು) ಮಾಡುವುದನ್ನು ಕಲಿತುಕೊಳ್ಳಬೇಕು. ಪ್ರತಿಯೊಂದೂ ತಂತ್ರಾಂಶದಲ್ಲಿ ಹೈಫನೇಶನ್ ಕುರಿತ ಆಯ್ಕೆಗಳನ್ನು ಸೂಕ್ತವಾಗಿ ಬದಲಿಸಿಕೊಳ್ಳಬಹುದು.

ಡಿಟಿಪಿಗೆ ಬೇಕಾದ ಸಾಧನಗಳು
ಡಿಟಿಪಿ ಮಾಡಲು ಮುಖ್ಯವಾಗಿ  ತಂತ್ರಾಂಶ ಬೇಕು. ಈ ಬಗ್ಗೆ ಮೊದಲೇ ಮಾಹಿತಿ ನೀಡಿದೆ.

ಡಿಟಿಪಿ ಮಾಡುವ ಕಂಪ್ಯೂಟರಿನಲ್ಲಿ ವಿವಿಧ ಬಗೆಯ ಮತ್ತು ಬೇರೆ ಬೇರೆ ಭಾಷೆಗಳ ಫಾಂಟ್‌ಗಳು (ಅಕ್ಷರಗಳು) ಇರಬೇಕು.

ಡಿಟಿಪಿಗೆ ಬೇಕಾದ ಚಿತ್ರಗಳನ್ನು ಮೊದಲೇ ಸಂಗ್ರಹಿಸಿ ಒಂದು ಫೋಲ್ಡರಿನಲ್ಲಿ ಇಟ್ಟುಕೊಂಡಿರಬೇಕು. ಈ  ಚಿತ್ರಗಳನ್ನೂ ಸಾಮಾನ್ಯವಾಗಿ ನಾಲ್ಕು ಬಣ್ಣಗಳ (ಸಿಎಂವೈಕೆ) ಜೆಪೆಗ್ ಫಾರ್ಮಾಟ್‌ನಲ್ಲಿ  ಪರಿವರ್ತಿಸಿ ಇಟ್ಟುಕೊಳ್ಳಬೇಕು. ಕಪ್ಪು ಬಿಳುಪು ಪುಸ್ತಕವಾದರೆ ಚಿತ್ರಗಳನ್ನು ಕಪ್ಪು ಬಿಳುಪಿಗೆ ಪರಿವರ್ತಿಸಿಕೊಳ್ಳಬೇಕು.

ಮುದ್ರಣಕ್ಕಾಗಿ ಕಡತವನ್ನು ಕಳಿಸಲು ಪಿಡಿಎಫ್ ಕನ್ವರ್ಟರ್‌ನ್ನು (ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮಾಟ್) ಹೊಂದಿರಬೇಕು. ಏಕೆಂದರೆ ಮುದ್ರಣಾಲಯಗಳಲ್ಲಿ ನಾವು ವಿನ್ಯಾಸಕ್ಕೆ ಬಳಸುವ ತಂತ್ರಾಂಶ ಮತ್ತು ಫಾಂಟ್‌ಗಳು ಇದ್ದೇ ಇರುತ್ತವೆ ಎಂದು ನಿರೀಕ್ಷಿಸಲಾಗದು. ಅಲ್ಲದೆ ನಾವು ಕಳಿಸಿದ ಕಡತದಲ್ಲಿ ಏನೂ ಬದಲಾವಣೆ ಆಗದೆ, ವಿನ್ಯಾಸವು ಹೆಚ್ಚುಕಡಿಮೆಯಾಗದೆ ಮುದ್ರಣವಾಗಬೇಕು ಎಂದಿದ್ದರೆ ಮುದ್ರಕರು ಬದಲಿಸಲಾಗದಂಥ ಪಿಡಿಎಫ್ ಫಾರ್ಮಾಟ್‌ನಲ್ಲಿಯೇ ಕಡತವನ್ನು ಕಳಿಸಬೇಕಾಗುತ್ತದೆ. (ಆಕ್ರೋಬ್ಯಾಟ್ ಪಾವತಿಸಬೇಕಾದ ತಂತ್ರಾಂಶವಾಗಿದೆ ಎಂಬುದನ್ನು ಗಮನಿಸಿ. ಉಚಿತವಾಗಿ ಸಿಗುವ ಪಿಡಿಎಫ್ ಕನ್ವರ್ಟರ್‌ಗಳು ವಿನ್ಯಾಸದ ಪುಟಗಳ ಮೇಲೆ ತಮ್ಮ ಸಂಸ್ಥೆಯ ಹೆಸರನ್ನು ಛಾಪಿಸುವ ಸಾಧ್ಯತೆಯೂ ಇರುತ್ತದೆ.)

ಡಿಟಿಪಿಯನ್ನು ಕಲಿಯುತ್ತ ಹೋದಂತೆಲ್ಲ ಮೇಲಿನ ಹಂತದ ಕುಶಲತೆಯನ್ನೂ ಬೆಳೆಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಡಿಟಿಪಿ ತಂತ್ರಾಂಶದ ಪುಟದಲ್ಲಿ ವರ್ಡ್ ಪ್ರಾಸೆಸರ್‌ನ ಪಠ್ಯವನ್ನು ಪ್ಲೇಸ್ ಮಾಡುವುದು, ಪಠ್ಯದ ಕರಡನ್ನು ತಂತ್ರಾಂಶ ಬಳಕೆಯ ಮೂಲಕ ತಿದ್ದುವುದು, ಫಾಂಟ್ ಪರಿವರ್ತನೆ, ಚಿತ್ರಗಳ ಸಂಪಾದನೆ, (ಎರಡು ಹಂತಗಳಲ್ಲಿ: ಮೊದಲು ಎಡಿಟ್ ಮಾಡುವುದು, ಆಮೇಲೆ ಡಿಟಿಪಿ ಮಾಡುವಾಗ ಟ್ರಿಮ್ ಮಾಡುವುದು ಇತ್ಯಾದಿ), ಪರಿವಿಡಿಯನ್ನು ತಂತ್ರಾಂಶ ಬಳಕೆಯ ಮೂಲಕ ರೂಪಿಸುವುದು ಇತ್ಯಾದಿ.

ಡಿಟಿಪಿಯ ಕಲಿಕೆಯ ಹಂತಗಳು  
ಯಾವುದೇ ತಂತ್ರಾಂಶದಲ್ಲಿ ಮೊದಲು ಒಂದು ಪುಟ ತೆರೆಯುವುದು ಮತ್ತು ಸೇವ್ ಮಾಡುವುದು - ಇದನ್ನು ಕಲಿಯಿರಿ. ಸಾಮಾನ್ಯವಾಗಿ ಕಂಟ್ರೋಲ್+ಓ ಒತ್ತಿದರೆ ಹೊಸ ಕಡತದ ನಿರ್ಮಾಣಕ್ಕಾಗಿ ತಂತ್ರಾಂಶವು ಹಲವು ಮಾಹಿತಿಗಳನ್ನು ಕೇಳುತ್ತದೆ.  ಹಳೆಯ ಕಡತವನ್ನು ತೆರೆಯಲು ಕಂಟ್ರೋಲ್+ಔ ಒತ್ತಬೇಕು. ಪ್ರತಿಯೊಂದೂ ತಂತ್ರಾಂಶವೂ ತನ್ನದೇ ಆದ ಕೀಲಿಮಣೆ ಶಾರ್ಟ್‌ಕಟ್‌ಗಳನ್ನು ಹೊಂದಿರುತ್ತದೆ. ಇತ್ತೀಚೆಗೆ ಒಂದು ತಂತ್ರಾಂಶದ ಶಾರ್ಟ್‌ಕಟ್‌ಗಳಂತೆಯೇ ಇನ್ನೊಂದು ತಂತ್ರಾಂಶದಲ್ಲಿ ಕೀಲಿಮಣೆಯನ್ನು ಬದಲಿಸಿಕೊಳ್ಳುವ ಅನುಕೂಲವೂ ಬಂದಿದೆ.

ಇನ್‌ಡಿಸೈನ್ ಕೆಲಸದ ಪರದೆ. ಚಿತ್ರದಲ್ಲಿ ಡಿಟಿಪಿಯ ವಿವಿಧ ಅವಕಾಶಗಳನ್ನು ಗಮನಿಸಬಹುದು.
ಒಂದು ಪುಟವನ್ನು ತೆರೆದ ಮೇಲೆ ಅದೇ ಪುಟದಲ್ಲಿ ಪಠ್ಯ ಹಾಕುವುದು, ಚಿತ್ರ ಹಾಕುವುದು, ಸಮತಲದಲ್ಲಿ ಎರಡು ಕಾಲಂಗಳನ್ನು ಜೋಡಿಸುವುದು, ಪುಟಸಂಖ್ಯೆ    ಹಾಕುವುದು ಇತ್ಯಾದಿ ಕೆಲಸಗಳನ್ನು ಕಲಿಯಿರಿ. ಹಾಗೆಯೇ ಇನ್‌ಡಿಸೈನ್‌ನಂಥ ತಂತ್ರಾಂಶದಲ್ಲಿ ನೀವು ಮಾಸ್ಟರ್ ಪೇಜ್ ತಯಾರಿಸುವುದು ಹೇಗೆ ಎಂದು ಕಲಿಯಿರಿ. ನೂರಾರು ಪುಟಗಳಲ್ಲಿ ಫುಟರ್ ಅಥವಾ ಹೆಡರ್‌ಗಳನ್ನು, ಪುಟಸಂಖ್ಯೆಗಳನ್ನು ಯಾಂತ್ರಿಕವಾಗಿ ಮೂಡಿಸಬೇಕಾದರೆ ಈ ಮಾಸ್ಟರ್ ಪೇಜ್‌ಗಳನ್ನು ಬಳಸಬೇಕು.

ಗಮನಿಸಿ: ಈಗಿನ ಡಿಟಿಪಿ ತಂತ್ರಾಂಶಗಳಲ್ಲಿ  ಯುನಿಕೋಡ್ ಕನ್ನಡ ಫಾಂಟ್‌ಗಳ ಬಳಕೆ ಸಾಧ್ಯವಿಲ್ಲ. ಇನ್‌ಡಿಸೈನ್ ೬.೦ ಆವೃತ್ತಿಯಲ್ಲಿ ಯುನಿಕೋಡ್ ಕನ್ನಡವನ್ನು ನಮೂದಿಸಬಹುದಾದರೂ ಅದನ್ನು ಬೇಕಾದ ವಿನ್ಯಾಸಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ಸಾಧ್ಯತೆಗಳು ಇನ್ನೂ ಗಟ್ಟಿಯಾಗಿಲ್ಲ. ಆದ್ದರಿಂದ ಈಗಿರುವ ಫಾಂಟ್‌ಗಳನ್ನೇ ಬಳಸಬೇಕು.  

ಅನಂತರ ಡಿಟಿಪಿ ಮೂಲಕ ವಿನ್ಯಾಸ ಮಾಡುವ ವಿವಿಧ ಹಂತಗಳನ್ನು ಕಲಿಯಿರಿ.  ಉದಾಹರಣೆಗೆ ಪ್ಯಾರಾಗ್ರಾಫ್ ಮತ್ತು ಕ್ಯಾರಕ್ಟರ್ ಶೈಲಿಗಳನ್ನು ರೂಪಿಸುವುದು, - ಟೆಕ್ಟ್ ಫ್ಲೋ, ಚಿತ್ರಗಳನ್ನು ಅಳವಡಿಸುವುದು, ಅಧ್ಯಾಯಗಳು, ಶೀರ್ಷಿಕೆ - ಇಂಟ್ರೋ, ಡ್ರಾಪ್‌ಕ್ಯಾಪ್, ಬಾಕ್ಸ್, ಟೇಬಲ್, ಫುಟ್‌ನೋಟ್, ಪುಟಸಂಖ್ಯೆ, ಇಂಡೆಕ್ಸ್, ಫೋಲಿಯೋ, ಇತ್ಯಾದಿ.

ಕಪ್ಪು ಬಣ್ಣ ಮತ್ತು ಪಠ್ಯವನ್ನಷ್ಟೇ ಬಳಸಿ ರೂಪಿಸಿದ ಡಿಟಿಪಿ ಪುಟ
ಈ ಪಾಠದಲ್ಲಿ ಈವರೆಗೆ ತಿಳಿದುಕೊಂಡ ಮಾಹಿತಿಗಳನ್ನು ನೋಡಿದರೆ ಡಿಟಿಪಿಯು ಒಂದು ಕಂಪ್ಯೂಟರ್ ಶಿಕ್ಷಣ, ಭಾಷೆಯ ಶುದ್ಧತೆ, ಕನ್ನಡ ಫಾಂಟ್‌ಗಳ ಬಳಕೆ, ಚಿತ್ರಗಳ ಸಂಪಾದನೆ, ಮುದ್ರಣರಂಗದ ಮಾಹಿತಿ, ಬಣ್ಣಗಳ ಅರಿವು, ವಿನ್ಯಾಸದ ಸೃಜನಶೀಲತೆ - ಇವೆಲ್ಲವನ್ನೂ ಬೇಡುವ ಬಹುಕೌಶಲ್ಯದ ಕಲೆ ಎನ್ನಬಹುದು ಅಲ್ಲವೆ?

ಈ ಪಾಠವು ಡಿಟಿಪಿ ಕುರಿತ ಪ್ರಾಥಮಿಕ ಮಾಹಿತಿಗಳನ್ನು ಪರಿಚಯಿಸುತ್ತದೆ; ಪುಟಮಿತಿಯಿಂದಾಗಿ ಡಿಟಿಪಿಯ ಎಲ್ಲಾ ಸೂತ್ರಗಳನ್ನೂ ಸಚಿತ್ರವಾಗಿ ಮೂಡಿಸಿಲ್ಲ ಎಂಬುದನ್ನು ಗಮನಿಸಿ.

ವಿದ್ಯಾರ್ಥಿ ಹಂತದಲ್ಲೇ ಡಿಟಿಪಿಯನ್ನು ಕಲಿತರೆ, ಮುಂದಿನ ದಿನಗಳಲ್ಲಿ ಉದ್ಯೋಗ ನೀಡುವ ಸಂಸ್ಥೆಗಳಲ್ಲಿ ಡಿಟಿಪಿ ಕೌಶಲ್ಯವೂ ಒಂದು ಹೆಚ್ಚುಗಾರಿಕೆಯ ಅಂಶವಾಗುತ್ತದೆ. ಏಕೆಂದರೆ ಯಾವುದೇ ಕಂಪ್ಯೂಟರ್ ಕಡತಕ್ಕೂ ಒಂದು ಶಿಸ್ತಿನ ವಿನ್ಯಾಸ ಬೇಕೇ ಬೇಕು. ಮುದ್ರಣವಾಗಲಿ, ಆಗದಿರಲಿ, ಬರೆದಿದ್ದೆಲ್ಲ ಶಿಸ್ತಿನಿಂದ ಜೋಡಣೆಯಾಗಿದ್ದರೆ ಸಂಸ್ಥೆಗೆ, ಸಿಬ್ಬಂದಿಗೆ ಒಳ್ಳೆಯ ಹೆಸರು.

ಆದ್ದರಿಂದ ಈ ಕಾಲದಲ್ಲಿ ಡಿಟಿಪಿ ಕಲಿಯುವುದು ಕೇವಲ ಡಿಟಿಪಿ ಆಪರೇಟರ್‌ಗೆ ಮಾತ್ರ ಸೀಮಿತವಲ್ಲ. ಕಂಪ್ಯೂಟರ್ ಹೊಂದಿದ ಪ್ರತಿಯೊಬ್ಬರೂ ಈ ಕಲೆಯನ್ನು ಕರಗತ ಮಾಡಿಕೊಳ್ಳಬಹುದು.

ಅನುಬಂಧ: ಕೆಲವು ಡಿಟಿಪಿ ತಂತ್ರಾಂಶಗಳ ಪಟ್ಟಿ 

ಪುಸ್ತಕವಿನ್ಯಾಸ ಕೇಂದ್ರಿತ ಅಪ್ಲಿಕೇಶನ್ ತಂತ್ರಾಂಶಗಳು

ಸ್ಕ್ರೈಬಸ್/ ಮುಕ್ತ ತಂತ್ರಾಂಶ
www.scribus.com
ಬಳಕೆಯ ಉದ್ದೇಶ: ಪುಸ್ತಕ ವಿನ್ಯಾಸ, ಬ್ರೋಶರ್‌ಗಳು
ಇದು ಇನ್‌ಡಿಸೈನ್ ಮತ್ತು ಪೇಜ್‌ಮೇಕರ್‌ಗಳಿಗೆ ಪರ್ಯಾಯವಾದ ಮುಕ್ತ ತಂತ್ರಾಂಶ. ಆದರೆ ಇಲ್ಲೂ ಸಾಕಷ್ಟು ಸುಧಾರಣೆಗಳಾಗಬೇಕಿದೆ
.
ಕೋರೆಲ್ ವೆಂಚುರಾ/ ಪಾವತಿಸಬೇಕಾದ ತಂತ್ರಾಂಶ
www.corel.com
ಬಳಕೆಯ ಉದ್ದೇಶ: ಪುಸ್ತಕ ವಿನ್ಯಾಸ, ಬ್ರೋಶರ್‌ಗಳು
ಇದು ವಿಂಡೋಸ್ ಎಕ್ಸ್ ಪಿವರೆಗೆ ಮಾತ್ರ ಬಳಕೆಗೆ ಲಭ್ಯ. ಈಗ ಚಾಲ್ತಿಯಲ್ಲಿಲ್ಲ. ಇದರ ಹಳೆಯ ಕಡತಗಳಿಂದ ಪಠ್ಯವನ್ನು ತೆಗೆಯಲು ವಿಂಡೋಸ್ ಎಕ್ಸ್ ಪಿ ಯಲ್ಲಿ ಸ್ಥಾಪನೆ ಮಾಡಿಕೊಂಡರೆ ಮಾತ್ರ ಸಾಧ್ಯ.

ಮೈಕ್ರೋಸಾಫ್ಟ್ ಪಬ್ಲಿಶರ್/ ಪಾವತಿಸಬೇಕಾದ ತಂತ್ರಾಂಶ
office.microsoft.com
ಬಳಕೆಯ ಉದ್ದೇಶ: ಪುಸ್ತಕವಿನ್ಯಾಸ, ಸರಳ ಜಾಲಪುಟಗಳು
ಇದು ಮೈಕ್ರೋಸಾಫ್ಟ್ ಸಂಸ್ಥೆಯು `ನನ್ನಲ್ಲೂ ಡಿಟಿಪಿ ತಂತ್ರಾಂಶ' ಇದೆ ಎಂದು ತೋರಿಸಿಕೊಳ್ಳಲು ರೂಪಿಸಿದ ತಂತ್ರಾಂಶ. ಬಳಕೆದಾರ ಸ್ನೇಹಿ ಅಲ್ಲ.

ಇನ್‌ಡಿಸೈನ್ (ಅಡೋಬ್)/ ಪಾವತಿಸಬೇಕಾದ ತಂತ್ರಾಂಶ
www.adobe.com
ಬಳಕೆಯ ಉದ್ದೇಶ: ಪುಸ್ತಕ ವಿನ್ಯಾಸ, ಬ್ರೋಶರ್‌ಗಳು, ಪೋಸ್ಟರ್‌ಗಳು,
ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಬಳಕೆಸ್ನೇಹಿ, ಪ್ರೊಪ್ರೈಟರಿ ತಂತ್ರಾಂಶ. ಭಾರತದಲ್ಲಿ ಇದರ ಬಳಕೆ ಕಡಿಮೆ ಇದ್ದರೂ, ಈ ಕಡತಗಳನ್ನು ಇಮೇಜ್ ಅಥವಾ ಪಿಡಿಎಫ್ ಮಾಡಿ ಮುದ್ರಣಕ್ಕೆ ಕಳಿಸಬಹುದು. ಹೀಗಾಗಿ ಇದು ಪುಸ್ತಕ ವಿನ್ಯಾಸಕ್ಕೆ ಹೇಳಿ ಮಾಡಿಸಿದ ಅತ್ಯುತ್ಕೃಷ್ಟ ತಂತ್ರಾಂಶ.

ಕ್ವಾರ್ಕ್ ಎಕ್ಸ್‌ಪ್ರೆಸ್ / ಪಾವತಿಸಬೇಕಾದ ತಂತ್ರಾಂಶ
www.quarkexpress.com
ಬಳಕೆಯ ಉದ್ದೇಶ: ಡಿಟಿಪಿ, ಪುಸ್ತಕ ವಿನ್ಯಾಸ
ಇದು ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಬಳಕೆಯಾಗುತ್ತಿದೆ. ಇವರು ಸಾಂಸ್ಥಿಕ ಗ್ರಾಹಕರನ್ನೇ ಹೆಚ್ಚು ಹೊಂದಿದ್ದಾರೆ. ಆದರೆ ಇದೂ ಪುಟವಿನ್ಯಾಸಕ್ಕೆ ಸಾಕಷ್ಟು ಅನುಕೂಲಗಳನ್ನು ಹೊಂದಿದೆ. ಇನ್‌ಡಿಸೈನ್ ಬಿಟ್ಟರೆ ಇದೇ ಹೆಚ್ಚು ಅನುಕೂಲ ಹೊಂದಿರುವ ತಂತ್ರಾಂಶ.

ಚಿತ್ರವಿನ್ಯಾಸ ಕೇಂದ್ರಿತ ಅಪ್ಲಿಕೇಶನ್ ತಂತ್ರಾಂಶಗಳು

ಕೋರೆಲ್‌ಡ್ರಾ/ ಪಾವತಿಸಬೇಕಾದ ತಂತ್ರಾಂಶ
www.corel.com
ಬಳಕೆಯ ಉದ್ದೇಶ: ಜಾಹೀರಾತುಗಳು, ಬ್ರೋಶರ್‌ಗಳು, ಪ್ರಚಾರ ಸಾಮಗ್ರಿಗಳು, ಭಾರೀ ಗಾತ್ರದ ಹೋರ್ಡಿಂಗ್ ಮುಂತಾದ ವಿನ್ಯಾಸಗಳು, ಸೈನ್‌ಬೋರ್ಡ್‌ಗಳು
ಇದನ್ನು ಪುಸ್ತಕ ವಿನ್ಯಾಸಕ್ಕೆ ಬಳಸುವುದು ಅಪೇಕ್ಷಣೀಯವಲ್ಲ. ಈ ತಂತ್ರಾಂಶವು ಮುಖ್ಯವಾಗಿ ಎಸ್ ವಿ ಜಿ (ಸ್ಕೇಲಬಲ್ ವೆಕ್ಟರ್ ಗ್ರಾಫಿಕ್ಸ್) ಆಧಾರಿತವಾದ ಪ್ರಧಾನ ತಂತ್ರಾಂಶವಾಗಿದ್ದು, ಜಾಹೀರಾತು ರಂಗದಲ್ಲಿ ಸರಸರ ಭರಭರ ಕೆಲಸ ಮಾಡಲು ಬಳಕೆಯಾಗುತ್ತಿದೆ.
 
ಕ್ರಿಟಾ / ಮುಕ್ತ ತಂತ್ರಾಂಶ
www.krita.org
ಬಳಕೆಯ ಉದ್ದೇಶ: ಕಲಾಕೃತಿಗಳನ್ನು ಕಂಪ್ಯೂಟರಿನಲ್ಲಿಯೇ ಮೂಡಿಸುವುದು
ಇದು ವಿಂಡೋಸ್ ಮತ್ತು ಲಿನಕ್ಸ್ - ಎರಡೂ ಆಪರೇಟಿಂಗ್ ಸಿಸ್ಟಂಗಳಲ್ಲಿ ಬಳಸಬಹುದಾದ ಕಲಾವಿದರಿಗೇ ಹೆಚ್ಚು ಅನುಕೂಲಕರವಾದ ಗ್ರಾಫಿಕಲ್ ಸಾಫ್ಟ್‌ವೇರ್. ಪೆನ್-ಟ್ಯಾಬ್ಲೆಟ್ (ಯುಎಸ್‌ಬಿ ಮೂಲಕ ಕಂಪ್ಯೂಟರಿಗೆ ಜೋಡಿಸಬಹುದಾದ ಒಂದು ಸ್ಳೇಟಿನಂಥ ಫಲಕ ಮತ್ತು ಡಿಜಿಟಲ್ ಪೆನ್) ಇದ್ದರೆ ಕ್ರಿಟಾದಿಂದ ಅದ್ಭುತವಾದ ಕಲಾಕೃತಿಗಳನ್ನು, ಮುಖಪುಟಗಳನ್ನು ರಚಿಸಬಹುದು. ಈಗ ಇದು ಮೊಬೈಲ್‌ಗಳಿಗೂ / ಸ್ಮಾರ್ಟ್‌ಫೋನ್‌ಗಳಿಗೂ ಬೇಕಾದ ಸ್ವರೂಪದಲ್ಲಿ ಸಿಗುತ್ತಿದೆ.

ಇಂಕ್‌ಸ್ಕೇಪ್/ ಮುಕ್ತ ತಂತ್ರಾಂಶ
www.inkscape.org
ಬಳಕೆಯ ಉದ್ದೇಶ: ಜಾಹೀರಾತುಗಳು, ಬ್ರೋಶರ್‌ಗಳು, ಪ್ರಚಾರ ಸಾಮಗ್ರಿಗಳು, ಭಾರೀ ಗಾತ್ರದ ಹೋರ್ಡಿಂಗ್ ಮುಂತಾದ ವಿನ್ಯಾಸಗಳು, ಸೈನ್‌ಬೋರ್ಡ್‌ಗಳು

ಫೋಟೋಶಾಪ್ (ಅಡೋಬ್)/ ಪಾವತಿಸಬೇಕಾದ ತಂತ್ರಾಂಶ
www.adobe.com
ಬಳಕೆಯ ಉದ್ದೇಶ: ಚಿತ್ರಗಳ ತಿದ್ದುವಿಕೆ, ಮಾರ್ಪಡಿಸುವಿಕೆ (ಮಾರ್ಫಡಿಸುವಿಕೆಗೂ!)ಗೆ ಬಳಕೆಯಾಗುತ್ತದೆ. ಕೆಲವರು ಬ್ರೋಶರ್‌ಗಳಿಗೂ ಬಳಸುತ್ತಾರೆ. ಮುಖಪುಟ ವಿನ್ಯಾಸಕ್ಕೆ ಹೇಳಿ ಮಾಡಿಸಿದ ತಂತ್ರಾಂಶ.
ಇದು ಕಲಾವಿದರ ತಂತ್ರಾಂಶವೇ ಹೊರತು, ಡಿಟಿಪಿಗೆ ಅಲ್ಲ. ಕಲಾವಿರ ಕಲ್ಪನೆಯನ್ನೆಲ್ಲ ಸಾಕಾರಗೊಳಿಸುತ್ತದೆ. ಲೇಖಕರ ಕಲ್ಪನೆಗಳನ್ನೆಲ್ಲ ಕಲಾವಿದರಿಗೆ ಹೇಳಿ ಇಲ್ಲಿ ಸಾಧಿಸಬಹುದು. ಇದಕ್ಕೆ ಕಲಾತ್ಮಕ ಮನೋಭಾವ ಮುಖ್ಯ.

ಗಿಂಪ್ / ಮುಕ್ತ ತಂತ್ರಾಂಶ
www.gimp.org
ಬಳಕೆಯ ಉದ್ದೇಶ: ಜಾಹೀರಾತುಗಳು, ಬ್ರೋಶರ್‌ಗಳು, ಪ್ರಚಾರ ಸಾಮಗ್ರಿಗಳು, ಭಾರೀ ಗಾತ್ರದ ಹೋರ್ಡಿಂಗ್ ಮುಂತಾದ ವಿನ್ಯಾಸಗಳು, ಸೈನ್‌ಬೋರ್ಡ್‌ಗಳು

ಗಿಂಪ್ ತಂತ್ರಾಂಶದ ಪರದೆ
ದಾಖಲೀಕರಣ ಕೇಂದ್ರಿತ ಅಪ್ಲಿಕೇಶನ್ ತಂತ್ರಾಂಶಗಳು

ಎಂ ಎಸ್ ಆಫೀಸ್/ ಪಾವತಿಸಬೇಕಾದ ತಂತ್ರಾಂಶ
office.microsoft.com
ಬಳಕೆಯ ಉದ್ದೇಶ: ಅಕ್ಷರಜೋಡಣೆ, ಸರಳ ವಿನ್ಯಾಸ
ಇದು ಮೈಕ್ರೋಸಾಫ್ಟ್‌ನ  ಅತಿಮುಖ್ಯ ತಂತ್ರಾಂಶ. ಇದನ್ನು ಅಕ್ಷರಜೋಡಣೆಗೆ, ಲೇಖನದ ಪಠ್ಯವನ್ನು ಇ-ಮೇಲ್ ಮಾಡಲು, ಮಾಹಿತಿ ಕಲೆ ಹಾಕಲು ಬಳಸಬಹುದು.

ಓಪನ್ ಆಫೀಸ್, ಲಿಬ್ರೆ ಆಫೀಸ್ / ಮುಕ್ತ ತಂತ್ರಾಂಶ
www.openoffice.org
www.libreoffice.org
ಓಪನ್ ಆಫೀಸಿನಲ್ಲಿ ಎಂ ಎಸ್ ಆಫೀಸ್‌ಗಿಂತ ಹಲವು ಉತ್ತಮ ಗುಣಗಳು, ಅನುಕೂಲಗಳು ಇವೆ. ಲಿಬ್ರೆ ಆಫೀಸ್ ಕೂಡಾ ಹಲವು ಆಧುನಿಕ ಅನುಕೂಲಗಳನ್ನು ಹೊಂದಿದೆ. ಆದ್ದರಿಂದ ಇದನ್ನು ವಿಂಡೋಸ್ ಓಎಸ್‌ನಲ್ಲೂ ಸುಲಭವಾಗಿ ಬಳಸಬಹುದು.


ಮಾಧ್ಯಮ ಸಲಹೆಗಾರರು ಹಾಗೂ ಅಭ್ಯುದಯ ಪತ್ರಕರ್ತರಾದ ಬೇಳೂರು ಸುದರ್ಶನ ಮಾಹಿತಿ ತಂತ್ರಜ್ಞಾನ ಕುರಿತ ಮೂರು ಪಠ್ಯಪುಸ್ತಕಗಳನ್ನು ಬರೆದಿದ್ದಾರೆ. ರಿವರ್‌ಥಾಟ್ಸ್ ಮೀಡಿಯಾ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಮಿತ್ರಮಾಧ್ಯಮ ಹಾಗೂ ಫ್ರೀ ಬುಕ್ ಕಲ್ಚರ್‌ಗಳ ರೂವಾರಿಯೂ ಹೌದು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿ ಪಡೆದಿದ್ದಾರೆ.

0 comments:

Post a Comment