ಅಂತರಜಾಲ ಮತ್ತು ಕನ್ನಡ

'ಕಂಪ್ಯೂಟರ್ ಮತ್ತು ಕನ್ನಡ' ಕೃತಿಯಿಂದ ಆಯ್ದ ಅಧ್ಯಾಯ
ಟಿ. ಜಿ. ಶ್ರೀನಿಧಿ

ಈಚಿನ ವರ್ಷಗಳಲ್ಲಿ ಅಂತರಜಾಲ ಹಾಗೂ ವಿಶ್ವವ್ಯಾಪಿ ಜಾಲಗಳು ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗಗಳಾಗಿ ಹೋಗಿವೆ. ಹತ್ತಾರು ಪ್ರತ್ಯಕ್ಷ-ಪರೋಕ್ಷ ಉಪಯೋಗಗಳಿಗಾಗಿ ಎಲ್ಲರೂ ಅವನ್ನು ಬಳಸುತ್ತಿದ್ದರೂ ಜಾಲಲೋಕದಲ್ಲಿ ಸರಾಗವಾಗಿ ಸಂಚರಿಸಲು ಇಂಗ್ಲಿಷ್ ಭಾಷೆ ಗೊತ್ತಿರಬೇಕು ಎನ್ನುವ ಅಭಿಪ್ರಾಯ ಮಾತ್ರ ಅದೇಕೋ ವ್ಯಾಪಕವಾಗಿ ಉಳಿದುಕೊಂಡುಬಿಟ್ಟಿದೆ.

ಇಂದಿನ ಪರಿಸ್ಥಿತಿ ಎಷ್ಟು ಮುಂದುವರೆದಿದೆಯೆಂದರೆ ಅಂತರಜಾಲ-ವಿಶ್ವವ್ಯಾಪಿ ಜಾಲಗಳಲ್ಲಿ ಪ್ರಪಂಚದ ಹಲವಾರು ಭಾಷೆಗಳನ್ನು ಇಂಗ್ಲಿಷಿನಷ್ಟೇ ಪರಿಣಾಮಕಾರಿಯಾಗಿ ಬಳಸುವುದು ಸಾಧ್ಯವಾಗಿದೆ. ಇದಕ್ಕೆ ಕನ್ನಡವೂ ಹೊರತಲ್ಲ. ವೆಬ್‌ಲೋಕದಲ್ಲಿ ವಿಹರಿಸುವಾಗ ನಾವು ನಮ್ಮ ಕಸ್ತೂರಿ ಕನ್ನಡದಲ್ಲಿಯೇ ಬಹಳಷ್ಟು ಕೆಲಸಗಳನ್ನು ಪೂರೈಸಿಕೊಳ್ಳಬಹುದು.

ನಮ್ಮ ಪಾಲಿಗೆ ಜಾಲಲೋಕದ ಬೆಳಕಿಂಡಿಯಾದ ಬ್ರೌಸರ್ ತಂತ್ರಾಂಶದಿಂದ ಪ್ರಾರಂಭಿಸಿ ನಮ್ಮದೇ ವೆಬ್‌ಸೈಟಿನವರೆಗೆ ಎಲ್ಲ ಕಡೆಯಲ್ಲೂ ಕನ್ನಡದ ಬಳಕೆ ಬಹಳ ಸುಲಭ. ಈ ನಿಟ್ಟಿನಲ್ಲಿ ಒಂದಷ್ಟು ಮಾಹಿತಿಯನ್ನು ಒದಗಿಸುವುದೇ ಈ ಲೇಖನದ ಉದ್ದೇಶ.

ಜಾಲಲೋಕದಲ್ಲಿ ಕನ್ನಡ: ನಡೆದು ಬಂದ ದಾರಿ 
ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡ ಮೊದಲಿಗೆ ಬಳಕೆಯಾಗಿದ್ದು ಇಂಗ್ಲಿಷ್ ಲಿಪಿಯ ಮೂಲಕ. ಇಂಗ್ಲಿಷ್ ಅಕ್ಷರಗಳಲ್ಲಿ ಕನ್ನಡವನ್ನು ಮೂಡಿಸುವ ಈ ವಿಧಾನ 'ಕಂಗ್ಲಿಷ್' ಭಾಷೆ ಎಂದೇ ಜನಪ್ರಿಯ. ಕನ್ನಡದ 'ನಮಸ್ಕಾರ'ವನ್ನು ಇಂಗ್ಲಿಷಿನಲ್ಲಿ 'namaskaara' ಎಂದು ಲಿಪ್ಯಂತರ ಮಾಡಿ ಬರೆಯುವ ಈ ವಿಧಾನವನ್ನು ಇನ್ನೂ ಇಮೇಲ್-ಚಾಟ್-ಎಸ್ಸೆಮ್ಮೆಸ್ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ.

ಕನ್ನಡದ ಪದಸಂಸ್ಕಾರಕ, ಅಂದರೆ ವರ್ಡ್ ಪ್ರಾಸೆಸರ್ ತಂತ್ರಾಂಶಗಳು ಬಂದಾಗ ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡದ ಬಳಕೆಗೆ ಮೊದಲ ಪ್ರೋತ್ಸಾಹ ದೊರಕಿತು. ಈ ತಂತ್ರಾಂಶಗಳಿಂದಾಗಿ ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರಗಳನ್ನು ಮೂಡಿಸುವುದು, ಕಂಪ್ಯೂಟರ್ ಸಹಾಯದಿಂದ ಅವನ್ನು ಮುದ್ರಿಸಿಕೊಳ್ಳುವುದು ಸಾಧ್ಯವಾಯಿತು. ಇಂತಹ ಪದಸಂಸ್ಕಾರಕ ತಂತ್ರಾಂಶಗಳ ಪೈಕಿ ಕೆಲವಕ್ಕೆ ದುಡ್ಡುಕೊಡಬೇಕಿದ್ದರೆ ಶ್ರೀ ಕೆ. ಪಿ. ರಾವ್ ರೂಪಿಸಿದ 'ಸೇಡಿಯಾಪು'ನಂತಹ ತಂತ್ರಾಂಶಗಳನ್ನು ದಶಕಗಳ ಹಿಂದೆಯೇ ಉಚಿತ ಬಳಕೆಗೆ ನೀಡಲಾಗಿತ್ತು. ಸರಕಾರ ಹಾಗೂ ಖಾಸಗಿ ಸಂಸ್ಥೆಗಳಷ್ಟೇ ಅಲ್ಲದೆ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಪರಿಣತರಾಗಿದ್ದ ಅನೇಕ ಉತ್ಸಾಹಿಗಳು ಕೂಡ ಬಹಳ ಹಿಂದಿನಿಂದಲೇ ತಮ್ಮ ಸ್ವಂತ ಆಸಕ್ತಿಯಿಂದ ಕನ್ನಡದ ತಂತ್ರಾಂಶಗಳನ್ನು ರೂಪಿಸುವಲ್ಲಿ ತೊಡಗಿಸಿಕೊಂಡದ್ದು ಗಮನಾರ್ಹ ಸಂಗತಿ.

ಶ್ರೀ ಕೆ. ಪಿ. ರಾವ್ ರೂಪಿಸಿದ 'ಸೇಡಿಯಾಪು' ತಂತ್ರಾಂಶ 
ಇಮೇಲ್ ಬಳಕೆ ವ್ಯಾಪಕವಾಗುತ್ತಿದ್ದಂತೆ ಈ ತಂತ್ರಾಂಶಗಳನ್ನು ಬಳಸಿ ಟೈಪುಮಾಡಿದ ಕಡತಗಳನ್ನು ಅಟ್ಯಾಚ್‌ಮೆಂಟ್ ರೂಪದಲ್ಲಿ ಕಳುಹಿಸುವ ಅಭ್ಯಾಸ ಶುರುವಾಯಿತು. ಇದು ಕಂಗ್ಲಿಷ್ ಬಳಕೆಯ ನಂತರದ ಅತ್ಯಂತ ಪ್ರಮುಖ ಹೆಜ್ಜೆ ಎಂದೇ ಹೇಳಬೇಕು.

ಈ ನಡುವೆ ತೊಂಬತ್ತರ ದಶಕದಲ್ಲೇ ಕನ್ನಡದ ವೆಬ್ ಪುಟಗಳು ಕಾಣಿಸಿಕೊಂಡಿದ್ದವು. ಕನ್ನಡ ಪಠ್ಯವನ್ನು ಇಂಗ್ಲಿಷ್ ಲಿಪಿಯಲ್ಲಿ ಮೂಡಿಸಿದ್ದ 'ಕನ್ನಡ ಸಾಹಿತ್ಯ ಪುಟ' ಕನ್ನಡದ ಮೊದಲ ವೆಬ್‌ಪುಟಗಳಲ್ಲೊಂದು. ೧೯೯೬ರಲ್ಲಿ ಕನ್ನಡದ ಮೊದಲ ವೆಬ್ ಪತ್ರಿಕೆ 'ವಿಶ್ವಕನ್ನಡ' ಪ್ರಾರಂಭವಾಯಿತು. ಸರಿಸುಮಾರು ಅದೇ ಸಮಯದಲ್ಲಿ 'ಸಂಜೆವಾಣಿ'ಯ ಜಾಲತಾಣವೂ ಶುರುವಾಯಿತು. ಮುಂದೆ, ಈ ಶತಮಾನದ ಪ್ರಾರಂಭದಲ್ಲಿ, ರೆಡಿಫ್‌ಮೇಲ್‌ನಂತಹ ಕೆಲ ತಾಣಗಳು ಕನ್ನಡದಲ್ಲೇ ಇಮೇಲ್ ಕಳುಹಿಸುವ ಸೌಲಭ್ಯವನ್ನೂ ಒದಗಿಸಿದವು. ಈ ಸೌಲಭ್ಯದ ನೆರವಿನಿಂದ ಬೇರೆ ಯಾವುದೇ ತಂತ್ರಾಂಶದ ನೆರವಿಲ್ಲದೆ ಕನ್ನಡದ ಸಂದೇಶಗಳನ್ನು ವಿನಿಮಯಮಾಡಿಕೊಳ್ಳುವುದು ಸಾಧ್ಯವಾಯಿತು.

ವಿಶ್ವವ್ಯಾಪಿ ಜಾಲ ಹಾಗೂ ಇಮೇಲ್ ಮಾಧ್ಯಮದಲ್ಲಿ ಕನ್ನಡದ ಬಳಕೆ ವ್ಯಾಪಕವಾಗಿ ಬೆಳೆಯುವಲ್ಲಿ ಬರಹ ಹಾಗೂ ನುಡಿ (ಹಿಂದಿನ ಹೆಸರು 'ಕಲಿತ') ತಂತ್ರಾಂಶಗಳು ಕೂಡ ಪ್ರಮುಖ ಪಾತ್ರ ವಹಿಸಿದವು. ಸಾಫ್ಟ್‌ವೇರ್ ತಜ್ಞ ಶೇಷಾದ್ರಿವಾಸು ಚಂದ್ರಶೇಖರನ್ 'ಬರಹ'ವನ್ನು ರೂಪಿಸಿದರೆ, ಕನ್ನಡ ಗಣಕ ಪರಿಷತ್ತು ಕರ್ನಾಟಕ ಸರಕಾರದ ಸಹಯೋಗದಲ್ಲಿ 'ನುಡಿ' ತಂತ್ರಾಂಶವನ್ನು ಪರಿಚಯಿಸಿತು (ಮೊದಲಿಗೆ ಇವೆರಡೂ ತಂತ್ರಾಂಶಗಳು ಬಳಕೆದಾರರಿಗೆ ಉಚಿತವಾಗಿಯೇ ದೊರಕಿದ್ದವಾದರೂ ಬರಹ ತಂತ್ರಾಂಶ ಬಳಸಲು ಇತ್ತೀಚೆಗೆ ಶುಲ್ಕ ನಿಗದಿಪಡಿಸಲಾಗಿದೆ; 'ನುಡಿ' ಈಗಲೂ ಉಚಿತವೇ). ಈ ನಡುವೆ ಬಹುತೇಕ ಎಲ್ಲ ಕಾರ್ಯಾಚರಣ ವ್ಯವಸ್ಥೆಗಳಲ್ಲೂ ನೇರವಾಗಿ ಕನ್ನಡ ಅಕ್ಷರಗಳನ್ನು ಮೂಡಿಸುವ ಸವಲತ್ತು ಲಭ್ಯವಾಯಿತು. ಹಲವಾರು ಪದಸಂಸ್ಕಾರಕ ತಂತ್ರಾಂಶಗಳು ಕೂಡ ಬಳಕೆಗೆ ಬಂದವು.

ಕನ್ನಡದ ಪ್ರಾರಂಭಿಕ ಜಾಲತಾಣಗಳ ಪೈಕಿ ಸಂಜೆವಾಣಿ ಜಾಲತಾಣದಲ್ಲಿ ಕನ್ನಡದ ಪಠ್ಯ ಚಿತ್ರರೂಪದಲ್ಲಿತ್ತು. ಕನ್ನಡದ ಮೊದಲ ಬ್ಲಾಗುಗಳಲ್ಲೊಂದು ಎಂದು ಪರಿಗಣಿಸಬಹುದಾದ ಕಾಮತ್ ಡಾಟ್ ಕಾಮ್‌ನಲ್ಲೂ ಮೊದಲಿಗೆ ಕನ್ನಡ ಪಠ್ಯ ಚಿತ್ರರೂಪದಲ್ಲೇ ಮೂಡಿಬಂತು. ಇನ್ನು 'ವಿಶ್ವಕನ್ನಡ'ದಂತಹ ತಾಣಗಳು, ಕನ್ನಡದಲ್ಲಿ ಸಂದೇಶ ವಿನಿಮಯ ಮಾಡಿಕೊಳ್ಳಲು ನೆರವಾಗುತ್ತಿದ್ದ ಇಮೇಲ್ ಸೇವೆಗಳು ಕನ್ನಡ ಫಾಂಟನ್ನೇ ಬಳಸುತ್ತಿದ್ದವಾದರೂ ಅಲ್ಲೂ ಒಂದು ಸಮಸ್ಯೆಯಿತ್ತು. ಆಯಾ ತಾಣಗಳು ಬಳಸುತ್ತಿದ್ದ ನಿರ್ದಿಷ್ಟ ಫಾಂಟನ್ನು ನಮ್ಮ ಕಂಪ್ಯೂಟರಿನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳದೆ ಕನ್ನಡದ ಪಠ್ಯ ಓದುವುದು ಆಗ ಸಾಧ್ಯವಾಗುತ್ತಿರಲಿಲ್ಲ. ಇಮೇಲ್‌ನಲ್ಲೂ ಅಷ್ಟೆ; ಯಾವುದೇ ಕನ್ನಡ ತಂತ್ರಾಂಶ ಬಳಸಿ ನೀವೊಂದು ಕಡತ ತಯಾರಿಸಿದ್ದರೆ ನಿಮ್ಮ ಸಂದೇಶ ಓದುವವರಲ್ಲೂ ಆ ತಂತ್ರಾಂಶ, ಅಥವಾ ಕನಿಷ್ಠಪಕ್ಷ ಅದರ ಫಾಂಟುಗಳಾದರೂ ಇರಬೇಕಿದ್ದು ಅನಿವಾರ್ಯವಾಗಿತ್ತು. ಸರಿಯಾದ ಫಾಂಟುಗಳಿಲ್ಲದ ಕಂಪ್ಯೂಟರಿನಲ್ಲಿ ಕನ್ನಡ ತಾಣಗಳಲ್ಲಿದ್ದ ಪಠ್ಯವೆಲ್ಲ ಇಂಗ್ಲಿಷ್ ಅಕ್ಷರಗಳ ಅಸಂಬದ್ಧ ಜೋಡಣೆಯಂತೆಯೇ ಕಾಣುತ್ತಿದ್ದವು.

ಈ ಸಮಸ್ಯೆ ನಿವಾರಿಸಲು ಅನೇಕ ಪ್ರಯತ್ನಗಳು ನಡೆದವು. ಈ ನಿಟ್ಟಿನಲ್ಲಿ ಗಮನಾರ್ಹ ಪ್ರಯತ್ನ ನಡೆಸಿದ್ದು ಡಾ| ಯು. ಬಿ. ಪವನಜರ 'ವಿಶ್ವಕನ್ನಡ' ತಾಣ. ಈ ತಾಣ ಮೊತ್ತಮೊದಲ ಬಾರಿಗೆ ಕನ್ನಡದ ಡೈನಮಿಕ್ ಫಾಂಟುಗಳನ್ನು ಬಳಸಿತು. ಆ ಮೂಲಕ ತಾಣದಲ್ಲಿದ್ದ ಕನ್ನಡದ ಮಾಹಿತಿಯನ್ನು ಯಾವುದೇ ಫಾಂಟ್ ಇನ್‌ಸ್ಟಾಲ್ ಮಾಡಿಕೊಳ್ಳದೆಯೇ ನಮ್ಮ ಕಂಪ್ಯೂಟರಿನಲ್ಲಿ ವೀಕ್ಷಿಸುವುದು ಸಾಧ್ಯವಾಯಿತು. ಆದರೆ ನಿರ್ದಿಷ್ಟ ಫಾಂಟ್ ಅವಲಂಬನೆ ಅಲ್ಲೂ ಮುಂದುವರೆದಿತ್ತು; ಸರ್ಚ್ ಇಂಜನ್ ಮೂಲಕ ಕನ್ನಡದ ಮಾಹಿತಿಯನ್ನು ಸುಲಭವಾಗಿ ಹುಡುಕಲು ಆಗುತ್ತಿರಲಿಲ್ಲ.

ಈ ಪರಿಸ್ಥಿತಿ ಬದಲಾದದ್ದು ಯುನಿಕೋಡ್ ಸಂಕೇತ ವಿಧಾನ ಬಳಕೆಗೆ ಬಂದಾಗ. ಇಮೇಲ್ ಕಳುಹಿಸುವುದು, ಜಾಲತಾಣಗಳಿಗೆ-ಬ್ಲಾಗುಗಳಿಗೆ ಮಾಹಿತಿ ಸೇರಿಸುವುದು, ಅವನ್ನು ಓದುವುದು, ಕನ್ನಡದ ಮಾಹಿತಿಯನ್ನು ಸರ್ಚ್ ಇಂಜನ್‌ಗಳಲ್ಲಿ ಕನ್ನಡದಲ್ಲೇ ಹುಡುಕುವುದು - ಇದೆಲ್ಲವನ್ನೂ ನಿರ್ದಿಷ್ಟ ತಂತ್ರಾಂಶದ ಮೇಲೆ ಅವಲಂಬಿತರಾಗದೆ ಮಾಡಲು ಸಾಧ್ಯವಾಗಿಸಿದ್ದು ಯುನಿಕೋಡ್‌ನ ವೈಶಿಷ್ಟ್ಯ.

ವಿಶೇಷ ಲೇಖನ: ವಿಶ್ವಸಂಕೇತ ಯುನಿಕೋಡ್

ಈಚಿನ ವರ್ಷಗಳಲ್ಲಿ ಯುನಿಕೋಡ್ ಬಳಕೆ ವ್ಯಾಪಕವಾಗುತ್ತಿದ್ದಂತೆ ವಿಶ್ವವ್ಯಾಪಿ ಜಾಲದಲ್ಲಿ ಕನ್ನಡದ ಸಾಧ್ಯತೆಗಳೂ ಹೆಚ್ಚುತ್ತಲೇ ಇವೆ. ಸಾವಿರಾರು ಸಂಖ್ಯೆಯ ಬ್ಲಾಗ್ ಹಾಗೂ ಜಾಲತಾಣಗಳ ಮೂಲಕ ಜಾಲಲೋಕದ ಉದ್ದಗಲಕ್ಕೂ ಕನ್ನಡದ ಕಂಪು ಪಸರಿಸುತ್ತಿದೆ. ಅಷ್ಟೇ ಅಲ್ಲ, ಗೂಗಲ್ ಟ್ರಾನ್ಸ್‌ಲಿಟರೇಟ್ ಹಾಗೂ ಕನ್ನಡ ಅಕ್ಷರಗಳನ್ನು ಮೂಡಿಸುವ ಅಂತಹವೇ ಇನ್ನೂ ಕೆಲ ಆನ್‌ಲೈನ್ ಸವಲತ್ತುಗಳ ನೆರವಿನಿಂದ ಯಾವುದೇ ಪ್ರತ್ಯೇಕ ತಂತ್ರಾಂಶದ ಸಹಾಯವಿಲ್ಲದೆ ವಿಶ್ವವ್ಯಾಪಿ ಜಾಲದಲ್ಲೇ ನೇರವಾಗಿ ಕನ್ನಡ ಅಕ್ಷರಗಳನ್ನು ಮೂಡಿಸಬಹುದು. ಅಷ್ಟೇ ಏಕೆ, ಹತ್ತಾರು ವಿಶ್ವವಿಖ್ಯಾತ ತಾಣಗಳು ಈಗ ಕನ್ನಡದಲ್ಲೂ ದೊರಕುತ್ತಿವೆ. ಒಟ್ಟಿನಲ್ಲಿ, ಇಂಗ್ಲಿಷ್ ಅಥವಾ ಬೇರಾವುದೋ ಭಾಷೆಯ ಮೂಲಕ ಜಾಲಲೋಕದಲ್ಲಿ ಏನೇನು ಸಾಧ್ಯವೋ ಅದರಲ್ಲಿ ಬಹುಪಾಲು ಈಗ ಕನ್ನಡದಲ್ಲೂ ಸಾಧ್ಯವಾಗಿದೆ ಎನ್ನಬಹುದು.

ಬ್ರೌಸರ್‌ಗಳಲ್ಲಿ ಕನ್ನಡ
ವಿಶ್ವವ್ಯಾಪಿ ಜಾಲವನ್ನು ನಾವೆಲ್ಲ ಬಳಸುತ್ತೇವಾದರೂ ಬಳಕೆಯ ಉದ್ದೇಶ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಲೇ ಇರುತ್ತದೆ. ಶಾಲೆಯ ವಿದ್ಯಾರ್ಥಿಗೆ ವೆಬ್ ವಿಹಾರವೆಂದರೆ ಆಟವಾಡುವ ಅಥವಾ ಹೋಮ್‌ವರ್ಕ್‌ಗೆ ಬೇಕಾದ ಮಾಹಿತಿ ಹುಡುಕುವ ಮಾರ್ಗ; ಅದೇ ವೃತ್ತಿಪರನೊಬ್ಬನಿಗೆ ವಿಶ್ವವ್ಯಾಪಿ ಜಾಲವೆಂದರೆ ಕಚೇರಿಯ ಕೆಲಸಕ್ಕೆ ಮನೆಯಿಂದಲೇ ಕಿಟಕಿ ತೆರೆದುಕೊಡುವ ಕೊಂಡಿಯಿದ್ದಂತೆ.

ಇವರೆಲ್ಲ ವಿಶ್ವವ್ಯಾಪಿ ಜಾಲವನ್ನು ಸಂಪರ್ಕಿಸುವ ವಿಧಾನ ಕೂಡ ವಿಭಿನ್ನವೇ. ಒಬ್ಬರು ತಮ್ಮ ಮೊಬೈಲಿನ ಥ್ರೀಜಿ ಸಂಪರ್ಕ ಬಳಸಿದರೆ, ಇನ್ನೊಬ್ಬರ ಮನೆಯಲ್ಲಿ ಬ್ರಾಡ್‌ಬ್ಯಾಂಡ್, ವೈ-ಫಿ ಇತ್ಯಾದಿಗಳೆಲ್ಲ ಇರುತ್ತದೆ. ಇನ್ನು ಕೆಲವೆಡೆ ಹಳೆಯಕಾಲದ ಡಯಲ್ ಅಪ್ ಸಂಪರ್ಕವೂ ಬಳಕೆಯಾಗುತ್ತಿರುತ್ತದೆ.

ಇಷ್ಟೆಲ್ಲ ವೈವಿಧ್ಯಗಳ ನಡುವೆ ವಿಶ್ವವ್ಯಾಪಿ ಜಾಲದ ಎಲ್ಲ ಬಳಕೆದಾರರೂ ಕಡ್ಡಾಯವಾಗಿ ಉಪಯೋಗಿಸುವ ಅಂಶವೊಂದಿದೆ. ಅದೇ ಬ್ರೌಸರ್‌ಗಳ ಬಳಕೆ.

ವಿಶ್ವವ್ಯಾಪಿ ಜಾಲದಲ್ಲಿರುವ ತಾಣಗಳನ್ನು ತಮ್ಮ ಕಂಪ್ಯೂಟರಿನಲ್ಲಿ ವೀಕ್ಷಿಸಲು ಬಳಕೆದಾರರಿಗೆ ಅನುವುಮಾಡಿಕೊಡುವುದು ಈ ತಂತ್ರಾಂಶದ ಕೆಲಸ. ಹಾಗಾಗಿಯೇ ಬಳಸುತ್ತಿರುವ ಕಂಪ್ಯೂಟರ್, ಸಂಪರ್ಕದ ವಿಧಾನ, ಬಳಕೆಯ ಉದ್ದೇಶ ಇವೆಲ್ಲ ಏನೇ ಆದರೂ ವಿಶ್ವವ್ಯಾಪಿಜಾಲದ ಬಳಕೆದಾರರೆಲ್ಲರೂ ಬ್ರೌಸರ್ ತಂತ್ರಾಂಶವನ್ನು ಬಳಸಲೇಬೇಕು. ಲ್ಯಾಪ್‌ಟಾಪ್-ಡೆಸ್ಕ್‌ಟಾಪ್‌ಗಳಿಗಷ್ಟೆ ಅಲ್ಲ, ಟ್ಯಾಬ್ಲೆಟ್ಟು-ಮೊಬೈಲುಗಳಲ್ಲೂ ಬ್ರೌಸರ್ ತಂತ್ರಾಂಶ ಬೇಕು. ಕ್ಲೌಡ್ ಕಂಪ್ಯೂಟಿಂಗ್ ವಿಷಯಕ್ಕೆ ಬಂದರಂತೂ ಅದೆಷ್ಟೋ ಕೆಲಸಗಳಿಗೆ ಬ್ರೌಸರ್ ತಂತ್ರಾಂಶವೇ ಜೀವಾಳ.

ಈ ತಂತ್ರಾಂಶಗಳಲ್ಲಿ ಹಲವು ಬಗೆ. ಮೊದಲ ಬ್ರೌಸರ್ 'ಮೊಸಾಯಿಕ್'ನಿಂದ ಪ್ರಾರಂಭಿಸಿ ಇಂದಿನವರೆಗೆ ಅನೇಕ ಬ್ರೌಸರ್ ತಂತ್ರಾಂಶಗಳು ಬಂದುಹೋಗಿವೆ. ಈಗ ಪ್ರಚಲಿತದಲ್ಲಿರುವ ಬ್ರೌಸರ್‌ಗಳಲ್ಲಿ ಗೂಗಲ್ ಕ್ರೋಮ್, ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಮೊದಲಾದವು ಮುಖ್ಯವಾದವು. ಮೊಬೈಲ್ ಉಪಕರಣಗಳಿಗಾಗಿಯೇ ಇರುವ ವಿಶೇಷ ಬ್ರೌಸರುಗಳೂ ಇವೆ.

ನಾವು ನೋಡುತ್ತಿರುವ ಜಾಲತಾಣ ಕನ್ನಡದ್ದಾಗಿರಲಿ, ಇಂಗ್ಲಿಷಿನದ್ದಾಗಿರಲಿ ಅಥವಾ ರಷ್ಯನ್ ಭಾಷೆಯದೇ ಇರಲಿ - ತಾಂತ್ರಿಕ ಹೊಂದಾಣಿಕೆಗಳೆಲ್ಲ ಸರಿಯಾಗಿದ್ದ ಪಕ್ಷದಲ್ಲಿ ಅಲ್ಲಿರುವ ಮಾಹಿತಿಯನ್ನು ನಮ್ಮೆದುರು ಪ್ರದರ್ಶಿಸುವುದು ಬ್ರೌಸರ್‌ನ ಕೆಲಸ. ಹೀಗೆ ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನೋಡುವುದು ಮಾತ್ರವಲ್ಲ; ಆ ಮಾಹಿತಿಯನ್ನು ಉಳಿಸಿಕೊಳ್ಳುವುದು, ಮುದ್ರಿಸಿಕೊಳ್ಳುವುದು, ವಿವಿಧ ಪುಟಗಳ ನಡುವೆ ಹಿಂದೆಮುಂದೆ ಓಡಾಡುವುದು, ಅಚ್ಚುಮೆಚ್ಚಿನ ಪುಟಗಳ ವಿಳಾಸ ಸಂಗ್ರಹಿಸಿಟ್ಟುಕೊಳ್ಳುವುದು ಮುಂತಾದ ಇನ್ನಿತರ ಸೌಲಭ್ಯಗಳೂ ಬ್ರೌಸರ್ ತಂತ್ರಾಂಶದಲ್ಲಿರುತ್ತವೆ.

ಯಾವ ಭಾಷೆಯ ಯಾವ ರೂಪದ ಮಾಹಿತಿಯನ್ನಾದರೂ ಬ್ರೌಸರಿನಲ್ಲಿ ನೋಡಬಹುದು ಎನ್ನುವುದೇನೋ ಸರಿ, ಆದರೆ ಬ್ರೌಸರಿನಲ್ಲಿ ಇಂತಹ ಹಲವಾರು ಸೌಲಭ್ಯಗಳಿರುತ್ತವಲ್ಲ, ಅದಕ್ಕೆ ಸಂಬಂಧಿಸಿದ ಆಯ್ಕೆಗಳೆಲ್ಲ (ಮೆನು) ಯಾವ ಭಾಷೆಯಲ್ಲಿರುತ್ತದೆ?

ಈ ಪ್ರಶ್ನೆಗೆ 'ಇಂಗ್ಲಿಷ್' ಎಂದೇ ಉತ್ತರಿಸಬೇಕಾದ ಅನಿವಾರ್ಯತೆ ಈಚಿನ ಕೆಲ ವರ್ಷಗಳವರೆಗೂ ಇತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ ಎನ್ನುವುದು ಖುಷಿಯ ಸಂಗತಿ.

ನಿಜ, ಇಂದು ಹಲವಾರು ಪ್ರಮುಖ ಬ್ರೌಸರುಗಳ ಕನ್ನಡ ಆವೃತ್ತಿ ನಮಗೆ ಲಭ್ಯ. ಹೀಗಾಗಿ ಕ್ರೋಮ್, ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಮುಂತಾದ ಪ್ರಮುಖ ಬ್ರೌಸರುಗಳಲ್ಲಿರುವ ಆಯ್ಕೆಗಳನ್ನೆಲ್ಲ ನಾವು ಕನ್ನಡದಲ್ಲಿ ನೋಡಬಹುದು, ಬಳಸಬಹುದು. ವಿಶ್ವವ್ಯಾಪಿ ಜಾಲದಲ್ಲಿ ಕನ್ನಡದ ಮಾಹಿತಿ ಸಾಕಷ್ಟು ಪ್ರಮಾಣದಲ್ಲಿ ದೊರಕುತ್ತಿರುವಾಗ ಅದನ್ನು ಪಡೆದುಕೊಳ್ಳುವ ಪ್ರಕ್ರಿಯೆಯೂ ಕನ್ನಡದಲ್ಲೇ ಆಗುವುದು ಇಂಗ್ಲಿಷ್ ಅವಲಂಬನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯೆಂದೇ ಹೇಳಬಹುದು.

ಮೊಜಿಲ್ಲಾ ಫೈರ್‌ಫಾಕ್ಸ್ ವಿಷಯಕ್ಕೆ ಬಂದರೆ ಬ್ರೌಸರ್ ತಂತ್ರಾಂಶವನ್ನು ಡೌನ್‌ಲೋಡ್ ಮಾಡುವಾಗಲೇ ನಾವು ಕನ್ನಡ ಆವೃತ್ತಿಯನ್ನು ಆರಿಸಿಕೊಳ್ಳಬೇಕಾಗುತ್ತದೆ. ಆದರೆ ಗೂಗಲ್ ಕ್ರೋಮ್ ಬಳಕೆದಾರರು ತಮ್ಮ ಇಷ್ಟದ ಭಾಷೆ ಆರಿಸಿಕೊಳ್ಳಲು ಸೆಟಿಂಗ್ಸ್ ಮೆನುಗೆ ಹೋದರೆ ಸಾಕು. ಅಲ್ಲಿರುವ ಅಡ್ವಾನ್ಸ್‌ಡ್ ಆಯ್ಕೆಗಳನ್ನು ಬಳಸಿಕೊಂಡು ನಾವು ಕ್ರೋಮ್ ತಂತ್ರಾಂಶವನ್ನು ಯಾವ ಭಾಷೆಯಲ್ಲಿ ನೋಡಲು ಇಷ್ಟಪಡುತ್ತೇವೆ ಎನ್ನುವುದನ್ನು ಸೂಚಿಸಬಹುದು.

ಕನ್ನಡದ ಅನುಭವ ನೀಡುವಲ್ಲಿ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಕೂಡ ಹಿಂದೆಬಿದ್ದಿಲ್ಲ. ಈ ತಂತ್ರಾಂಶಕ್ಕಾಗಿ ಮೈಕ್ರೋಸಾಫ್ಟ್ ಜಾಲತಾಣದಲ್ಲಿ ಸಿಗುವ ಲ್ಯಾಂಗ್ವೇಜ್ ಪ್ಯಾಕ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ನಾವು ಅದನ್ನು ಕನ್ನಡದಲ್ಲಿ ಬಳಸುವುದು ಸಾಧ್ಯವಾಗುತ್ತದೆ.

ಒಟ್ಟಿನಲ್ಲಿ ನಾವು ವಿಶ್ವವ್ಯಾಪಿ ಜಾಲವನ್ನು ಜಾಲಾಡಲು ಕಾರಣ ಏನೇ ಆದರೂ ಆ ಸಂದರ್ಭದಲ್ಲಿ ಕನ್ನಡದ ಬ್ರೌಸರ್ ತಂತ್ರಾಂಶ ಬಳಸುವುದು ಒಂದು ವಿಭಿನ್ನ ಅನುಭವ ಕಟ್ಟಿಕೊಡುತ್ತದೆ. ಅಷ್ಟೇ ಅಲ್ಲ, ಇಂತಹ ಸಣ್ಣಸಣ್ಣ ಹೆಜ್ಜೆಗಳು ಕೂಡ ತಂತ್ರಜ್ಞಾನ ಲೋಕದಲ್ಲಿ ಕನ್ನಡವನ್ನು ಮುನ್ನಡೆಸುವಲ್ಲೂ ಸಹಕಾರಿಯಾಗುತ್ತವೆ!

ಕೆಲವು ಕನ್ನಡ ತಾಣಗಳು
ಈ ಶತಮಾನದ ಪ್ರಾರಂಭದಿಂದ ಈಚೆಗೆ ಜಾಲಲೋಕದಲ್ಲಿ ಕನ್ನಡ ಬೆಳೆದ ರೀತಿ ಗಮನಾರ್ಹವಾದದ್ದು. `ಜಾಲದಲ್ಲಿ ಕನ್ನಡವೆಂದರೆ ಅದೊಂದು ಪ್ರಾಯೋಗಿಕ ಪ್ರಯತ್ನವಷ್ಟೆ' ಎನ್ನುವಂತಿದ್ದ ಕಾಲವನ್ನು ದಾಟಿ ಬಹಳ ಮುಂದೆ ಬಂದಿರುವ ನಾವು ಇದೀಗ ಹಲವಾರು ಬಗೆಯ ಕನ್ನಡ ಜಾಲತಾಣಗಳನ್ನು ನೋಡಬಹುದು. ಸಂಘಸಂಸ್ಥೆಗಳ ತಾಣಗಳಷ್ಟೇ ಅಲ್ಲದೆ ಪ್ರಚಲಿತ ವಿದ್ಯಮಾನ, ಸಾಹಿತ್ಯ, ವಿಜ್ಞಾನ ಮುಂತಾದ ಅನೇಕ ವಿಷಯಗಳಿಗೆ ಸಂಬಂಧಿಸಿದ ಕನ್ನಡ ತಾಣಗಳನ್ನು ಇಂದು ಸಕ್ರಿಯವಾಗಿವೆ. ಈ ಸಾಲಿನಲ್ಲಿ ದಟ್ಸ್‌ಕನ್ನಡದಂತಹ ಪೋರ್ಟಲ್‌ಗಳು, ಅವಧಿ-ಕೆಂಡಸಂಪಿಗೆಯಂತಹ ಆನ್‌ಲೈನ್ ಪತ್ರಿಕೆಗಳು, ಇಜ್ಞಾನ ಡಾಟ್ ಕಾಮ್‌ನಂತಹ ವಿಜ್ಞಾನ ತಾಣಗಳು, ಚುಕ್ಕುಬುಕ್ಕು-ಸಿರಿನುಡಿ ಮುಂತಾದ ವಿಶಿಷ್ಟ ತಾಣಗಳು, ವಿವಿಧ ಪತ್ರಿಕೆಗಳ ಆನ್‌ಲೈನ್ ಆವೃತ್ತಿಗಳು - ಹೀಗೆ ಅನೇಕ ಕನ್ನಡ ತಾಣಗಳನ್ನು ನಾವು ಪಟ್ಟಿಮಾಡಬಹುದು.

ವಿಶ್ವವ್ಯಾಪಿ ಜಾಲದಲ್ಲಿ ಕನ್ನಡದ ಬಳಕೆ ಬಹುತೇಕ ಯುನಿಕೋಡ್ ಮೂಲಕವೇ ಆಗುತ್ತಿರುವುದು ಸರಿಯಷ್ಟೆ. ಕನ್ನಡದ ಪಠ್ಯವನ್ನು ಯುನಿಕೋಡ್‌ನಲ್ಲಿ ಮೂಡಿಸಲು ಬೇಕಾದ ಅನೇಕ ಸವಲತ್ತುಗಳು ವಿಶ್ವವ್ಯಾಪಿ ಜಾಲದಲ್ಲಿ ಲಭ್ಯವಿವೆ -  ಗೂಗಲ್ ಟ್ರಾನ್ಸ್‌ಲಿಟರೇಟ್, ಕ್ವಿಲ್‌ಪ್ಯಾಡ್, ಕನ್ನಡ ಸ್ಲೇಟ್ ಮುಂತಾದವು ಈ ಬಗೆಯ ತಾಣಗಳಿಗೆ ಕೆಲ ಉದಾಹರಣೆಗಳು. ಇಲ್ಲಿ ಕಂಗ್ಲಿಷ್‌ನಲ್ಲಿ ಬರೆದದ್ದು ತನ್ನಷ್ಟಕ್ಕೆ ತಾನೇ ಕನ್ನಡ ಲಿಪಿಯಲ್ಲಿ ಮೂಡಿಬರುತ್ತದೆ. ನಿಮ್ಮಲ್ಲಿ ಯಾವುದೇ ಕನ್ನಡ ತಂತ್ರಾಂಶ ಇಲ್ಲದಿದ್ದರೂ ಚಿಂತೆಯಿಲ್ಲ, ಇಲ್ಲಿ ಟೈಪಿಸಿದ ಕನ್ನಡ ಪಠ್ಯವನ್ನು ಬೇಕಾದ ಕಡೆಗೆ ಸುಲಭವಾಗಿ ಕಾಪಿ-ಪೇಸ್ಟ್ ಮಾಡಿಕೊಳ್ಳಬಹುದು. ಜಿಮೇಲ್, ವಿಕಿಪೀಡಿಯಾ ಸೇರಿದಂತೆ ಹಲವು ತಾಣಗಳಲ್ಲಿ ನೇರವಾಗಿ ಕನ್ನಡದಲ್ಲೇ ಬೆರಳಚ್ಚಿಸುವುದು ಸಾಧ್ಯವಿರುವುದರಿಂದ ನಾವು ಬಾಹ್ಯ ತಂತ್ರಾಂಶಗಳನ್ನು ಅವಲಂಬಿಸಬೇಕಾದ ಅಗತ್ಯವೂ ನಿಧಾನಕ್ಕೆ ಕಡಿಮೆಯಾಗುತ್ತಿದೆ ಎನ್ನಬಹುದು.

ವಿಶ್ವವ್ಯಾಪಿ ಜಾಲದಲ್ಲಿ ಕನ್ನಡದ ವಿಶ್ವಕೋಶಗಳೂ ಇವೆ. ಇವುಗಳಲ್ಲಿ ಮುಖ್ಯವಾದದ್ದು ವಿಕಿಪೀಡಿಯಾ. ಇಂಗ್ಲಿಷಿನ ವಿಕಿಪೀಡಿಯಾದಂತೆಯೇ ಕನ್ನಡ ತಾಣ ಕೂಡ ಸಮುದಾಯ ಸಹಭಾಗಿತ್ವದಲ್ಲಿ ಮುಕ್ತ ಹಾಗೂ ಉಚಿತವಾಗಿ ದೊರಕುವ ಮಾಹಿತಿ ಭಂಡಾರವನ್ನು ಸಿದ್ಧಪಡಿಸುತ್ತಿದೆ. ಯಾರು ಬೇಕಾದರೂ ತಮ್ಮ ಆಸಕ್ತಿಯ ವಿಷಯಗಳ ಕುರಿತು ಮಾಹಿತಿ ಸೇರಿಸಲು ಅನುವುಮಾಡಿಕೊಡುವುದು ಈ ತಾಣದ ವೈಶಿಷ್ಟ್ಯ. ಉದ್ದೇಶಪೂರ್ವಕವಾಗಿಯೋ ಮಾಹಿತಿಯ ಕೊರತೆಯಿಂದಲೋ ತಪ್ಪು ವಿವರಗಳು ವಿಕಿಪೀಡಿಯಾದಲ್ಲಿ ಆಗಿಂದಾಗ್ಗೆ ಸೇರಿಕೊಳ್ಳುವುದಕ್ಕೂ ಇದೇ ಕಾರಣ. ಹೀಗಾಗಿಯೇ ವಿಕಿಪೀಡಿಯಾ ಬಳಕೆದಾರರು ಸೇರಿಸಿದ ಮಾಹಿತಿಯನ್ನು ಬೇರೆಯವರು ಪರಿಶೀಲಿಸಿ ಅದರಲ್ಲಿ ತಪ್ಪಿರುವ ಅಂಶಗಳನ್ನು ಸರಿಪಡಿಸುವ ವ್ಯವಸ್ಥೆಯನ್ನೂ ರೂಪಿಸಲಾಗಿದೆ.

ಇನ್ನು ರಾಜ್ಯ ಸರಕಾರದ ಆಶ್ರಯದಲ್ಲಿ ರೂಪುಗೊಂಡಿರುವ 'ಕಣಜ' ಜ್ಞಾನಕೋಶ ಹೆಸರಾಂತ ಲೇಖಕರ ಕೃತಿಗಳು, ವಿಶ್ವವಿದ್ಯಾಲಯ ಹಾಗೂ ಅಕಾಡೆಮಿಗಳ ಪ್ರಕಟಣೆಗಳನ್ನು ವಿಶ್ವವ್ಯಾಪಿ ಜಾಲದ ಮೂಲಕ ಉಚಿತವಾಗಿ ದೊರಕುವಂತೆ ಮಾಡುತ್ತಿದೆ. ಪುಸ್ತಕಗಳು, ಲೇಖನಗಳು, ನಿಘಂಟುಗಳು ಸೇರಿದಂತೆ ಅಪಾರ ಪ್ರಮಾಣದ ಮಾಹಿತಿ ಈಗಾಗಲೇ ಈ ತಾಣದಲ್ಲಿದೆ.

ಕಣಜ ಅಂತರಜಾಲ ಜ್ಞಾನಕೋಶ
ಬರಿಯ ವಿಶ್ವಕೋಶಗಳಷ್ಟೆ ಅಲ್ಲ, ಕನ್ನಡದ ಹಲವಾರು ನಿಘಂಟುಗಳೂ ವಿಶ್ವವ್ಯಾಪಿ ಜಾಲದಲ್ಲಿವೆ. ಹಿರಿಯ ವಿದ್ವಾಂಸರಾದ ಪ್ರೊ. ಜೀವಿಯವರು ರಚಿಸಿದ ನಿಘಂಟುಗಳು ಮೊದಲಿಗೆ ಬರಹ ತಂತ್ರಾಂಶದ ಜಾಲತಾಣದ ಮೂಲಕ ಮುಕ್ತವಾಗಿ ದೊರಕಿದವು. ಆ ನಿಘಂಟುಗಳ ಜೊತೆಗೆ ನವಕರ್ನಾಟಕದ ವಿಜ್ಞಾನ-ತಂತ್ರಜ್ಞಾನ ಪದಸಂಪದ, ಸಿಇಇ ವಿವರಣಾತ್ಮಕ ಪರಿಸರ ಅರ್ಥಕೋಶ, ಕನ್ನಡ ವಿವಿಯ ಕೃಷಿ ಪದಕೋಶ, ದಾಸಸಾಹಿತ್ಯ ಕೋಶ ಮುಂತಾದ ಅನೇಕ ನಿಘಂಟುಗಳು ಕಣಜ ಜಾಲತಾಣದಲ್ಲೂ ಇವೆ. ವಿಕಿಪೀಡಿಯಾ ಬಳಗದ 'ವಿಕ್ಷನರಿ', ಬರಹ ಡಾಟ್ ಕಾಮ್‌ನ 'ನಿಮ್ಮದೇ ನಿಘಂಟು' ಮುಂತಾದ ಕೆಲವೆಡೆ ನಿಘಂಟುಗಳನ್ನು ಬೆಳೆಸುವಲ್ಲಿ ನಾವೂ ನೆರವಾಗುವುದು ಸಾಧ್ಯವಿದೆ.

ಅಷ್ಟೇ ಅಲ್ಲ, ನಾವೆಲ್ಲ ವ್ಯಾಪಕವಾಗಿ ಬಳಸುವ ಹಲವು ವಿಶ್ವವಿಖ್ಯಾತ ತಾಣಗಳೂ ಕನ್ನಡದಲ್ಲಿ ದೊರಕುತ್ತವೆ. ಗೂಗಲ್, ಜಿಮೇಲ್, ಫೇಸ್‌ಬುಕ್ ಮುಂತಾದ ಬಹುತೇಕ ತಾಣಗಳ ಕನ್ನಡ ಆವೃತ್ತಿ ಈಗಾಗಲೇ ಇದೆ.

ಇಂತಹ ಹಲವು ತಾಣಗಳ ವಾತಾವರಣವನ್ನು ಕನ್ನಡಕ್ಕೆ ಹೊಂದಿಸಿಕೊಡುವ ಕೆಲಸ ಕ್ರೌಡ್‌ಸೋರ್ಸ್ ಆಗಿರುವುದು ವಿಶೇಷ; ಅಂದರೆ ಅನುವಾದದ ಕೆಲಸವನ್ನು ಕನ್ನಡದ ಸಮುದಾಯಕ್ಕೇ ವಹಿಸಿಕೊಡಲಾಗಿದೆ. ಕ್ರೌಡ್‌ಸೋರ್ಸಿಂಗ್ ಅಥವಾ ಗುಂಪುಗುತ್ತಿಗೆಯ ಆಧಾರದ ಮೇಲೆ ಸಿದ್ಧವಾಗಿರುವ, ಸಿದ್ಧವಾಗುತ್ತಿರುವ ಇನ್ನೂ ಅನೇಕ ಯೋಜನೆಗಳಿವೆ. ವಿಕಿಪೀಡಿಯಾ ವಿಶ್ವಕೋಶ, ವಿಕ್ಷನರಿ ನಿಘಂಟು - ಇವೆಲ್ಲ ಇಂತಹ ತಾಣಗಳಿಗೆ ಕೆಲ ಉದಾಹರಣೆಗಳಷ್ಟೆ.

ವಿಶ್ವವ್ಯಾಪಿ ಜಾಲದಲ್ಲಿ ಓಡಾಡುವಾಗ ನಮ್ಮ ಸುತ್ತ ಮಾಹಿತಿಯ ಮಹಾಪೂರವೇ ಇರುತ್ತದೆ. ಈ ಮಾಹಿತಿ ಇಂಗ್ಲಿಷಿನಲ್ಲೇ ಇರಬೇಕು ಎಂದೇನೂ ಇಲ್ಲ. ಫ್ರೆಂಚ್‌ನಲ್ಲೋ ಜರ್ಮನ್ ಭಾಷೆಯಲ್ಲೋ ಇರುವ ತಾಣದಲ್ಲೂ ನಮಗೆ ಬೇಕಾದ ಮಾಹಿತಿ ಇರಬಹುದು. ಹೀಗೆ ಬೇರಾವುದೋ ಭಾಷೆಯಲ್ಲಿ ಇರುವ ಮಾಹಿತಿಯನ್ನು ಆ ಕ್ಷಣದಲ್ಲೇ ನಮಗೆ ಅರ್ಥವಾಗುವ ಭಾಷೆಗೆ ಅನುವಾದಿಸಿಕೊಂಡು ಓದುವ ಸೌಲಭ್ಯ ಬಹಳ ದಿನಗಳಿಂದಲೇ ಇದೆ. ಇದು ಎಲ್ಲ ಸಂದರ್ಭಗಳಲ್ಲೂ ಶೇ.೧೦೦ರಷ್ಟು ನಿಖರ ಅನುವಾದ ಕೊಡದಿದ್ದರೂ ಅರ್ಥವಾಗದ ಭಾಷೆಯ ಪಠ್ಯಕ್ಕಿಂತ ಹೆಚ್ಚು ಉಪಯುಕ್ತವಾಗಿರುತ್ತದೆ.

ಇಂತಹ ಸೌಲಭ್ಯವನ್ನು ಕನ್ನಡಕ್ಕೂ ಒದಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಇಂಗ್ಲಿಷ್‌ನಿಂದ ಕನ್ನಡಕ್ಕೆ, ಮತ್ತು ಕನ್ನಡದಿಂದ ಇಂಗ್ಲಿಷ್‌ಗೆ ಪಠ್ಯವನ್ನು ಅನುವಾದಿಸುವ ತಂತ್ರಾಂಶ ಸೇವೆಯನ್ನು 'ಗೂಗಲ್ ಟ್ರಾನ್ಸ್‌ಲೇಟ್' ಅಂಗವಾಗಿ ಗೂಗಲ್ ಸಂಸ್ಥೆ ಪರಿಚಯಿಸಿದೆ. ಸ್ಪರ್ಶಸಂವೇದಿ ಪರದೆಯಿರುವ (ಟಚ್ ಸ್ಕ್ರೀನ್) ಸಾಧನಗಳಲ್ಲಿ ನಾವು 'ಬರೆದ' ಕನ್ನಡ ಅಕ್ಷರ-ಪದ-ವಾಕ್ಯಗಳನ್ನು ಗುರುತಿಸಿ ಅದನ್ನು ಇಂಗ್ಲಿಷಿಗೆ ಅನುವಾದಿಸುವ ಸೌಲಭ್ಯವೂ ಈ ವ್ಯವಸ್ಥೆಯಲ್ಲಿದೆ.

ಗೂಗಲ್ ಟ್ರಾನ್ಸ್‌ಲೇಟ್ ಆಂಡ್ರಾಯ್ಡ್ ಆಪ್
ಕನ್ನಡದಲ್ಲಿ ಮಾಹಿತಿಯಿರುವ ತಾಣಗಳಷ್ಟೇ ಅಲ್ಲ, ಕಂಪ್ಯೂಟರ್ ಪರದೆಯಲ್ಲಿ ಮೂಡಿಬರುವ ಪಠ್ಯವನ್ನು ಓದಿಹೇಳುವ ಟೆಕ್ಸ್ಟ್-ಟು-ಸ್ಪೀಚ್ ತಂತ್ರಾಂಶ ಕೂಡ ಇದೆ. ದೃಷ್ಟಿ ಸವಾಲು ಎದುರಿಸುತ್ತಿರುವ ವ್ಯಕ್ತಿಗಳು ಕಂಪ್ಯೂಟರ್ ಲೋಕದಲ್ಲಿರುವ ಕನ್ನಡದ ಮಾಹಿತಿಯನ್ನು ಆಲಿಸಲು ನೆರವಾಗುವ 'ಈ-ಸ್ಪೀಕ್' ಎಂಬ ಮುಕ್ತ ತಂತ್ರಾಂಶವನ್ನು ಶಿವಮೊಗ್ಗ ಜಿಲ್ಲೆಯ ಕೃಷಿಕ, ಸ್ವತಃ ದೃಷ್ಟಿ ಸವಾಲು ಎದುರಿಸುತ್ತಿರುವ ಶ್ರೀಧರ್ ಅವರು ಕನ್ನಡಕ್ಕೆ ತಂದಿದ್ದಾರೆ. ಈ ತಂತ್ರಾಂಶ ಕಣಜ ಜ್ಞಾನಕೋಶದ ಜಾಲತಾಣದಲ್ಲಿ ಎಲ್ಲರಿಗೂ ಲಭ್ಯವಿದೆ.

ಇದೇ ರೀತಿಯಲ್ಲಿ ಕನ್ನಡದ ಮುದ್ರಿತ ಪಠ್ಯವನ್ನು ಗುರುತಿಸಿ ಕಂಪ್ಯೂಟರೀಕರಿಸುವ ಓಸಿಆರ್ ತಂತ್ರಾಂಶ ರೂಪಿಸಲು ಕೂಡ ಹಲವು ಪ್ರಯತ್ನಗಳು ಸಾಗಿದ್ದು ಅದು ಇನ್ನಷ್ಟೇ ಎಲ್ಲರ ಬಳಕೆಗೂ ಸಿಗಬೇಕಿದೆ.

ಬ್ಲಾಗ್ ಲೋಕದಲ್ಲಿ ಕನ್ನಡ
ಬ್ಲಾಗುಗಳನ್ನು ನಾವೆಲ್ಲ ಅತ್ಯಂತ ಸುಲಭವಾಗಿ ಪಡೆದುಕೊಳ್ಳಬಹುದಾದ ಜಾಲತಾಣಗಳು ಎಂದು ಕರೆಯಬಹುದು.

ಬ್ಲಾಗ್ ಎಂಬ ಹೆಸರು ವೆಬ್ ಲಾಗ್ ಎಂಬುದರ ಅಪಭ್ರಂಶ. ಇವನ್ನು ಜಾಲತಾಣಗಳೆಂದು ಕರೆಯುವುದಕ್ಕಿಂತ ಆನ್‌ಲೈನ್ ದಿನಚರಿಗಳೆಂದು ಕರೆಯುವುದೇ ಸೂಕ್ತ. ನಾವು ಓದಿದ ಪುಸ್ತಕ, ಇಷ್ಟವಾದ ತಿಂಡಿ, ಇಷ್ಟವಾಗದ ಚಲನಚಿತ್ರಗಳಿಂದ ಪ್ರಾರಂಭಿಸಿ ನಮ್ಮ ಹವ್ಯಾಸಗಳು, ಬರವಣಿಗೆಗಳು, ಅಭಿಪ್ರಾಯಗಳು - ಹೀಗೆ ನಮ್ಮ ಮನಸ್ಸಿಗೆ ಬಂದ ಯಾವುದೇ ವಿಷಯವನ್ನು ಬ್ಲಾಗುಗಳ ಮೂಲಕ ಅತ್ಯಂತ ಸುಲಭವಾಗಿ ಇಡೀ ಜಗತ್ತಿನೊಡನೆ ಹಂಚಿಕೊಳ್ಳಬಹುದು.

ವಿಶೇಷ ಲೇಖನ: ಬ್ಲಾಗಿಂಗ್ - ಪರ್ಯಾಯ ಪತ್ರಿಕೋದ್ಯಮ

ಹೊಸತೊಂದು ಬ್ಲಾಗನ್ನು ಸೃಷ್ಟಿಸಿಕೊಳ್ಳುವುದು ನಮಗೊಂದು ಇಮೇಲ್ ವಿಳಾಸ ಪಡೆದುಕೊಂಡಷ್ಟೇ ಸುಲಭ! ಬ್ಲಾಗರ್, ವರ್ಡ್‌ಪ್ರೆಸ್ ಮುಂತಾದ ಯಾವುದೇ ತಾಣಕ್ಕೆ ಹೋಗಿ ಅವರು ಕೇಳುವ ಒಂದಷ್ಟು ಮಾಹಿತಿ ಕೊಟ್ಟು ನೋಂದಾಯಿಸಿಕೊಂಡರೆ ಸಾಕು, ನಮ್ಮದೇ ಆದ ಬ್ಲಾಗು ಸಿದ್ಧವಾಗುತ್ತದೆ.

ನಾವು ನಮ್ಮ ಬ್ಲಾಗಿಗೆ ಮಾಹಿತಿ ಸೇರಿಸುತ್ತಿದ್ದಂತೆ ಅದನ್ನು ಎಲ್ಲರೂ ನೋಡುವುದು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಓದುಗರಿಗೆ ಇಷ್ಟವಾದ, ಇಷ್ಟವಾಗದ ವಿಷಯಗಳ ಬಗ್ಗೆ ಅವರ ಪ್ರತಿಕ್ರಿಯೆ ದಾಖಲಿಸಲೂ ಬ್ಲಾಗ್‌ಗಳು ಅನುವುಮಾಡಿಕೊಡುತ್ತವೆ.

ಬ್ಲಾಗುಗಳು ಇಂದು ಅಭೂತಪೂರ್ವ ಯಶಸ್ಸು ಗಳಿಸಿಕೊಂಡಿರುವುದು ತಮ್ಮ ಈ ಸರಳತೆಯಿಂದಾಗಿಯೇ. ಹೀಗಾಗಿಯೇ ಇಂದು ಕನ್ನಡವೂ ಸೇರಿದಂತೆ ಬಹುತೇಕ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಬ್ಲಾಗುಗಳು ಜನಪ್ರಿಯವಾಗಿವೆ.

೧೯೯೦ರ ದಶಕದ ಮಧ್ಯಭಾಗದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭವಾದ ಬ್ಲಾಗುಗಳು ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡದ್ದು ಈ ಶತಮಾನದ ಪ್ರಾರಂಭದಲ್ಲಿ. ಇದಾದ ಒಂದೆರಡು ವರ್ಷಗಳ ಅವಧಿಯಲ್ಲೇ ಕನ್ನಡದಲ್ಲೂ ಬ್ಲಾಗುಗಳು ನಿರ್ಮಾಣವಾದವು. ಕೃಷ್ಣಾನಂದ ಕಾಮತರ ಪುತ್ರ ಶ್ರೀ ವಿಕಾಸ ಕಾಮತರು ೨೦೦೩ರಲ್ಲೇ ತಮ್ಮ ಜಾಲತಾಣದಲ್ಲಿ ಕನ್ನಡ ಬ್ಲಾಗನ್ನು ಪ್ರಾರಂಭಿಸಿದ್ದರು. ಅಲ್ಲಿನ ಬರಹಗಳು ಚಿತ್ರರೂಪದಲ್ಲಿರುತ್ತಿದ್ದವು.

ಮುಂದೆ ಕನ್ನಡ ಯೂನಿಕೋಡ್ ಸೌಲಭ್ಯ ಲಭ್ಯವಾದಾಗ ಬ್ಲಾಗುಗಳ ಮೂಲಕ ಮಾಹಿತಿ ಸಂವಹನ ನಡೆಸುವುದು ಇನ್ನಷ್ಟು ಸುಲಭವಾಯಿತು. ಆ ವೇಳೆಗಾಗಲೇ ಪ್ರಸಿದ್ಧವಾಗಿದ್ದ ಬರಹ ಹಾಗೂ ನುಡಿ ತಂತ್ರಾಂಶಗಳು ಸುಲಭವಾಗಿ ಯುನಿಕೋಡ್ ಪಠ್ಯವನ್ನು ಬೆರಳಚ್ಚಿಸಲು ಅನುವುಮಾಡಿಕೊಟ್ಟಿದ್ದು ಕನ್ನಡದಲ್ಲಿ ಹೊಸಹೊಸ ಬ್ಲಾಗುಗಳು ತಯಾರಾಗಲು ಪರೋಕ್ಷ ಪ್ರೇರಣೆ ಒದಗಿಸಿತು.

ಡಾ. ಯು. ಬಿ. ಪವನಜ, ಹರಿಪ್ರಸಾದ್ ನಾಡಿಗ್, ಪಿ. ಎಂ. ಕೃಷ್ಣರಾಜ್, ಎಂ. ಎಸ್. ಶ್ರೀರಾಮ್, ಶೇಷಾದ್ರಿ, ಸತೀಶ್ ಕುಮಾರ್ ಮುಂತಾದ ಅನೇಕರು ಕನ್ನಡದಲ್ಲಿ ಬ್ಲಾಗಿಸಲು ಪ್ರಾರಂಭಿಸಿದರು. ಹರಿಪ್ರಸಾದ್ ನಾಡಿಗ್ ೨೦೦೫ರಲ್ಲಿ ಸಂಪದ ಎಂಬ ಸಮುದಾಯತಾಣವನ್ನು ಪ್ರಾರಂಭಿಸಿದ ಮೇಲೆ ಕನ್ನಡ ಬ್ಲಾಗುಗಳಿಗೊಂದು ಪ್ರಭಾವಶಾಲಿ ವೇದಿಕೆಯೂ ದೊರೆಯಿತು. ಕನ್ನಡಕ್ಕಾಗಿಯೇ ಇರುವ, ಈಗಾಗಲೇ ಮೂರು ಸಾವಿರಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಈ ತಾಣದಲ್ಲಿ ನೋಂದಾಯಿಸಿಕೊಂಡ ಯಾರು ಬೇಕಿದ್ದರೂ ಕನ್ನಡ ಬ್ಲಾಗುಗಳನ್ನು ಪ್ರಾರಂಭಿಸಬಹುದು.

ಈಗಂತೂ ಲೇಖಕರು, ಪತ್ರಕರ್ತರು, ಅಂಕಣಕಾರರು, ತಂತ್ರಜ್ಞರು, ಹವ್ಯಾಸಿ ಬರಹಗಾರರು, ವಿವಿಧ ವಿಷಯಗಳ ಪರಿಣತರು - ಹೀಗೆ ಅನೇಕರು ಬ್ಲಾಗ್ ಪ್ರಪಂಚದಲ್ಲಿ ಸಕ್ರಿಯರಾಗಿ ಕನ್ನಡದ ಬೆಳವಣಿಗೆಗಾಗಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಕನ್ನಡದ್ದೇ ಆದ ಸಾವಿರಾರು ಬ್ಲಾಗುಗಳು ಒಟ್ಟಾರೆಯಾಗಿ ಜಾಲಲೋಕದಲ್ಲಿ ಕನ್ನಡದ ಬೆಳವಣಿಗೆಗೆ ತಮ್ಮ ಕೊಡುಗೆ ನೀಡುತ್ತಿವೆ.

ಇಷ್ಟೆಲ್ಲ ಸಂಖ್ಯೆಯ ಬ್ಲಾಗುಗಳಿರುವಾಗ ಅವುಗಳಲ್ಲಿ ಪ್ರಕಟವಾಗುವ ಮಾಹಿತಿಯನ್ನೆಲ್ಲ ಓದುಗರಿಗೆ ಸುಲಭವಾಗಿ ತಲುಪಿಸುವ ಉದ್ದೇಶ ರಿಯಲಿ ಸಿಂಪಲ್ ಸಿಂಡಿಕೇಷನ್ (ಆರ್‌ಎಸ್‌ಎಸ್) ವ್ಯವಸ್ಥೆಯದು. ಈ ವ್ಯವಸ್ಥೆಯನ್ನು ಆಧಾರವಾಗಿಟ್ಟುಕೊಂಡು ಕೆಲಸಮಾಡುತ್ತಿರುವ ಕನ್ನಡ ತಾಣಗಳಿಗೆ 'ಬರಹ ಕನ್ನಡಲೋಕ' ಒಂದು ಉದಾಹರಣೆ. ಆ ತಾಣದಲ್ಲಿ ನೋಂದಾಯಿಸಿಕೊಂಡಿರುವ ಕನ್ನಡದ ಬ್ಲಾಗುಗಳಲ್ಲಿ ಹೊಸದಾಗಿ ಏನೆಲ್ಲ ಲೇಖನಗಳು ಪ್ರಕಟವಾಗುತ್ತಿವೆ ಎನ್ನುವುದನ್ನು ನಾವು ಅಲ್ಲಿ ನೋಡಬಹುದು.

ಬ್ಲಾಗುಗಳಲ್ಲಿ ಪ್ರಕಟವಾಗುವ ಮಾಹಿತಿಯ ಕೊಂಡಿಯನ್ನು ಫೇಸ್‌ಬುಕ್ ಮೂಲಕ ಹಂಚಿಕೊಳ್ಳುವ ಅಭ್ಯಾಸವೂ ವ್ಯಾಪಕವಾಗಿದೆ. ವೈಯಕ್ತಿಕ ಪ್ರೊಫೈಲುಗಳಲ್ಲಷ್ಟೇ ಅಲ್ಲದೆ ಫೇಸ್‌ಬುಕ್‌ನಲ್ಲಿ ನಮ್ಮ ಬ್ಲಾಗಿಗೆಂದೇ ವಿಶೇಷ ಪುಟಗಳನ್ನು ರೂಪಿಸಿಕೊಳ್ಳುವ ಸಾಧ್ಯತೆಯೂ ಇದೆ. ನಮ್ಮ ಬ್ಲಾಗಿನಲ್ಲಿ ಪ್ರಕಟವಾದ ಮಾಹಿತಿಯ ಕೊಂಡಿ ನೇರವಾಗಿ ಫೇಸ್‌ಬುಕ್ ಪುಟದಲ್ಲೂ ಕಾಣಿಸಿಕೊಳ್ಳುವಂತೆ ಮಾಡುವ ಸೇವೆಗಳೂ ಲಭ್ಯವಿವೆ.

ಮೊಬೈಲ್ ಹಾಗೂ ಟ್ಯಾಬ್ಲೆಟ್‌ಗಳಲ್ಲಿ ಕನ್ನಡ
ಈಚಿನ ವರ್ಷಗಳಲ್ಲಿ ಸ್ಮಾರ್ಟ್‌ಫೋನುಗಳೆಲ್ಲ ಬಂದಮೇಲೆ ಕಂಪ್ಯೂಟರುಗಳಿಗೂ ಮೊಬೈಲ್ ಫೋನುಗಳಿಗೂ ನಡುವೆ ವ್ಯತ್ಯಾಸವೇ ಗೊತ್ತಾಗದ ಪರಿಸ್ಥಿತಿ ಹೇಗೂ ನಿರ್ಮಾಣವಾಗಿದೆ, ಅಷ್ಟೇ ಅಲ್ಲದೆ ಅಂದಾಜುಗಳ ಪ್ರಕಾರ ನಮ್ಮ ದೇಶದ ಜನಸಂಖ್ಯೆಯ ಅರ್ಧಕ್ಕೂ ಹೆಚ್ಚಿನ ಜನರು ಈಗಾಗಲೇ ಮೊಬೈಲ್ ಫೋನ್ ಬಳಸುತ್ತಾರಂತೆ. ೨೦೧೩ರ ಮಧ್ಯಭಾಗದಲ್ಲಿ ಪ್ರಕಟವಾದ ಇಂಟರ್‌ನ್ಯಾಷನಲ್ ಟೆಲಿಕಮ್ಯೂನಿಕೇಶನ್ ಯೂನಿಯನ್ ಅಧ್ಯಯನ ವರದಿಯ ಪ್ರಕಾರ ಈ ವರ್ಷ (೨೦೧೪) ಪ್ರಪಂಚದಲ್ಲಿರುವ ಮೊಬೈಲ್ ಸಂಪರ್ಕಗಳ ಸಂಖ್ಯೆ ಪ್ರಪಂಚದ ಜನಸಂಖ್ಯೆಯನ್ನೇ ಮೀರುವ ನಿರೀಕ್ಷೆಯಿದೆ. ಅಷ್ಟೇ ಅಲ್ಲ - ರಷ್ಯನ್ ಒಕ್ಕೂಟ, ಬ್ರೆಜಿಲ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಈ ಪರಿಸ್ಥಿತಿ ಈಗಾಗಲೇ ಸೃಷ್ಟಿಯಾಗಿಬಿಟ್ಟಿದೆ; ಇನ್ನೂ ಕೆಲ ರಾಷ್ಟ್ರಗಳು ಈ ಸಾಲನ್ನು ಸೇರುವ ಹಾದಿಯಲ್ಲಿವೆ!

ವಿಶೇಷ ಲೇಖನ: ಮಾತು ಮಾತುಗಳನು ದಾಟಿ... 

ಆದರೆ ಮೊಬೈಲ್ ಪ್ರಪಂಚದಲ್ಲಿ ಕನ್ನಡದ ಕತೆ ಹೇಗಿದೆ ಎಂದು ನೋಡಲು ಹೊರಟರೆ ನಮಗೆ ಕಾಣಸಿಗುವ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿ ತೋರುವುದಿಲ್ಲ. ಬ್ಯಾಂಕಿಂಗ್ ವ್ಯವಹಾರದಿಂದ ಪ್ರಾರಂಭಿಸಿ ಸಿನಿಮಾ ಟಿಕೆಟ್ ಬುಕಿಂಗ್‌ವರೆಗೆ ಸಕಲವನ್ನೂ ಮೊಬೈಲ್ ಮೂಲಕವೇ ಮಾಡಿಕೊಳ್ಳುವ ಸನ್ನಿವೇಶವಿದ್ದರೂ ಕನ್ನಡದ ಮಟ್ಟಿಗೆ ಮಾತ್ರ `ಕನ್ನಡ ಅಕ್ಷರ ಕಾಣುತ್ತಾ?' ಎಂದು ಕೇಳಿಕೊಂಡು ಮೊಬೈಲಿನ ಬ್ರೌಸರಿನಲ್ಲಿ ಕನ್ನಡ ಪಠ್ಯ ನೋಡಿಯೇ ಖುಷಿಪಡಬೇಕಾದ ಸ್ಥಿತಿ ಬಹುತೇಕ ಬಳಕೆದಾರರದು.

ಇತ್ತೀಚಿನ ಕೆಲ ಸಾಧನಗಳಲ್ಲಿ ಈ ಸಮಸ್ಯೆ ನಿಧಾನಕ್ಕೆ ದೂರವಾಗುತ್ತಿದೆ ಎನ್ನುವುದು ಖುಷಿಯ ವಿಷಯ. ಆಪಲ್ ಹಾಗೂ ಸ್ಯಾಮ್‌ಸಂಗ್ ಉತ್ಪನ್ನಗಳು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿವೆ. ಈ ಸಾಧನಗಳಲ್ಲಿ ಕನ್ನಡವನ್ನು ಓದುವುದಷ್ಟೆ ಅಲ್ಲ, ನಿರ್ದಿಷ್ಟ ಕೀಬೋರ್ಡ್ ತಂತ್ರಾಂಶಗಳನ್ನು ಬಳಸಿ ಕನ್ನಡ ಅಕ್ಷರಗಳನ್ನು ಮೂಡಿಸುವುದು ಕೂಡ ಸಾಧ್ಯ. ಅಷ್ಟೇ ಏಕೆ, ಸಂಪೂರ್ಣವಾಗಿ ಕನ್ನಡದ ಮೆನುಗಳನ್ನೇ ಅಳವಡಿಸಿಕೊಂಡಿರುವ ಮೊಬೈಲ್ ಫೋನುಗಳೂ ಮಾರುಕಟ್ಟೆಯಲ್ಲಿವೆ.

ಫೋನಿನಲ್ಲಿ ಕನ್ನಡ ಅಕ್ಷರಗಳು ಮೂಡಿದ ಮೇಲೆ ಕನ್ನಡದ ಇನ್ನಿತರ ಆಪ್‌ಗಳು ಇಲ್ಲದಿದ್ದರೆ ಹೇಗೆ? ಆಟವಾಡುವುದರಿಂದ ಪ್ರಾರಂಭಿಸಿ ಕನ್ನಡದ ಸುದ್ದಿಗಳನ್ನು ಓದುವವರೆಗೆ ಹಲವು ಕೆಲಸಗಳನ್ನು ಸಾಧ್ಯವಾಗಿಸುವ ಆಪ್‌ಗಳು ಪ್ರಮುಖ ಆಪ್‌ಸ್ಟೋರ್‌ಗಳಲ್ಲಿ ಲಭ್ಯವಿವೆ.

ಹಾಗೆಂದ ಮಾತ್ರಕ್ಕೆ ಇತರ ಫೋನುಗಳಲ್ಲಿ ಕನ್ನಡ ಬರುವುದೇ ಇಲ್ಲ ಎಂದೇನೂ ಇಲ್ಲ. ಮೂಲತಃ ಕನ್ನಡ ಅಕ್ಷರಗಳನ್ನು ಬೆಂಬಲಿಸದ ಹಳೆಯ ಸಾಧನಗಳಲ್ಲೂ ಕನ್ನಡ ಪಠ್ಯ ಓದಲು ಇಲ್ಲೊಂದು ಮಾರ್ಗವಿದೆ: ಒಪೆರಾ ಮಿನಿ ಬ್ರೌಸರನ್ನು ನಿಮ್ಮ ಮೊಬೈಲ್ ಸಾಧನದಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ. ನಂತರ ಅದರ ಅಡ್ರೆಸ್ ಬಾರ್‌ನಲ್ಲಿ 'about:config' ಎಂದು ಟೈಪಿಸಿ. ಆಗ ತೆರೆದುಕೊಳ್ಳುವ ಪುಟದ ಕೊನೆಯವರೆಗೂ ಹೋಗಿ 'Use bitmap fonts for complex script' ಆಯ್ಕೆಯನ್ನು 'Yes' ಎಂದು ಬದಲಿಸಿ ಸೇವ್ ಮಾಡಿ. ಇಷ್ಟು ಮಾಡಿದ ನಂತರ ಒಪೆರಾ ಮಿನಿ ಬ್ರೌಸರಿನಲ್ಲಿ ಕನ್ನಡದ ಪುಟಗಳನ್ನು ನೋಡುವುದು ಸಾಧ್ಯವಾಗುತ್ತದೆ.

ಇಷ್ಟೆಲ್ಲ ಕಷ್ಟ ಬೇಡ, ನಮ್ಮ ಫೋನಿನಲ್ಲಿ ಇಂಗ್ಲಿಷ್ ಬರುವಷ್ಟೇ ಸರಾಗವಾಗಿ ಕನ್ನಡವೂ ಮೂಡಬೇಕು ಎನ್ನುವುದಾದರೆ ಅದಕ್ಕೂ ಒಂದು ಸರಳ ಸೂತ್ರವಿದೆ: ಫೋನ್ ಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಫೋನಿನಲ್ಲಿ ಕನ್ನಡ ಅಕ್ಷರಗಳು ಸರಿಯಾಗಿ ಮೂಡಬೇಕು ಎಂದು ಕೇಳಿದರೆ ಮೊಬೈಲ್ ನಿರ್ಮಾತೃಗಳು ತಾವಾಗಿಯೇ ತಮ್ಮ ಉತ್ಪನ್ನಗಳಲ್ಲಿ ಕನ್ನಡ ಭಾಷೆಯನ್ನು ಬೆಂಬಲಿಸುತ್ತಾರೆ. ಹೀಗೆ ಎಲ್ಲ ಫೋನುಗಳಲ್ಲೂ ಕನ್ನಡ ಭಾಷೆ ಮೂಡುವಂತೆ ಆಗುವವರೆಗಂತೂ ನಾವು ಕನ್ನಡವಿಲ್ಲದ ಫೋನು ನಮಗೆ ಬೇಡ ಎನ್ನುವ ನಿಲುವು ತಳೆದುಬಿಟ್ಟರಾಯಿತು, ಪರಿಸ್ಥಿತಿ ತನ್ನಷ್ಟಕ್ಕೆ ತಾನೇ ಬದಲಾಗಿಬಿಡುತ್ತದೆ!

ಮುಂದಿನ ಹೆಜ್ಜೆಗಳು
ವಿವಿಧ ಜಾಲತಾಣಗಳಲ್ಲಿ ಕನ್ನಡ ಎಷ್ಟೇ ಪ್ರಮಾಣದಲ್ಲಿದ್ದರೂ ಜಾಲತಾಣಗಳ ವಿಳಾಸವನ್ನು (ಯುಆರ್‌ಎಲ್) ಕನ್ನಡದಲ್ಲಿರುವಂತೆ ಮಾಡುವುದು ಮಾತ್ರ ಇನ್ನೂ ಸಾಧ್ಯವಾಗಿಲ್ಲ. ಉದಾಹರಣೆಗೆ www.karunadu.gov.in ಎನ್ನುವುದು ಕರ್ನಾಟಕ ಸರಕಾರದ ಜಾಲತಾಣದ ವಿಳಾಸ. ಇದರಲ್ಲಿನ ಮಾಹಿತಿ ಕನ್ನಡ ಇಂಗ್ಲಿಷ್ ಎರಡು ಭಾಷೆಗಳಲ್ಲೂ ಇದೆ. ಆದರೆ ತಾಣದ ವಿಳಾಸ ಮಾತ್ರ ಇಂಗ್ಲಿಷಿನಲ್ಲೇ ಇರಬೇಕಾಗಿರುವುದು ಸದ್ಯದ ಪರಿಸ್ಥಿತಿ.

ಜಾಲತಾಣಗಳ ವಿಳಾಸವನ್ನು ಇಂಗ್ಲಿಷಿನ ಬದಲು ನಮ್ಮದೇ ಭಾಷೆಯಲ್ಲಿ ಇಟ್ಟುಕೊಳ್ಳಲು ಅನುವುಮಾಡಿಕೊಡುವ ಇಂಟರ್‌ನ್ಯಾಷನಲೈಸ್ಡ್ ಡೊಮೈನ್ ನೇಮ್ (ಐಡಿಎನ್) ಸೌಲಭ್ಯ ಈಗಾಗಲೇ ಅಸ್ತಿತ್ವದಲ್ಲಿದೆಯಾದರೂ ಭಾರತೀಯ ಭಾಷೆಗಳ ಪೈಕಿ ಅದು ಹಿಂದಿ, ಗುಜರಾತಿ, ಉರ್ದು, ಪಂಜಾಬಿ, ಬೆಂಗಾಲಿ, ತಮಿಳು ಹಾಗೂ ತೆಲುಗು ಭಾಷೆಗಳಿಗಷ್ಟೆ ಸಿಕ್ಕಿದೆ. ಮುಂದೆ ಕನ್ನಡಕ್ಕೂ ಐಡಿಎನ್ ಸೌಲಭ್ಯ ಬಂದಾಗ ಮೇಲಿನ ಉದಾಹರಣೆಯಲ್ಲಿ ನೋಡಿದ ತಾಣದ ವಿಳಾಸವನ್ನು ನಮ್ಮ ಬ್ರೌಸರಿನ ಅಡ್ರೆಸ್ ಬಾರ್‌ನಲ್ಲಿ ಕನ್ನಡ ಅಕ್ಷರಗಳಲ್ಲಿಯೇ ಬರೆಯುವುದು ಸಾಧ್ಯವಾಗಲಿದೆ.

ಕನ್ನಡಕ್ಕೆ ಯೂನಿಕೋಡ್ ಶಿಷ್ಟತೆಯನ್ನು ಕಡ್ಡಾಯವೆಂದು ಇತ್ತೀಚೆಗೆ ಪ್ರಕಟಿಸಲಾಗಿದೆಯಲ್ಲ, ಅದರೊಡನೆ ಸರಕಾರದ ಎಲ್ಲ ಜಾಲತಾಣಗಳೂ ಕನ್ನಡದಲ್ಲಿ - ಅದರಲ್ಲೂ ಯುನಿಕೋಡ್‌ನಲ್ಲಿ - ಇರುವಂತೆ ಮಾಡುವುದು ಮತ್ತು ಅವುಗಳಲ್ಲಿರುವ ಮಾಹಿತಿ ಆಗಿಂದಾಗ್ಗೆ ಅಪ್‌ಡೇಟ್ ಆಗುತ್ತಿರುವಂತೆ ನೋಡಿಕೊಳ್ಳುವುದೂ ಅಗತ್ಯ. ತಮಗೆ ಬೇಕಾದ ಯಾವುದೇ ಮಾಹಿತಿಯನ್ನು ಯಾರು ಯಾವಾಗ ಬೇಕಿದ್ದರೂ ಸುಲಭವಾಗಿ ಹುಡುಕಿಕೊಳ್ಳುವುದು ಇದರಿಂದ ಸಾಧ್ಯವಾಗುತ್ತದೆ. ಈಗಾಗಲೇ ಲಭ್ಯವಿರುವ ಇ-ಸ್ಪೀಕ್ ತಂತ್ರಾಂಶ ಬಳಸಿ ದೃಷ್ಟಿಸವಾಲು ಎದುರಿಸುತ್ತಿರುವವರು ಕೂಡ ಈ ತಾಣಗಳ ಉಪಯೋಗ ಪಡೆದುಕೊಳ್ಳಬಹುದು. ಸರಕಾರದ ತಾಣಗಳಷ್ಟೇ ಅಲ್ಲ, ಎಲ್ಲ ಪತ್ರಿಕೆಗಳ ಜಾಲತಾಣಗಳೂ ಯುನಿಕೋಡ್‌ನಲ್ಲಿದ್ದರೆ ಗೂಗಲ್ ನ್ಯೂಸ್‌ನಂತಹ ಸೇವೆಗಳಲ್ಲಿ ಕನ್ನಡಕ್ಕೆ ಸ್ಥಾನ ಬೇಕೆಂಬ ಬಹುದಿನಗಳ ಬೇಡಿಕೆಗೆ ಇನ್ನಷ್ಟು ಬಲ ಬರುತ್ತದೆ.

ಮೊಬೈಲ್ ಫೋನ್ ತಯಾರಕರಿಗೆ ಯೂನಿಕೋಡ್ ಶಿಷ್ಟತೆಯನ್ನು ಅಳವಡಿಸಿಕೊಳ್ಳುವಂತೆ ನಿರ್ದೇಶನ ನೀಡುವುದು ಆಗಬೇಕಿರುವ ಇನ್ನೊಂದು ಕೆಲಸ. ಎಲ್ಲರ ಕೈಯಲ್ಲೂ ಒಂದೊಂದು ಮೊಬೈಲ್ ದೂರವಾಣಿ ಕಾಣಸಿಗುವ ಈ ದಿನಗಳಲ್ಲಿ ಅವು ಕನ್ನಡ ಬಳಸುವಂತಿರಬೇಕಾದದ್ದು ಅತ್ಯಗತ್ಯ. ಕನ್ನಡದಲ್ಲೇ ಸಂದೇಶಗಳನ್ನು ಕಳುಹಿಸುವುದು, ಕನ್ನಡದ ನಿಘಂಟುಗಳನ್ನು ಅಳವಡಿಸುವುದು ಮುಂತಾದ ಕೆಲಸಗಳೆಲ್ಲ ಇದರಿಂದ ಸುಲಭವಾಗಲಿದೆ. ಎಲ್ಲ ಟ್ಯಾಬ್ಲೆಟ್ ಗಣಕಗಳು ಹಾಗೂ ಇ- ಬುಕ್ ರೀಡರ್‌ಗಳಲ್ಲೂ ಯುನಿಕೋಡ್ ಬೆಂಬಲ ಸಿಗಬೇಕಾದ್ದು ಕೂಡ ಅಗತ್ಯ.

ಕೆಲವು ಜಾಲತಾಣಗಳು (೨೦೧೪ರ ಅಕ್ಟೋಬರ್‌ನಲ್ಲಿದ್ದಂತೆ)

ಕನ್ನಡದಲ್ಲಿರುವ ವಿಜ್ಞಾನ-ತಂತ್ರಜ್ಞಾನ ತಾಣಗಳ ಪ್ರಾತಿನಿಧಿಕ ಪಟ್ಟಿಯನ್ನು ಇಲ್ಲಿ ನೋಡಬಹುದು.

ಹೆಚ್ಚಿನ ಓದು



ಮಾಹಿತಿ ತಂತ್ರಜ್ಞಾನ ಕುರಿತು ಕನ್ನಡದಲ್ಲಿ ನಿಯಮಿತವಾಗಿ ಬರೆಯುವ  ಟಿ. ಜಿ. ಶ್ರೀನಿಧಿ ಇಜ್ಞಾನ ಡಾಟ್ ಕಾಮ್ ಎಂಬ ಜಾಲತಾಣವನ್ನು ನಡೆಸುತ್ತಿದ್ದಾರೆ. ಆರುನೂರಕ್ಕೂ ಹೆಚ್ಚು ಲೇಖನಗಳನ್ನು, ಹತ್ತು ಪುಸ್ತಕಗಳನ್ನು ರಚಿಸಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಶ್ರೇಷ್ಠ ಲೇಖಕ ಪ್ರಶಸ್ತಿ ಪಡೆದಿದ್ದಾರೆ.

0 comments:

Post a Comment