ಪರಿಸರದ ಸಮಸ್ಯೆಗಳು

ಇದು ಹತ್ತನೆಯ ತರಗತಿ ಕನ್ನಡ ಮಾಧ್ಯಮದ ವಿಜ್ಞಾನ ಪಠ್ಯಪುಸ್ತಕದಿಂದ ಆಯ್ದ ಒಂದು ಅಧ್ಯಾಯ. ಪಠ್ಯಸಾಮಗ್ರಿಯನ್ನು ಪೂರಕ ಮಾಹಿತಿಯೊಡನೆ ಹೇಗೆ ಬಳಸಬಹುದೆಂದು ತೋರಿಸಲು ಈ ಅಧ್ಯಾಯವನ್ನು ಉದಾಹರಣೆಯಾಗಿ ತೆಗೆದುಕೊಳ್ಳಲಾಗಿದೆ. ಈ ಚಟುವಟಿಕೆಯ ಹಿಂದೆ ಯಾವುದೇ ವಾಣಿಜ್ಯ ಉದ್ದೇಶ ಇಲ್ಲ.

ಈ ಪ್ರಯೋಗ ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಹಾಗಾಗಿ ಇಲ್ಲಿರಬಹುದಾದ ದೋಷಗಳನ್ನು ದಯಮಾಡಿ ಕ್ಷಮಿಸಿ, ನಮ್ಮ ಗಮನಕ್ಕೆ ತನ್ನಿ.


*  *  *  *  *

ಈ ಅಧ್ಯಾಯವನ್ನು ಕಲಿತ ನಂತರ ನೀವು
  • ಪರಿಸರ ಮಾಲಿನ್ಯವನ್ನು ನಿರೂಪಿಸುವಿರಿ.
  • ವಿವಿಧ ಬಗೆಯ ಮಾಲಿನ್ಯಕಾರಕಗಳ ವ್ಯತ್ಯಾಸಗಳನ್ನು ಹೇಳಬಲ್ಲಿರಿ.
  • ವಾಯು, ನೀರು ಹಾಗೂ ನೆಲ ಮಾಲಿನ್ಯಗಳ ಆಕರಗಳ ಬಗ್ಗೆ ತಿಳಿಯುವಿರಿ.
  • ಮಾಲಿನ್ಯಗಳ ಪರಿಣಾಮಗಳನ್ನು ತಿಳಿಯುವಿರಿ.
  • ಆಮ್ಲಮಳೆ, ಜಾಗತಿಕ ತಾಪದ ಏರಿಕೆ, ಓಝೋನ್ ಪದರದ ವಿನಾಶ ಮುಂತಾದ ಜಾಗತಿಕ ಪರಿಸರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಿರಿ.
  • ಶಬ್ದ ಹಾಗೂ ವಿಕಿರಣ ಮಾಲಿನ್ಯಗಳ ದುಷ್ಪರಿಣಾಮಗಳ ಬಗ್ಗೆ ತಿಳಿಯುವಿರಿ.
ಜೀವಿಗೋಳದಲ್ಲಿರುವ ಎಲ್ಲ ಜೀವಿಗಳು ತಮ್ಮ ಅವಶ್ಯಕ ವಸ್ತುಗಳನ್ನು ಭೂಮಿಯ ಭಾಗಗಳಾದ ವಾತಾವರಣ, ಜಲಾವರಣ ಹಾಗೂ ಸ್ವಲ್ಪಮಟ್ಟಿಗೆ ಶಿಲಾವರಣದಿಂದ ಪಡೆಯುತ್ತವೆ ಎಂಬುದು ನಿಮಗೆ ತಿಳಿದಿದೆ.ಈ ಎಲ್ಲಾ ಭಾಗಗಳ ಘಟಕಗಳ ಪರಸ್ಪರ ಅವಲಂಬನೆ ಹಾಗೂ ಪ್ರಭಾವಗಳ ಮೂಲಕ ನಿಸರ್ಗದಲ್ಲಿ ಸಮತೋಲನವನ್ನು ಕಾಪಾಡಿಕೊಂಡಿವೆ ಎಂಬುದೂ ಸಹ ನಿಮಗೆ ತಿಳಿದಿದೆ. ವಾತಾವರಣ, ಜಲಾವರಣ ಹಾಗೂ ಶಿಲಾವರಣಗಳ ಲಕ್ಷಣಗಳಲ್ಲಿ ಉಂಟಾಗುವ ಯಾವುದೇ ಬದಲಾವಣೆ, ಜೀವಿಗೋಳದಲ್ಲಿರುವ ನಾವೂ ಸೇರಿದಂತೆ ಎಲ್ಲ ಜೀವಿಗಳ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ.ಇಂದು, ಮಾನವನ ಅನೇಕ ಚಟುವಟಿಕೆಗಳು ಪರಿಸರವನ್ನು ಬದಲಾಯಿಸುತ್ತಿದ್ದು ಸ್ಥಳೀಯ ಹಾಗೂ ಜಾಗತಿಕಮಟ್ಟದಲ್ಲಿ ಅನೇಕ ಸಮಸ್ಯೆಗಳನ್ನು ಹುಟ್ಟುಹಾಕಿದೆ.ಅಂಥ ಕೆಲವು ಪ್ರಮುಖ ಸಮಸ್ಯೆಗಳನ್ನು ಈಗ ಗಮನಿಸೋಣ.

ನಾವು ಪರಿಸರದಲ್ಲಿ ಮಹತ್ತರ ಬದಲಾವಣೆ ಉಂಟುಮಾಡುತ್ತಿರುವ ಅನೇಕ ಬಗೆಯ ವಸ್ತುಗಳನ್ನು, ನಮ್ಮದೇ ಚಟುವಟಿಕೆಗಳ ಉತ್ಪನ್ನಗಳಾಗಿ ಪರಿಸರಕ್ಕೆ ಸೇರಿಸುತ್ತಿದ್ದೇವೆ.ಪರಿಸರದ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಲಕ್ಷಣಗಳ ಮೇಲೆ ಪರಿಣಾಮ ಬೀರುತ್ತಿರುವ ಯಾವುದೇ ಅನಪೇಕ್ಷಿತ ಬದಲಾವಣೆಗಳಿಗೆ ಪರಿಸರ ಮಾಲಿನ್ಯ ಎಂದು ಹೆಸರು.ಅಂಥ ಅನಪೇಕ್ಷಿತ ಬದಲಾವಣೆಗಳನ್ನು ತರುವ ವಸ್ತುಗಳಿಗೆ ಮಾಲಿನ್ಯಕಾರಕಗಳು ಎಂದು ಹೆಸರು.

ನಿಮಗೆ ತಿಳಿದಿರಲಿ 
ಯಾವುದೇ ಘಟಕವನ್ನು ಮಾಲಿನ್ಯಕಾರಕ ಎಂದು ಕರೆಯಬೇಕಾದಲ್ಲಿ ಅದಕ್ಕೆ ಸಂಬಂಧಿಸಿದಂತೆ ಮಾನವನ ಹಸ್ತಕ್ಷೇಪ ಇರಬೇಕು. ಉದಾಹರಣೆಗೆ ಗುಡುಗು ಹಾಗೂ ಮಿಂಚಿನ ಸಂದರ್ಭಗಳಲ್ಲಿ ಬಿಡುಗಡೆಯಾಗುವ ನೈಟ್ರೋಜನ್ ಆಕ್ಸೈಡ್‌ಗಳು ಮಾಲಿನ್ಯ ಎನಿಸುವುದಿಲ್ಲ. ಆದರೆ ಕೈಗಾರಿಕೆ ಮತ್ತು ವಾಹನಗಳಿಂದ ತ್ಯಾಜ್ಯವಾಗಿ ಹೊರಬರುವ ನೈಟ್ರೋಜನ್ ಆಕ್ಸೈಡ್‌ಗಳು ಮಾಲಿನ್ಯಕಾರಕವಾಗುತ್ತವೆ.

ಮಾಲಿನ್ಯಕಾರಕಗಳನ್ನು ಪ್ರಮುಖವಾಗಿ ಎರಡು ವರ್ಗಗಳಾಗಿ ಗುರುತಿಸಬಹುದು.

ಕೆಲವು ಮಾಲಿನ್ಯಕಾರಕಗಳನ್ನು ಅವುಗಳ ಸಾರತೆಯನ್ನು ಕಡಿಮೆ ಮಾಡುವ ಮೂಲಕ ಅಥವಾ ಅವುಗಳನ್ನು ವಿಘಟಿಸುವ ಮೂಲಕ. ಕಡಿಮೆ ಹಾನಿಕಾರಕಗಳಾಗಿ ಪರಿವರ್ತಿಸಬಹುದು.

ಉದಾಹರಣೆ: ಕಲ್ಲಿದ್ದಲಿನ ದಹನದಿಂದ ಬಿಡುಗಡೆಯಾಗುವ ಸಲ್ಪರ್ ಡೈಆಕ್ಸೈಡ್ ಮಳೆಯ ನೀರಿನಲ್ಲಿ ವಿಲೀನವಾದಾಗ ತನ್ನ ಸಾರತೆಯನ್ನು ಕಳೆದುಕೊಳ್ಳುತ್ತದೆ. ನಗರ ಪ್ರದೇಶದಲ್ಲಿಯ ಚರಂಡಿ ನೀರನ್ನು ಸೂಕ್ತ ಜೈವಿಕ ಕ್ರಿಯೆಗಳ ಮೂಲಕ ಕಡಿಮೆ ಹಾನಿಕಾರಕಗಳಾಗಿ ಪರಿವರ್ತಿಸಬಹುದು. ಅಂಥ ಮಾಲಿನ್ಯಕಾರಕಗಳ ಪರಿಣಾಮ ಅವು ರಾಸಾಯನಿಕ ಪರಿವರ್ತನೆ ಆಗುವವರೆಗೆ ಮಾತ್ರ ಇರುತ್ತದೆ. ಇಂಥ ಮಾಲಿನ್ಯಕಾರಕಗಳಿಗೆ ತಾತ್ಕಾಲಿಕ ಮಾಲಿನ್ಯಕಾರಕಗಳೆಂದು ಹೆಸರು. ಇವುಗಳಲ್ಲಿ ಕೆಲವು ಜೈವಿಕ ವಿಘಟನೆಗೆ ಒಳಗಾಗುವ ಮಾಲಿನ್ಯಕಾರಕಗಳು (biodegradable).

ಬಹುತೇಕ ಮಾಲಿನ್ಯಕಾರಕಗಳು ಪರಿಸರದಲ್ಲೇ ದೀರ್ಘಕಾಲ ಉಳಿದು ಜೀವಿಗಳಿಗೆ ಅಪಾಯಕಾರಿ ಆಗುತ್ತವೆ. ಉದಾ: ಪೆಟ್ರೋಲ್ ದಹನದಿಂದ ಹೊರಬರುವ ಸೀಸದ ಆವಿ (lead vapours) ನಮ್ಮ ಉಸಿರಾಟದ ಕ್ರಿಯೆಯ ಮೂಲಕ ನಮ್ಮ ಶ್ವಾಸಕೋಶವನ್ನು ಸೇರಿ ಅಲ್ಲಿಯೇ ಸಂಗ್ರಹವಾಗುತ್ತದೆ. ಒಂದು ಕೃಷಿ ಭೂಮಿಯ ಸಮೀಪವಿರುವ ಕೊಳದಲ್ಲಿ ಡಿ.ಡಿ.ಟಿ. (D.D.T) ಮುಂತಾದ ಕೀಟನಾಶಕಗಳು ಸಂಗ್ರಹವಾಗುತ್ತವೆ. ಕಡಿಮೆ ಹಾನಿಕಾರಕ ಸ್ಥಿತಿಗೆ ಪರಿವರ್ತನೆಗೊಳ್ಳದ ಇಂಥ ವಸ್ತುಗಳಿಗೆ ಜೈವಿಕ ವಿಘಟನೆಗೊಳಗಾಗದ ಮಾಲಿನ್ಯಕಾರಕಗಳೆಂದು (non biodegradable) ಹೆಸರು.

ನಿಮಗೆ ತಿಳಿದಿರಲಿ
ಜೈವಿಕ ವಿಘಟನೆಗೆ ಒಳಗಾಗದ ಮಾಲಿನ್ಯಕಾರಕಗಳು ಆಹಾರ ಸರಪಳಿಯನ್ನು ಸೇರಿದಾಗ ಅವುಗಳ ಸಾರತೆ ಪ್ರತೀ ಪೋಷಣಾ ಸ್ತರದಲ್ಲಿ ಹೆಚ್ಚುತ್ತಾ ಹೋಗುತ್ತದೆ. ಇದಕ್ಕೆ ಜೈವಿಕ ಸಂವರ್ಧನೆ ಎಂದು ಹೆಸರು.

ವಾಯುಮಾಲಿನ್ಯ

ಇತ್ತೀಚಿನ ದಿನಗಳಲ್ಲಿ ನಾವು ಆಮ್ಲ ಮಳೆ, ಭೂತಾಪದ ಏರಿಕೆ, ಓಝೋನ್ ಪದರದ ನಾಶ ಹಾಗೂ ಹವಾಮಾನ ಬದಲಾವಣೆ ಮುಂತಾದ ಜಾಗತಿಕ ಪರಿಸರ ಸಮಸ್ಯೆಗಳ ಬಗ್ಗೆ ಕೇಳುತ್ತಿದ್ದೇವೆ. ಇಂಥ ಎಲ್ಲ ಸಮಸ್ಯೆಗಳೂ ವಾಯುಮಾಲಿನ್ಯದ ದೂರಗಾಮಿ ಪರಿಣಾಮಗಳು. ವಾತಾವರಣದಲ್ಲಿ ಮಹತ್ವವಾದ ಬದಲಾವಣೆಗಳನ್ನು ತರಬಲ್ಲ ಮಾನವನ ಯಾವುದೇ ಚಟುವಟಿಕೆಯ ಪರಿಣಾಮಕ್ಕೆ ವಾಯುಮಾಲಿನ್ಯ ಎಂದು ಹೆಸರು. ವಾಯುಮಾಲಿನ್ಯಕ್ಕೆ ಕಾರಣವಾಗುವ ಮಾನವ ಚಟುವಟಿಕೆಗಳು ಪ್ರಮುಖವಾಗಿ ಹೀಗಿವೆ:

ಕಲ್ಲಿದ್ದಲಿನ ದಹನ: ಅನೇಕ ಕೈಗಾರಿಕೆಗಳು, ತಮ್ಮ ಕುಲುಮೆಗಳಲ್ಲಿ ಪ್ರಮುಖ ಇಂಧನವಾಗಿ ಕಲ್ಲಿದ್ದಲನ್ನು ಬಳಸುತ್ತವೆ. ಕಲ್ಲಿದ್ದಲಿನ ದಹನದಿಂದ ಸಲ್ಫರ್ ಡೈ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್ ಹಾಗೂ ಅಲ್ಪ ಪ್ರಮಾಣದಲ್ಲಿ ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ಇವೆಲ್ಲವೂ ವಾಯುಮಾಲಿನ್ಯಕಾರಕಗಳು.

ಡೀಸೆಲ್ ದಹನ: ಭಾರಿ ವಾಹನಗಳು ಹಾಗೂ ಸಾರಿಗೆ ವಾಹನಗಳಲ್ಲಿ ಡೀಸೆಲ್ಅನ್ನು ಇಂಧನವಾಗಿ ಬಳಸಲಾಗುತ್ತದೆ. ಡೀಸೆಲ್ ದಹನದಿಂದ ಪ್ರಮುಖವಾಗಿ ಕಾರ್ಬನ್ ಮಾನಾಕ್ಸೈಡ್ ಮತ್ತು ಕಾರ್ಬನ್‌ನ ಸೂಕ್ಷ್ಮಕಣಗಳು ಮಾಲಿನ್ಯಕಾರಕಗಳಾಗಿ ಹೊರಬರುತ್ತವೆ.

ಪೆಟ್ರೋಲ್ ದಹನ: ಕಾರುಗಳಲ್ಲಿ ಮತ್ತು ದ್ವಿಚಕ್ರವಾಹನಗಳಲ್ಲಿ ಇಂಧನವಾಗಿ ಬಳಸಲಾಗುವ ಪೆಟ್ರೋಲ್ ದಹನ ಕ್ರಿಯೆಗೆ ಒಳಗಾದಾಗ ನೈಟ್ರೋಜನ್ ಆಕ್ಸೈಡ್‌ಗಳು, ಕಾರ್ಬನ್ ಡೈಆಕ್ಸೈಡ್ ಹಾಗೂ ಕೆಲವೊಮ್ಮೆ ಸೀಸದ ಆವಿ ಬಿಡುಗಡೆಯಾಗುತ್ತದೆ.

ತಂಬಾಕು ಸೇವನೆ: ಬೇರೆ ಬೇರೆ ರೂಪಗಳಲ್ಲಿ ತಂಬಾಕನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗುವುದರ ಜೊತೆಗೆ ವಾಯುಮಾಲಿನ್ಯಕ್ಕೂ ಕಾರಣವಾಗುತ್ತದೆ. ಸಿಗರೇಟಿನ ಹೊಗೆಯಲ್ಲಿ ಅತಿ ಹೆಚ್ಚು ಪ್ರಮಾಣದ ಕಾರ್ಬನ್ ಮಾನಾಕ್ಸೈಡ್ ಇರುತ್ತದೆ.

ನಿಮಗೆ ತಿಳಿದಿರಲಿ
ಅತ್ಯಂತ ಹೆಚ್ಚು ವಾಯುಮಾಲಿನ್ಯಕ್ಕೆ ಒಳಗಾಗಿರುವ ನಗರಗಳಲ್ಲಿ ಒಂದು ದಿನ ವಾಸಿಸಿದಾಗ ಆಗುವ ದುಷ್ಪರಿಣಾಮ, ಒಂದು ದಿನಕ್ಕೆ ಎರಡು ಪ್ಯಾಕ್ ಸಿಗರೇಟು ಸೇವನೆಯಿಂದ ಉಂಟಾಗುತ್ತದೆ.

ನಗರ ತ್ಯಾಜ್ಯಗಳ ದಹನ: ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳ ನಿರ್ವಹಣೆಗಾಗಿ ಅವುಗಳನ್ನು ಸುಡುವ ಪ್ರಕ್ರಿಯೆಯು ಕಾರ್ಬನ್ ಮಾನಾಕ್ಸೈಡ್ ಬಿಡುಗಡೆಗೆ ಕಾರಣವಾಗುತ್ತದೆ.

ನಗರಗಳಲ್ಲಿ ಕಸದ ನಿರ್ವಹಣೆ ಬಲುದೊಡ್ಡ ಸಮಸ್ಯೆ. ಕಸದ ಸ್ವರೂಪ, ಅವುಗಳ ಪರಿಣಾಮ ಹಾಗೂ ನಿರ್ವಹಣೆಯ ಕುರಿತು ಮಾಹಿತಿ ನೀಡುವ ಪುಸ್ತಕ 'ಪರಿಸರ ಸಂರಕ್ಷಣೆಗಾಗಿ ಗಟ್ಟಿ ಕಸದ ನಿರ್ವಹಣೆ'ಯನ್ನು ಕಣಜದಲ್ಲಿ ಓದಿ!

ವಾಯುಮಾಲಿನ್ಯಕಾರಕಗಳು ಮತ್ತು ಅವುಗಳ ಪರಿಣಾಮಗಳು

ಮಾಲಿನ್ಯಕಾರಕ ಆಕರಗಳು ಆರೋಗ್ಯದ ಮೇಲೆ ಪರಿಣಾಮಗಳು
ಸಲ್ಫರ್‌ ಆಕ್ಸೈಡ್‌ಗಳ ಕಣಗಳು ಕಲ್ಲಿದ್ದಲು ಮತ್ತು ತೈಲ ಸ್ಥಾವರಗಳು, ತೈಲ ಸಂಸ್ಕರಣ ಕೇಂದ್ರಗಳು, ಅದಿರು ಕರಗಿಸುವ ಘಟಕಗಳು, ಸೀಮೆ ಎಣ್ಣೆ ಶ್ವಾಸನಾಳ ಸಂಬಂಧಿ ಕಾಯಿಲೆಗಳು
ಕಾರ್ಬನ್‌ ಮಾನಾಕ್ಸೈಡ್‌ ವಾಹನಗಳಿಂದ ಹೊರಬರುವ ಹೊಗೆ, ಪಳೆಯುಳಿಕೆ ಇಂಧನಗಳ ದಹನ ಉಸಿರುಗಟ್ಟುವಿಕೆ, ಅದರಿಂದ ಹೃದಯ ನರಮಂಡಲಗಳಿಗೆ ಹಾನಿ, ಸಾವು
ನೈಟ್ರೋಜನ್‌ ಆಕ್ಸೈಡ್‌ಗಳು (NOx) ವಾಹನಗಳ ಹೊಗೆ, ಪಳೆಯುಳಿಕೆ ಇಂಧನ, ಶಕ್ತಿ ಸ್ಥಾವರಗಳು, ತೈಲ ಸಂಸ್ಕರಣಾ ಘಟಕಗಳು ಉಸಿರಾಟದ ರೋಗಗಳು
ಓಝೋನ್‌ (O3) ವಾಹನಗಳ ಹೊಗೆ, ಓಝೋನ್‌ ಉತ್ಪಾದನಾ ಘಟಕಗಳು, ವಿಮಾನಗಳ ಕ್ಯಾಬಿನ್‌ಗಳು ಉಸಿರಾಟದ ರೋಗಗಳು
ಸುಗಂಧಿತ ಬಹುಚಕ್ರೀಯ ಹೈಡ್ರೋಕಾರ್ಬನ್‌ಗಳು ಡೀಸೆಲ್‌ ಹೊಗೆ, ಸಿಗರೇಟ್‌ನ ಹೊಗೆ, ಸ್ಟೋವ್‌ನ ಹೊಗೆ ಶ್ವಾಸಕೋಶದ ಕ್ಯಾನ್ಸರ್
ಆಸ್‌ಬೆಸ್ಟಾಸ್‌ ಆಸ್‌ಬೆಸ್ಟಾಸ್‌ ಗಣಿ ಮತ್ತು ಯಂತ್ರಾಗಾರಗಳು, ಇನ್ಸುಲೇಷನ್‌, ಕಟ್ಟಡ ಸಾಮಗ್ರಿಗಳು ಶ್ವಾಸಕೋಶದ ಕ್ಯಾನ್ಸರ್‌, ಆಸ್‌ಬೆಸ್ಟೋಸಿಸ್‌
ಆರ್ಸೆನಿಕ್‌ ತಾಮ್ರದ ಅದಿರು ಸಂಸ್ಕರಣಾ ಘಟಕ, ಸಿಗರೇಟ್‌ ಹೊಗೆ. ಶ್ವಾಸಕೋಶದ ಕ್ಯಾನ್ಸರ್‌.
ಅಲರ್ಜಿಕಾರಕಗಳು ಪರಾಗ, ಪ್ರಾಣಿ ಚರ್ಮದ ಹೊಟ್ಟು, ಮನೆಧೂಳು ಅಸ್ತಮಾ, ಮೂಗು ಸೋರುವುದು

ನಿಮಗೆ ತಿಳಿದಿರಲಿ
ವಾಯುಮಾಲಿನ್ಯವನ್ನು ನಾವು ಸಾಮಾನ್ಯವಾಗಿ ಮನೆಯ ಹೊರಗೆ ಉಂಟಾಗುವ ಪ್ರಕ್ರಿಯೆ ಎಂದು ಪರಿಗಣಿಸುತ್ತೇವೆ. ಆದರೆ, ನಾವು ಪ್ರತಿಯೊಬ್ಬರೂ ನಿತ್ಯ ನಮ್ಮ ಸಮಯದ ಮುಕ್ಕಾಲು ಭಾಗವನ್ನು ಮನೆಯ ಒಳಗೇ ಕಳೆಯುತ್ತೇವೆ. ಈ ಅವಧಿಯಲ್ಲಿ ನಾವು ನಿರಂತರವಾಗಿ ಅನೇಕ ಆಂತರಿಕ ವಾಯುಮಾಲಿನ್ಯ ಕಾರಣಗಳಿಗೆ ನಮ್ಮನ್ನು ಒಡ್ಡಿಕೊಳ್ಳುತ್ತೇವೆ. ಅಡುಗೆ ಮಾಡುವುದರಿಂದ ಪ್ರಾರಂಭಿಸಿ ಶುಚಿಗೊಳಿಸುವವರೆಗೆ ವಿವಿಧ ದೈನಂದಿನ ಚಟುವಟಿಕೆಗಳಲ್ಲಿ ವಾಯುಮಾಲಿನ್ಯಕ್ಕೆ ಕಾರಣವಾಗುವ ಅನೇಕ ವಸ್ತುಗಳನ್ನು ಬಳಸುತ್ತಿದ್ದೇವೆ. ಇವುಗಳ ಜೊತೆಗೆ ನಮ್ಮ ಮನೆಯ ಸುತ್ತಮುತ್ತಲೂ ವಾಯುಮಾಲಿನ್ಯಕ್ಕೆ ಕಾರಣವಾಗುವ ಅನೇಕ ಆಕರಗಳು ಇವೆ. 


ಮೇಲಿನ ಚಿತ್ರ ಗಮನಿಸಿ, ಅಂಥ ಒಳಾಂಗಣ ಮಾಲಿನ್ಯಕಾರಕಗಳನ್ನು ಗುರುತಿಸಿ [ಚಿತ್ರದ ಆಕರ].

ವಾಯುಮಾಲಿನ್ಯದ ನಿಯಂತ್ರಣ

ವಾಯುಮಾಲಿನ್ಯದ ಕಾರಣಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದೇ ಅದನ್ನು ನಿಯಂತ್ರಿಸುವ ಮಾರ್ಗೋಪಾಯಗಳನ್ನು ನಿರ್ಧರಿಸುವುದಕ್ಕೆ ಸಹಾಯಕ. ಆದಾಗ್ಯೂ, ಈ ಕೆಳಗಿನ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು.
  • ನಗರ ಹಾಗೂ ಪಟ್ಟಣಗಳಿಂದ ದೂರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು.
  • ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯಗಳನ್ನು ಪರೀಕ್ಷೆಗೆ ಒಳಪಡಿಸುವುದು ಹಾಗೂ ನಿಯಂತ್ರಿಸುವುದು.
  • ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಕಾನೂನು, ಕಟ್ಟಳೆಗಳನ್ನು ತಪ್ಪದೇ ಪಾಲಿಸುವುದು.
  • ವಾಹನಗಳ ಇಂಜಿನ್ನ ಸಾಮರ್ಥ್ಯ ಹೆಚ್ಚಿಸಿ ಮಾಲಿನ್ಯ ಕಡಿಮೆ ಮಾಡುವಂತೆ ನಿಯತವಾಗಿ ವಾಹನಗಳನ್ನು ಪರೀಕ್ಷೆಗೆ ಒಳಪಡಿಸುವುದು.
  • ಸೀಸರಹಿತ ಪೆಟ್ರೋಲ್ ಹಾಗೂ ಜೈವಿಕ ಇಂಧನ ಬಳಸುವಂತೆ ಉತ್ತೇಜನ ನೀಡುವುದು.
  • ಖಾಸಗೀ ವಾಹನ ಬಳಸದಂತೆ ಹಾಗೂ ಸಾರ್ವಜನಿಕ ಸಾರಿಗೆ ಬಳಸುವಂತೆ ಜಾಗೃತಿ ಉಂಟುಮಾಡುವುದು.
  • ಆಕರಗಳ ಹಂತದಲ್ಲೇ ಮಾಲಿನ್ಯಕಾರಕಗಳನ್ನು ನಿಯಂತ್ರಿಸುವ ಕ್ರಮಗಳನ್ನು ಜಾರಿಗೊಳಿಸುವುದು.
ಚಟುವಟಿಕೆ
ಆಕರಗಳ ಹಂತದಲ್ಲಿ ಮಾಲಿನ್ಯಕಾರಕಗಳನ್ನು ನಿಯಂತ್ರಿಸುವ ಕ್ರಮಗಳನ್ನು ಪತ್ತೆ ಮಾಡಿ.

ಜಲಮಾಲಿನ್ಯ

ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯಗಳು, ಚರಂಡಿ ನೀರಿನ ಸಂಗ್ರಹ ಹಾಗೂ ಕೃಷಿಯಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿರುವ ರಾಸಾಯನಿಕ ಗೊಬ್ಬರಗಳು ಹಾಗೂ ಪೀಡನಾಶಕಗಳು ಜಲಮಾಲಿನ್ಯಕ್ಕೆ ಪ್ರಮುಖ ಕಾರಣಗಳು.

ಈ ಕೆಳಗಿನವು ಪ್ರಮುಖ ಜಲಮಾಲಿನ್ಯಕಾರಕಗಳು.
  • ಕೈಗಾರಿಕಾ ತ್ಯಾಜ್ಯಗಳು : ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯಗಳ ಪ್ರಮಾಣ ಎಷ್ಟು ಹೆಚ್ಚಿದೆ ಎಂದರೆ, ಅವುಗಳನ್ನು ಹತ್ತಿರದ ನೀರಿನ ಆಕರಗಳಲ್ಲಿ ವಿಸರ್ಜಿಸುವುದು ಅತ್ಯಂತ ಸುಲಭವಾದ ಮಾರ್ಗ. ಇದು ನದಿಗಳಿಗೆ ಸಂಬಂಧಿಸಿದಂತೆ ಅತ್ಯಂತ ಸಾಮಾನ್ಯ ದೃಶ್ಯ. ನಮ್ಮ ದೇಶದ ಬಹುತೇಕ ನದಿಗಳು ಈ ಕಾರಣದಿಂದಲೇ ಮಲಿನಗೊಂಡಿವೆ.
  • ಚರಂಡಿ ನೀರು : ಗೃಹಕೃತ್ಯದ ಚಟುವಟಿಕೆಗಳಿಂದ ಹೊರಬರುವ ಸಾವಯವ ತ್ಯಾಜ್ಯಗಳು ಚರಂಡಿಯನ್ನು ಸೇರುತ್ತವೆ. ಇದರಲ್ಲಿ ಕೊಳೆತ ಹಣ್ಣು ತರಕಾರಿಗಳು, ಪ್ರಾಣಿ ಹಾಗೂ ಮಾನವ ಜನ್ಯ ಮಲ ಹಾಗೂ ಕೈಗಾರಿಕೆಗಳಿಂದ ಹೊರಬರುವ ಸಾವಯವ ತ್ಯಾಜ್ಯಗಳು ಸೇರಿದೆ.
  • ಮಾರ್ಜಕಗಳು : ಜನಸಾಮಾನ್ಯರು ಸಾಂಪ್ರದಾಯಿಕವಾದ ಸಸ್ಯಮೂಲದ ತೈಲಗಳಿಂದ ಪಡೆದ ಸಾಬೂನು ಹಾಗೂ ಮಾರ್ಜಕಗಳ ಬದಲಿಗೆ ಹೆಚ್ಚಾಗಿ ಸಂಶ್ಲೇಷಿತ ಮಾರ್ಜಕಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಹೀಗಾಗಿ, ಗೃಹ ತ್ಯಾಜ್ಯಗಳಲ್ಲಿ ಮಾರ್ಜಕಗಳ ಪ್ರಮಾಣ ಹೆಚ್ಚು. ಇವು ನೀರಿನ ಆಕರಗಳನ್ನು ಸೇರಿದಾಗ ನೊರೆಗೆ ಕಾರಣವಾಗುವುದಲ್ಲದೆ ನೀರಿನಲ್ಲಿ ವಿಲೀನವಾಗಿರುವ ಆಕ್ಸಿಜನ್ ಪ್ರಮಾಣವನ್ನು ಕುಗ್ಗಿಸುತ್ತದೆ.
  • ಕೃಷಿ ಮೂಲದ ತ್ಯಾಜ್ಯಗಳು : ಇಂದು ನಾವು ಬಳಸುತ್ತಿರುವ ಬಹಳಷ್ಟು ಪೀಡನಾಶಕಗಳು, ಸ್ಥಿರವಾದ ಹಾಗೂ ವಿಘಟನೆಗೆ ಒಳಗಾಗದ ವಸ್ತುಗಳು. ಅದೇ ರೀತಿ ಇಂದು ಬಳಕೆಯಾಗುತ್ತಿರುವ ಕೃತಕ ರಸಗೊಬ್ಬರಗಳಲ್ಲಿಯೂ ವಿಘಟನೆಗೆ ಒಳಗಾಗದ ಘಟಕಗಳು ಇರುತ್ತವೆ. ಇವು ಕೊಚ್ಚಿಹೋಗಿ ಸಮೀಪದ ನೀರಿನ ಆಕರವನ್ನು ಸೇರುತ್ತದೆ.
ಯೂಟ್ರೋಫಿಕೇಶನ್ [ಚಿತ್ರದ ಆಕರ]
ನಿಮಗೆ ತಿಳಿದಿರಲಿ
ಮಾರ್ಜಕಗಳಲ್ಲಿರುವ ಹೆಚ್ಚಿನ ಪ್ರಮಾಣದ ಫಾಸ್ಫೇಟ್‌ಗಳು ಕೆಲವು ಜಲಜೀವಿಗಳ ವೇಗದ ಬೆಳವಣಿಗೆಗೆ ಕಾರಣವಾಗುತ್ತದೆ. ಇವು ಫಾಸ್ಫೇಟ್‌ಗಳನ್ನು ಬಳಸತೊಡಗುತ್ತವೆ. ಇದರಿಂದಾಗಿ, ನೀರಿನ ಆಕ್ಸಿಜನ್ ಪ್ರಮಾಣ ಕಡಿಮೆಯಾಗುತ್ತದೆ. ಜಲಪರಿಸರ ವ್ಯವಸ್ಥೆಯ ಗುಣದಲ್ಲಿ ಉಂಟಾಗುವ ಈ ಬದಲಾವಣೆಗೆ ಯೂಟ್ರೋಫಿಕೇಶನ್ (eutrophication) ಎಂದು ಹೆಸರು.

ಯೂಟ್ರೋಫಿಕೇಶನ್ ಎಂದರೇನು? ಕಣಜ ಪದಕೋಶದಲ್ಲಿ ಹುಡುಕಿ!

ಅಂತರ್ಜಲಮಾಲಿನ್ಯ

ಜಲಮಾಲಿನ್ಯದ ಜೊತೆಗೇ ಸಹವರ್ತಿಯಾಗಿ ಕಂಡುಬರುವ ಇನ್ನೊಂದು ಜ್ವಲಂತ ಸಮಸ್ಯೆ ಎಂದರೆ ಅಂತರ್ಜಲ ಮಾಲಿನ್ಯ. ಸೀಸ, ಆರ್ಸೆನಿಕ್, ಫ್ಲೋರೆಡ್ ಮುಂತಾದ ಮಾಲಿನ್ಯಕಾರಕಗಳು ನೀರಿನಲ್ಲಿರುವ ಹೈಡ್ರೋಜನ್, ಆಕ್ಸಿಜನ್, ಕಬ್ಬಿಣ ಹಾಗೂ ಕ್ಲೋರಿನ್ ಜೊತೆ ಸೇರಿ ಅಂತರ್ಜಲವನ್ನು ವಿಷಕಾರಿಯಾಗಿಸುತ್ತವೆ.

ನಿಮಗೆ ತಿಳಿದಿರಲಿ
ಅಂತರ್ಜಲದಲ್ಲಿ ಆರ್ಸೆನಿಕ್ ವಿಷ ಸೇರುತ್ತಿರುವುದು ನಮ್ಮ ದೇಶದಲ್ಲಿ ಇಂದು ಪ್ರಮುಖ ಸಮಸ್ಯೆ. 6 ಮಿಲಿಯನ್ ಮಕ್ಕಳೂ ಸೇರಿದಂತೆ 65 ಮಿಲಿಯನ್ ಜನರು, ಕರ್ನಾಟಕವೂ ಸೇರಿದಂತೆ 9 ರಾಜ್ಯಗಳಲ್ಲಿ ಈ ಸಮಸ್ಯೆಯಿಂದ ನರಳುತ್ತಿದ್ದಾರೆ.

ಉಷ್ಣ ಮಾಲಿನ್ಯ

ಅನೇಕ ಕೈಗಾರಿಕೆಗಳಲ್ಲಿ ತಮ್ಮ ಉತ್ಪನ್ನಗಳನ್ನು ಪಡೆಯಲು ಅತಿ ಹೆಚ್ಚಿನ ತಾಪದ ಕುಲುಮೆಗಳನ್ನು ಬಳಸುತ್ತಾರೆ. ಇದರಿಂದ ಹೊರಬರುವ ಅತೀ ಉಷ್ಣದ ತ್ಯಾಜ್ಯಗಳನ್ನು ಹತ್ತಿರವಿರುವ ಹರಿಯುವ ನೀರಿನ ಆಕರಗಳಿಗೆ ಸೇರಿಸಲಾಗುತ್ತಿದೆ. ಇದರಿಂದ ಜಲವಾಸಿ ಜೀವಿಗಳು ಉಷ್ಣದ ತೀವ್ರತೆಯಿಂದಾಗಿ ಸಾಯುತ್ತಿವೆ. ಇದಕ್ಕೆ ಉಷ್ಣಮಾಲಿನ್ಯವೇ ಕಾರಣ.

ಸಾಗರ ಮಾಲಿನ್ಯ

ಸಮುದ್ರ ಮತ್ತು ಸಾಗರಗಳು ಭೂಮಿಯ ಶೇಕಡಾ 71ರಷ್ಟನ್ನು ಪ್ರತಿನಿಧಿಸುತ್ತದೆ ಎಂಬುದು ನಿಮಗೆ ತಿಳಿದಿದೆ.  ವಾತಾವರಣವನ್ನು ಸೇರುತ್ತಿರುವ ಅನೇಕ ಮಾಲಿನ್ಯಕಾರಕಗಳು ವಿಲೀನವಾಗಿ ದ್ರಾವಣ ರೂಪದಲ್ಲಿ ಸಮುದ್ರ, ಸಾಗರಗಳನ್ನು ಮಲಿನಗೊಳಿಸುತ್ತಿವೆ. ಇದಲ್ಲದೆ, ಹರಿದುಬರುವ ಕೃಷಿ ತ್ಯಾಜ್ಯಗಳು ಹಾಗೂ ಕೈಗಾರಿಕೆಗಳಿಂದ ಹರಿದು ಬರುತ್ತಿರುವ ತ್ಯಾಜ್ಯಗಳು ಸಮುದ್ರವನ್ನು ಸೇರುತ್ತಿವೆ. ಹಡಗುಗಳ ಬೃಹತ್ ಟ್ಯಾಂಕರ್ಗಳಿಂದ ಸೋರುವ ತೈಲಗಳೂ ಸಹ ಸಮುದ್ರ ಸಾಗರಗಳ ಮಾಲಿನ್ಯಕ್ಕೆ ಕಾರಣವಾಗುತ್ತಿವೆ.

ನಿಮಗೆ ತಿಳಿದಿರಲಿ
ಒಂದು ಅಂದಾಜಿನ ಪ್ರಕಾರ, ಪ್ರತಿವರ್ಷ ಸುಮಾರು 60.000 ಬ್ಯಾರಲ್‌ಗಳಷ್ಟು ತೈಲ ಸಮುದ್ರವನ್ನು ಸೇರುತ್ತಿದೆ. (ಸೌಜನ್ಯ: NOAA)
ಜಲಮಾಲಿನ್ಯದ ನಿಯಂತ್ರಣ
  • ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯಗಳನ್ನು ಅವುಗಳಲ್ಲಿರುವ ಮಾಲಿನ್ಯಕಾರಕಗಳನ್ನು ತೆಗೆದುಹಾಕುವುದಕ್ಕಾಗಿ ಸೂಕ್ತ ಸಂಸ್ಕರಣ ಕ್ರಿಯೆಗೆ ಒಳಪಡಿಸಬೇಕು. ಅದರಲ್ಲಿರುವ ಆಮ್ಲೀಯ ಹಾಗೂ ಕ್ಷಾರೀಯ ವಸ್ತುಗಳನ್ನು ತಟಸ್ಥಗೊಳಿಸಬೇಕು. ಲೋಹದ ಸಂಯುಕ್ತಗಳನ್ನು ಗರಣಿಗಟ್ಟಿಸಬೇಕು.
  • ಕುಲುಮೆ ಇರುವ ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯಗಳನ್ನು ಹೊರಬಿಡುವ ಮುನ್ನ ವಾತಾವರಣದ ತಾಪಕ್ಕೆ ಇಳಿಸಬೇಕು.
  • ಚರಂಡಿ ನೀರಿನಲ್ಲಿ ತೇಲುವ ಕಣ ತೆಗೆಯಲು ಸಂಸ್ಕೃರಿಸಬೇಕು. ಅದಕ್ಕೆ ಆಕ್ಸಿಜನ್ ಒದಗಿಸಬೇಕು. ನೀರನ್ನು ಶುದ್ಧೀಕರಿಸಲು ಅದಕ್ಕೆ ಕ್ಲೋರಿನ್ ಬೆರೆಸಬೇಕು. ಈ ನೀರನ್ನು ದ್ವಿತೀಯಕ ಅನ್ವಯಕ್ಕೆ ಪುನರ್ಬಳಕೆ ಮಾಡಬಹುದು.
ನೀರು ನಮ್ಮ ಜೀವನಕ್ಕೆ ಅತ್ಯಾವಶ್ಯಕ. ನೀರಿನ ಮಹತ್ವ, ಸ್ವರೂಪ, ಸ್ವಭಾವ ಮುಂತಾದ ವಿವಿಧ ವಿಷಯಗಳ ಕುರಿತ ವಿವರಗಳನ್ನು ನೀಡುವ 'ಅದ್ಭುತ ದ್ರವ ನೀರು' ಪುಸ್ತಕವನ್ನು ಕಣಜದಲ್ಲಿ ಓದಿ. ಜಲಮಾಲಿನ್ಯದ ಸಮಸ್ಯೆಯ ಕುರಿತೂ ಈ ಪುಸ್ತಕದಲ್ಲಿ ಮಾಹಿತಿ ಇದೆ.  

ನೆಲ ಮಾಲಿನ್ಯ

ನಮ್ಮ ನಿತ್ಯ ಜೀವನದಲ್ಲಿ ನಾವು ಅನೇಕ ಬಗೆಯ ವಸ್ತುಗಳನ್ನು ಬಳಸುತ್ತೇವೆ. ಈಗ ಗೃಹತ್ಯಾಜ್ಯಗಳಿಗೆ ಸಂಬಂಧಿಸಿದಂತೆ ಉಪಯೋಗಿಸಿ ಬಿಸಾಡುವ ಸಂಸ್ಕೃತಿ ಬೆಳೆಯುತ್ತಿದೆ. ಒಂದು ಅಂದಾಜಿನ ಪ್ರಕಾರ ಪ್ರತಿ ವ್ಯಕ್ತಿ ಒಂದು ದಿನಕ್ಕೆ ಸುಮಾರು 6 ಕೆಜಿ ತ್ಯಾಜ್ಯವಸ್ತುವಿನ ಉತ್ಪಾದನೆಗೆ ಕಾರಣವಾಗುತ್ತಾರೆ. ಆಧುನಿಕ ನಾಗರಿಕತೆಯ ದೇಶಗಳಲ್ಲಿ ಪ್ರತಿ ವರ್ಷ ಬಿಲಿಯನ್ ಟನ್ಗಟ್ಟಲೆ ಕ್ಯಾನ್ಗಳು, ಬಾಟಲುಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಬಿಸಾಡಲಾಗುತ್ತಿದೆ. ಇದರ ಕನಿಷ್ಠ ಅಂಶ ಮಾತ್ರ ಮರುಬಳಕೆಯಾಗುತ್ತಿದೆ. ಉಳಿದ ಬಹುಭಾಗವನ್ನು ಸುಡಲಾಗುತ್ತಿದೆ.  ಇಲ್ಲವೆ ಖಾಲಿ ಪ್ರದೇಶದಲ್ಲಿ ಸಂಗ್ರಹಿಸಲಾಗುತ್ತಿದೆ. ಇಂಥ ಪ್ರದೇಶಗಳು ನೆಲಮಾಲಿನ್ಯಕ್ಕೆ ಕಾರಣವಾಗುವುದರ ಜೊತೆಗೆ ಹಾನಿಕಾರಕ ಕೀಟಗಳು, ಇಲಿಗಳು ಹಾಗೂ ಇನ್ನಿತರ ಪೀಡಕಗಳಿಗೆ ಸಂತಾನೋತ್ಪತ್ತಿಯ ಕೇಂದ್ರಗಳಾಗುತ್ತಿವೆ.

ಸೌಜನ್ಯ: Marcin Białek / Wikimedia Commons
ಈ ಮೇಲಿನ ಆಕರಗಳಲ್ಲದೆ ರಸಗೊಬ್ಬರಗಳ ಹಾಗೂ ಪೀಡನಾಶಕಗಳ ಉಳಿಕೆ ವಸ್ತುಗಳು (residues) ನೆಲ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ವಾಯುಮಾಲಿನ್ಯದ ಪರಿಣಾಮವಾದ ಆಮ್ಲಮಳೆ ಕೂಡ ಮಣ್ಣಿನ ಆಮ್ಲತೆಯನ್ನು ಹೆಚ್ಚಿಸಿ ಫಲವತ್ತತೆಯನ್ನು ಕಡಿಮೆ ಮಾಡುವ ಮೂಲಕ ನೆಲಮಾಲಿನ್ಯಕ್ಕೆ ಕಾರಣವಾಗುತ್ತಿದೆ.

ಶಬ್ದಮಾಲಿನ್ಯ

ಶಬ್ದ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗ. ನಮ್ಮ ಕಿವಿಗೆ ಅಸಹನೀಯವಾದ ಹಾಗೂ ಅನಗತ್ಯ ಪರಿಣಾಮಗಳನ್ನು ಉಂಟುಮಾಡುವ ಯಾವುದೇ ಶಬ್ಧ ಮಾಲಿನ್ಯಕಾರಕ. ಇಂದು ಶಬ್ಧ ಮಾಲಿನ್ಯ ಮಾನವನಿಗೆ ಮಾತ್ರವಲ್ಲದೆ ಪ್ರಾಣಿಗಳ ಮೇಲೂ ಪರಿಣಾಮ ಬೀರುತ್ತಿದೆ.

ನಿಮಗೆ ತಿಳಿದಿರಲಿ
ಶಬ್ದವನ್ನು ಅಳೆಯುವ ಮಾನಕ್ಕೆ ಡೆಸಿಬಲ್ (dB) ಎಂದು ಹೆಸರು. ಶಬ್ದದ ಪ್ರಮಾಣ 40 dB ಗಳಿಂದ 80 dB ಗಳಿಗೆ ಹೆಚ್ಚಿದರೆ, ಅದರ ಪ್ರಖರತೆ 10.000 ಪಟ್ಟು ಹೆಚ್ಚಿದಂತಾಗುತ್ತದೆ. 100 dB ಗಳಿಗಿಂತ ಹೆಚ್ಚಿನ ಯಾವುದೇ ಶಬ್ದ ಮಾನವನ ಕಿವಿಗಳಿಗೆ ಹಾನಿಕಾರಕ.
ಡೆಸಿಬೆಲ್ ಮಾನದಲ್ಲಿ ವಿವಿಧ ಶಬ್ದಗಳ ಹೋಲಿಕೆ
ಶಬ್ದಮಾಲಿನ್ಯದ ಪ್ರಮುಖ ಆಕರಗಳು ಈ ಕೆಳಗಿನಂತಿವೆ.
  • ಮನೆಗಳಲ್ಲಿ ನಾವು ಉಪಯೋಗಿಸುವ ಬಗೆಬಗೆಯ ಉಪಕರಣಗಳು.
  • ವಿವಿಧ ಬಗೆಯ ಸಾರಿಗೆ ವಾಹನಗಳು.
  • ವಾಣಿಜ್ಯ ಹಾಗೂ ಕೈಗಾರಿಕೆ ಚಟುವಟಿಕೆಗಳು.
  • ಸಾಮಾಜಿಕ ಹಾಗೂ ಸಾರ್ವಜನಿಕ ಸಮಾರಂಭಗಳು.
ಚಟುವಟಿಕೆ
ನೀವು ವಾಸಿಸುತ್ತಿರುವ ಪ್ರದೇಶದಲ್ಲಿ ಶಬ್ದಮಾಲಿನ್ಯಕ್ಕೆ ಕಾರಣವಾಗುವ ಅಂಶಗಳನ್ನು ಪಟ್ಟಿಮಾಡಿ.

ಶಬ್ದಮಾಲಿನ್ಯದ ಪರಿಣಾಮಗಳು
  • ಶಬ್ದಮಾಲಿನ್ಯವು ಮಾನವನ ನರಮಂಡಲ ವ್ಯವಸ್ಥೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಕಿವುಡುತನ, ತಲೆಶೂಲೆ, ಅಧಿಕ ರಕ್ತದೊತ್ತಡ ಹಾಗೂ ಹೃದಯಸಂಬಂಧೀ ಖಾಯಿಲೆಗಳಿಗೆ ಕಾರಣವಾಗುತ್ತದೆ.
  • ಕರ್ಕಶ ಶಬ್ದವು ಅಹಿತಕರ ವರ್ತನೆಗಳಿಗೆ ಕಾರಣವಾಗುತ್ತದೆ. ಪ್ರಾಣಿಗಳಲ್ಲಿ ಶಬ್ದಮಾಲಿನ್ಯ ಇನ್ನೂ ತೀವ್ರವಾದ ಪರಿಣಾಮಗಳನ್ನು ಉಂಟುಮಾಡುತ್ತದೆ.
ದೀರ್ಘಕಾಲಿಕ ವಾಯುಮಾಲಿನ್ಯದಿಂದ ಉಂಟಾಗುವ ಜಾಗತಿಕ ಮಟ್ಟದ ಕೆಲವು ಪರಿಸರ ಸಂಬಂಧಿ ಸಮಸ್ಯೆಗಳ ಬಗ್ಗೆ ಈಗ ನಾವು ಗಮನ ಹರಿಸೋಣ.

ಓಝೋನ್ ಪದರ ತೆಳುವಾಗುವಿಕೆ

ಭೂಮಿಯಿಂದ 15 ರಿಂದ 60 km ದೂರ ಇರುವ ವಾತಾವರಣದಲ್ಲಿ ಸ್ತರಗೋಲ(stratosphere)ದಲ್ಲಿರುವ ಓಝೋನ್ ಪದರ ತೆಳುವಾಗುತ್ತಿರುವ ಅಥವಾ ಸವೆಯುತ್ತಿರುವ ಪ್ರಕ್ರಿಯೆಯನ್ನು ಇದು ಸೂಚಿಸುತ್ತದೆ.
ಓಝೋನ್ ಮೇಲೆ ಕ್ಲೋರಿನ್ ಅಣುಗಳ ವರ್ತನೆ
ಇದು ಕ್ಲೋರೋಫ್ಲೂರೋ ಕಾರ್ಬನ್ಗಳು (ಸಿಎಫ್ಸಿಗಳು) ಎಂಬ ರಾಸಾಯನಿಕಗಳ ಬಿಡುಗಡೆಯಿಂದ ಉಂಟಾಗುತ್ತಿದೆ. ಇನ್ಸುಲೇಟಿಂಗ್ ಫೋಮ್ಗಳ, ದ್ರಾವಕಗಳ ತಯಾರಿಕೆಯ ಕೈಗಾರಿಕಾ ಪ್ರಕ್ರಿಯೆಯಲ್ಲಿ ಹಾಗೂ ಶೀತಲೀಕರಣ ಯಂತ್ರ, ರೆಫ್ರಿಜಿರೇಟರ್ಗಳಲ್ಲಿ ಬಳಸಲಾಗುತ್ತಿರುವ ಉಪಕರಣಗಳಿಂದ ಇವು ಬಿಡುಗಡೆಯಾಗುತ್ತವೆ. ಅಲ್ಲದೆ ನಮ್ಮ ನಿತ್ಯಜೀವನದಲ್ಲಿ ನಾವು ಬಳಸುತ್ತಿರುವ, ಒಟ್ಟಾರೆಯಾಗಿ ಏರೋಸಾಲ್ಗಳು ಎಂದು ಕರೆಯಲಾಗುವ ಸಿಂಪಡಕ(spray)ಗಳಲ್ಲಿಯೂ ಈ ವಸ್ತುಗಳು ಕಂಡುಬರುತ್ತವೆ. ವಾತಾವರಣದಲ್ಲಿರುವ ನೇರಳಾತೀತ ಕಿರಣಗಳು (UV Rays) ಸಿಎಫ್ಸಿಗಳನ್ನು ವಿಘಟಿಸಿ ಕ್ಲೋರಿನ್ ಅಣುಗಳನ್ನು ಬಿಡುಗಡೆ ಮಾಡುತ್ತವೆ. ಕ್ಲೋರಿನ್ ಓಝೋನ್ನ ಜತೆ ಪ್ರತಿವರ್ತಿಸಿ, ಒಂದು ಸರಣಿ ಕ್ರಿಯೆಯಲ್ಲಿ ಓಝೋನ್ಅನ್ನು ನಾಶಪಡಿಸುತ್ತದೆ.

ನಿಮಗೆ ತಿಳಿದಿರಲಿ
ಒಂದು ಕ್ಲೋರಿನ್ ಅಣುವಿಗೆ 1,00,000 ಓಝೋನ್ ಅಣುಗಳನ್ನು ವಿಘಟಿಸುವ ಸಾಮರ್ಥ್ಯವಿದೆ ಎನ್ನಲಾಗಿದೆ.

ಓಝೋನ್ ಪದರ ತೆಳುವಾಗುವುದರ ಪರಿಣಾಮವೇನು?

ಓಝೋನ್ ಪದರ ತೆಳುವಾಗುವುದರಿಂದ ನೇರಳಾತೀತ ಕಿರಣಗಳು ನೇರವಾಗಿ ಭೂಮಿಯನ್ನು ತಲುಪುತ್ತವೆ. ಇವು ಉತ್ಪರಿವರ್ತನೆಗಳು (mutations) ಎಂಬ ದಿಢೀರ್ ಬದಲಾವಣೆಗಳನ್ನು ಉಂಟುಮಾಡುತ್ತವೆ.
  • ಮಾನವರಲ್ಲಿ ಚರ್ಮದ ಕ್ಯಾನ್ಸರ್, ಕ್ಯಾಟರಾಕ್ಟ್ ಮುಂತಾದ ಖಾಯಿಲೆಗಳ ಸಾಧ್ಯತೆ ಹೆಚ್ಚಾಗುತ್ತದೆ.
  • ಸಸ್ಯ ಮತ್ತು ಪ್ರಾಣಿಗಳ ಬೆಳವಣಿಗೆ ಮತ್ತು ಶಾರೀರಿಕ ಕ್ರಿಯೆಗಳ ಮೇಲೆ ತೀವ್ರ ಪರಿಣಾಮ ಭೀರುತ್ತದೆ.
  • ಸಸ್ಯಪ್ಲವಕ (phytoplankton)ಗಳಲ್ಲಿ ಜೀವಿಸಂಖ್ಯೆಯ ಅನುಪಾತದಲ್ಲಿ ಏರುಪೇರು ಉಂಟುಮಾಡುವ ಮೂಲಕ, ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಉಂಟುಮಾಡುತ್ತದೆ.
ವಾತಾವರಣದಲ್ಲಿರುವ ಅನಿಲಗಳ ಪ್ರಮಾಣದಲ್ಲಿರುವ ಸಮತೋಲನದಲ್ಲಿ ಏರುಪೇರುಗಳಾಗುತ್ತದೆ. ವಿಶೇಷವಾಗಿ ಕಾರ್ಬನ್ ಚಕ್ರದ ಮೇಲೆ ಪರಿಣಾಮ ಉಂಟಾಗುತ್ತದೆ.

ನಿಮಗೆ ತಿಳಿದಿರಲಿ
ನಾಶವಾಗಿರುವ ಓಝೋನನ್ನು ಮರಳಿ ಪಡೆಯುವಂತೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಓಝೋನ್ ನಾಶಕ್ಕೆ ಕಾರಣವಾಗುವ ವಸ್ತುಗಳ ಬಳಕೆಯನ್ನು ಕ್ರಮೇಣ ಕಡಿಮೆ ಮಾಡುವುದಷ್ಟೇ ನಮ್ಮಿಂದ ಸಾಧ್ಯ. ಜಾಗತಿಕ ಮಟ್ಟದಲ್ಲಿ ಓಝೋನ್ ಮರುಪೂರಣಕ್ಕೆ ಸಂಬಂಧಿಸಿದಂತೆ ಮಹತ್ವವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಹೊರಗೋಳದಿಂದ ನಮ್ಮ ಭೂಮಿಯತ್ತ ಬರುವ ಅಪಾಯಕಾರಿ ಅತಿನೀಲ ಕಿರಣಗಳನ್ನು ತಡೆಹಿಡಿದು ನಮ್ಮನ್ನು ಕಾಪಾಡುವುದು ಓಜೋನ್ ಪದರದ ವೈಶಿಷ್ಟ್ಯ. ನಮ್ಮ ಭೂಮಿಯ ಇಂತಹವೇ ಇನ್ನೂ ಹಲವು ವೈಶಿಷ್ಟ್ಯಗಳನ್ನು ತಿಳಿಸಿಕೊಡುವ ಪುಸ್ತಕ 'ಭೂಮಿಯ ಅಂತರಾಳ'ವನ್ನು ಕಣಜದಲ್ಲಿ ಓದಿ!

ಜಾಗತಿಕ ತಾಪದ ಏರಿಕೆ

ಭೂಮಿಯ ಮತ್ತು ಸಾಗರಗಳ ಸರಾಸರಿ ತಾಪದಲ್ಲಿ ಕಳೆದ 200 ವರ್ಷಗಳಲ್ಲಿ ಉಂಟಾಗಿರುವ ಏರಿಕೆಯನ್ನು ಜಾಗತಿಕ ತಾಪದ ಏರಿಕೆ (global warming) ಎಂದು ಕರೆಯಲಾಗುತ್ತದೆ. ಈ ಶತಮಾನದ ಪ್ರಾರಂಭದಿಂದೀಚೆಗೆ ಭೂಮಿಯ ತಾಪಮಾನದಲ್ಲಿ ಸುಮಾರು 0.8C ನಷ್ಟು ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಏರಿಕೆಯ ಮೂರನೆಯ ಎರಡರಷ್ಟು ಭಾಗ 1980ರ ದಶಕದಿಂದೀಚೆಗೆ ಉಂಟಾಗಿದೆ ಎಂದು ಹೇಳಲಾಗುತ್ತದೆ.

ಶಕ್ತಿಯ ಬೇರಾವುದೇ ಆಕರ ಅಥವಾ ಸಂಗ್ರಹಗಳಿಗಿಂತ ತಾಪದ ಏರಿಕೆ ಸಾಗರಗಳಲ್ಲಿಯೇ ಅತಿ ಹೆಚ್ಚು, ಭೂವ್ಯವಸ್ಥೆಯಲ್ಲಿ ಉಂಟಾಗಿರುವ ತಾಪದ ಹೆಚ್ಚಳದ 90ರಷ್ಟನ್ನು ಇದು ಪ್ರತಿನಿಧಿಸುತ್ತದೆ. ಈ ಏರಿಕೆಗೆ ಕಾರಣ, ನಿಸರ್ಗದಲ್ಲಿರುವ ಹಸಿರುಮನೆ ಪರಿಣಾಮ ಎಂಬ ವಿದ್ಯಮಾನ.

ಹಸಿರುಮನೆ ಪರಿಣಾಮ ಎಂದರೇನು? (ಸೌಜನ್ಯ: ಇಜ್ಞಾನ ಡಾಟ್ ಕಾಮ್)

ಸೂರ್ಯ ಕಿರಣಗಳು ಭೂಮಿಯನ್ನು ಬಿಸಿಮಾಡಿದ ಪರಿಣಾಮವಾಗಿ ಬಿಡುಗಡೆಯಾಗುವ ಅವಕೆಂಪು ಕಿರಣಗಳನ್ನು ಕೆಲವು ಅನಿಲಗಳು ಸೆರೆಹಿಡಿದ ಕಾರಣ ವಾಯುಮಂಡಲದ ತಾಪ ಏರಿಕೆ ಆಗುತ್ತದೆ. ಈ ಏರಿಕೆಯನ್ನು ‘ಹಸಿರುಮನೆ ಪರಿಣಾಮ’ ಎಂದೂ ಈ ಏರಿಕೆಗೆ ಕಾರಣವಾದ ಅನಿಲಗಳನ್ನು ಹಸಿರುಮನೆ ಅನಿಲಗಳೆಂದೂ ಕರೆಯಲಾಗುತ್ತದೆ. ಕಾರ್ಬನ್ ಡೈಆಕ್ಸೈಡ್, ನೈಟ್ರೋಜನ್ಆಕ್ಸೈಡ್ಗಳು, ಮೀಥೇನ್ ಹಾಗೂ ಕೆಲಮಟ್ಟಿಗೆ ಓಝೋನ್ ಇವು ವಾತಾವರಣದಲ್ಲಿರುವ ಹಸಿರು ಮನೆ ಅನಿಲಗಳು.
ಭೂಮಿಯಲ್ಲಿರುವ ನೈಸರ್ಗಿಕ ಹಸಿರು ಮನೆಯ ಜೀವಿಗಳ ಉಳಿವಿಗೆ ಕಾರಣವಾಗಿದೆ. ಆದರೆ, ಇಂಧನಗಳ ದಹನ ಹಾಗೂ ತೀವ್ರ ಅರಣ್ಯನಾಶದಂಥ ಮಾನವನ ಚಟುವಟಿಕೆಗಳಿಂದಾಗಿ ಈ ಪರಿಣಾಮ ಅತಿಯಾಗಿ ಹೆಚ್ಚಿದೆ. ಇದನ್ನೇ ಜಾಗತಿಕ ತಾಪದ ಏರಿಕೆ ಎಂದು ವರ್ಣಿಸಲಾಗುತ್ತದೆ.

ವಾಯುಗುಣ ಬದಲಾವಣೆಯ ವಿನಾಶಕಾರಿ ಪರಿಣಾಮಗಳ ಬಗ್ಗೆ ಮಾಹಿತಿನೀಡುವ ‘ಬರಲಿದೆಯೇ ಭೀಕರ ವಾಯುಗುಣ ಬದಲಾವಣೆ? ಭಾರತಕ್ಕೂ ಬಿಸಿ ತಟ್ಟುವುದೇ?’ ಪುಸ್ತಕವನ್ನು ಕಣಜದಲ್ಲಿ ಓದಿ!   


ನಿಮಗೆ ತಿಳಿದಿರಲಿ
ಬೆಳಕು ಸುಲಭವಾಗಿ ಹಾಯಬಲ್ಲ ಗಾಜು ಅಥವಾ ಪ್ಲಾಸ್ಟಿಕ್ನಂಥ ವಸ್ತುಗಳನ್ನು ಬಳಸಿ ಹಸಿರುಮನೆಯನ್ನು ನಿರ್ಮಿಸಲಾಗುತ್ತದೆ. ಇಲ್ಲಿ ಭೂಮಿಯು ಬಿಸಿಯಾಗುವುದರಿಂದ, ಗಾಳಿಯೂ ಬೆಚ್ಚಗಾಗಿ, ಹಸಿರು ಮನೆಯ ಒಳಗಿನ ತಾಪವೂ ಹೆಚ್ಚುತ್ತದೆ. ಗಾಳಿಯ ಸಂಚಾರ ಹಸಿರು ಮನೆಯ ಒಳಗೇ ನಿರ್ಬಂಧಿತವಾಗಿರುವುದರಿಂದ ಅದರ ತಾಪ ಹೆಚ್ಚುತ್ತಾ ಹೋಗುತ್ತದೆ. ತೋಟಗಾರಿಕೆ ಕ್ಷೇತ್ರದಲ್ಲಿ ಅಲಂಕಾರಿಕ ಸಸ್ಯಗಳ ಉತ್ತಮ ಬೆಳವಣಿಗೆಗೆ ಹೆಚ್ಚಿನ ತಾಪವನ್ನು ಒದಗಿಸಲು ಈ ರೀತಿಯ ಹಸಿರು ಮನೆಗಳನ್ನು ಬಳಸಲಾಗುತ್ತದೆ.

ಜಾಗತಿಕ ತಾಪದ ಏರಿಕೆಯಿಂದಾಗಿ ಮಂಜಿನ ಗುಡ್ಡೆಗಳು ಕರಗುತ್ತಿವೆ. ಇದರಿಂದ ಸಮುದ್ರದ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಸಮುದ್ರದಿಂದ ಪ್ರವಾಹ ಉಂಟಾಗುತ್ತಿದೆ. ಇದರಿಂದಾಗಿ ತೀರ ಪ್ರದೇಶಗಳು ಮುಳುಗಡೆಯಾಗುವ ಸಾಧ್ಯತೆಗಳಿವೆ. ಹೀಗಾಗಿ, ಇದು ಜಲ ಹಾಗೂ ನೆಲವಾಸಿ ಜೀವಿಗಳಿಗೆ ಹಾನಿಕಾರಕ.

ಜಾಗತಿಕ ತಾಪದ ಏರಿಕೆಯ ಪರಿಣಾಮ ಕೃಷಿಯ ಮೇಲೂ ಆಗಬಹುದು.  ಈ ಕುರಿತ ವಿವರ ನೀಡುವ ‘ಜಾಗತಿಕ ತಾಪಮಾನ ಮತ್ತು ಹವಾಮಾನ ವೈಪರೀತ್ಯ: ಕೃಷಿಯ ಮೇಲೆ ಬೀರುವ ಪರಿಣಾಮಗಳು’ ಪುಸ್ತಕವನ್ನು ಕಣಜದಲ್ಲಿ ಓದಿ!

ಆಮ್ಲಮಳೆ

ಸಾಮಾನ್ಯವಾಗಿ ಬೀಳುವ ಮಳೆಯು ಆಮ್ಲೀಯ ಎಂಬುದು ನಿಮಗೆ ಗೊತ್ತೆ? ಅದರ pH ಮೌಲ್ಯ 5.6 ಮಳೆಯ ನೀರಿನ pH ಇದಕ್ಕಿಂತ ಕಡಿಮೆ ಆದಲ್ಲಿ, ಅದಕ್ಕೆ ಆಮ್ಲಮಳೆ ಎಂದು ಹೆಸರು. ಸಲ್ಫರ್ನ ಆಕ್ಸೈಡ್ಗಳು ಹಾಗೂ ನೈಟ್ರೋಜನ್ನ ಆಕ್ಸೈಡ್ಗಳು ಅನಿಲ ರೂಪದಲ್ಲಿ ವಾತಾವರಣವನ್ನು ಸೇರಿ, ನೀರಾವಿಯ ಜೊತೆ ಸೇರಿ ಕ್ರಮವಾಗಿ ಸಲ್ಫ್ಯೂರಿಕ್ ಆಮ್ಲ ಹಾಗೂ ನೈಟ್ರಿಕ್ ಆಮ್ಲವಾಗಿ ಪರಿವರ್ತನೆಗೊಳ್ಳುವುದರಿಂದ ಆಮ್ಲಮಳೆ ಉಂಟಾಗುತ್ತದೆ. ಇದು ಮಳೆಯ, ಮಂಜಿನ ಅಥವಾ ಇಬ್ಬನಿಯ ರೂಪದಲ್ಲಿ ಬೀಳತೊಡಗುತ್ತದೆ. ಕೈಗಾರಿಕೆಗಳಲ್ಲಿ ಇಂಧನಗಳ ದಹನ ಕ್ರಿಯೆಯೇ ಈ ಆಕ್ಸೈಡ್ಗಳ ಬಿಡುಗಡೆಗೆ ಮೂಲಕಾರಣ.

ಆಮ್ಲ ಮಳೆಯು ಜಲವಾಸಿ ಜೀವಿಗಳಿಗೆ ಮಾರಕವಾಗಬಹುದು. ಜಲಚರಗಳ ಮೊಟ್ಟೆಗಳ ಉತ್ಪಾದನೆ ಕುಂಠಿತವಾಗಿ ಅಂಥ ಪ್ರಾಣಿಗಳ ಜೀವಿಸಂದಣಿಯ ಅನುಪಾತ ಏರುಪೇರಾಗಬಹುದು. ಮಣ್ಣಿನ ಮೇಲೆ ಆಮ್ಲಮಳೆ ಬಿದ್ದಾಗ ಮಣ್ಣು ಆಮ್ಲೀಯವಾಗಿ ಅದರಲ್ಲಿರುವ ಪೋಷಕಾಂಶಗಳು ನಷ್ಟವಾಗಬಹುದು. ಈ ರೀತಿ ಬೆಳೆದ ಸಸ್ಯಗಳ ಎಲೆಗಳಲ್ಲಿ ಕಂದುಬಣ್ಣದ ಚುಕ್ಕಿ ಹಾಗೂ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಮೂಲಕ ರೋಗಕಾರಕ ಸೂಕ್ಷ್ಮಜೀವಿಗಳ ಸೋಂಕು ತಗುಲಬಹುದು.

ಆಮ್ಲಮಳೆ ಮಾನವನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಇದು ಚರ್ಮರೋಗಕ್ಕೆ ಮತ್ತು ಉಸಿರಾಟದ ತೊಂದರೆಗಳಿಗೆ ಕಾರಣವಾಗುತ್ತದೆ. ಬಾಧಿತ ಸಸ್ಯ ಹಾಗೂ ಪ್ರಾಣಿಗಳನ್ನು ಆಹಾರವಾಗಿ ಸೇವಿಸಿದವರಲ್ಲಿ ದೇಹದ ಪ್ರಮುಖ ಅಂಗಗಳಲ್ಲಿ ಲೋಪದೋಷಗಳು ಕಾಣಿಸಿಕೊಳ್ಳಬಹುದು.

ಆಮ್ಲ ಮಳೆಯು ಹಳೆಯ ಕಟ್ಟಡಗಳನ್ನು ಹಾಗೂ ಸ್ಮಾರಕಗಳನ್ನು ನಾಶಪಡಿಸುತ್ತದೆ. ಲೋಹದ ಹಾಗೂ ಕಲ್ಲಿನ ರಚನೆಗಳಲ್ಲಿ, ಉದುರುವಿಕೆಗೆ ಕಾರಣವಾಗುತ್ತದೆ.

ನಿಮಗೆ ತಿಳಿದಿರಲಿ
ಸುತ್ತ ಮುತ್ತಲಿನ ಪ್ರದೇಶಗಳಲ್ಲಿದ್ದ ಕೈಗಾರಿಕೆಗಳಿಂದಾಗಿ ಉಂಟಾದ ಆಮ್ಲ ಮಳೆಯ ಪ್ರಭಾವಕ್ಕೆ ಆಗ್ರಾದ ಖ್ಯಾತ ತಾಜ್ ಮಹಲ್ ಒಳಗಾಗಿ, ಅಮೃತಶಿಲೆ ತನ್ನ ಹೊಳಪನ್ನು ಕಳೆದುಕೊಳ್ಳತೊಡಗಿತ್ತು. ಸುಪ್ರೀಂ ಕೋರ್ಟ್ನ ಆದೇಶದಿಂದಾಗಿ ಆ ಕೈಗಾರಿಕೆಗಳನ್ನು ದೂರದ ಪ್ರದೇಶಗಳಿಗೆ ಸ್ಥಳಾಂತರಿಸಿದ ಕಾರಣ ಈಗ ತಾಜ್ ಸುರಕ್ಷಿತವಾಗಿದೆ. [ತಾಜಮಹಲ್ ಬಗ್ಗೆ ಕಣಜದಲ್ಲಿರುವ ಲೇಖನ ಓದಿ]

ವಿಕಿರಣಮಾಲಿನ್ಯ

ಕೆಲವು ಲೋಹಗಳಲ್ಲಿ ಅವುಗಳ ನ್ಯೂಕ್ಲಿಯಸ್ನಲ್ಲಿ ನಡೆಯುವ ಕ್ರಿಯೆಯಿಂದಾಗಿ ವಿಕಿರಣ ಕ್ರಿಯೆಯಿಂದಾಗಿ ವಿಕಿರಣ ಕ್ರಿಯೆ ಉಂಟಾಗಿ ಪ್ರೋಟಾನ್ಗಳು (ಆಲ್ಫಾಕಣಗಳು), ಎಲೆಕ್ಟ್ರಾನ್ಗಳು (ಬೀಟಾ ಕಣಗಳು) ಹಾಗೂ ಗ್ಯಾಮಾ ಕಿರಣಗಳು ಬಿಡುಗಡೆಯಾಗುತ್ತಿವೆ ಎಂಬುದು ನಿಮಗೆ ತಿಳಿದಿದೆ. ಇದಕ್ಕೆ ವಿಕಿರಣಮಾಲಿನ್ಯ ಎಂದು ಹೆಸರು.
ಅಯಾನೀಕರಣಗೊಳ್ಳುವ ಹಾಗೂ ಅಯಾನೀಕರಣಗೊಳ್ಳದ ಎಂಬ ಎರಡು ಬಗೆಯ ವಿಕಿರಣಗಳಿವೆ.
ಅಯಾನೀಕರಣಗೊಳ್ಳುವ ವಿಕಿರಣಕ್ಕೆ ಸುಲಭವಾಗಿ ಒಳಸೇರುವ ಸಾಮರ್ಥ್ಯವಿದ್ದು ಬೃಹತ್ ಅಣುಗಳನ್ನು ಅದು ಒಡೆಯಬಹುದು. ಅಯಾನೀಕರಣಗೊಳ್ಳದ ವಿಕಿರಣಕ್ಕೆ, ಅವುಗಳನ್ನು ಹೀರಿಕೊಳ್ಳಬಲ್ಲ ವಸ್ತುಗಳ ಮೇಲೆ ಮಾತ್ರ ಪರಿಣಾಮ ಬೀರುವ ಸಾಮರ್ಥ್ಯ ಇದೆ.

ಆಲ್ಪಾ ಕಣಗಳನ್ನು ಒಂದು ಕಾಗದದ ಚೂರೂ ಸಹ ತಡೆಯಬಲ್ಲುದು. ನಮ್ಮ ಚರ್ಮಕ್ಕೆ ಈ ಸಾಮರ್ಥ್ಯವಿದೆ. ಬೀಟಾ ಕಣಗಳು ಚರ್ಮವನ್ನು ಭೇದಿಸಿ ಒಳಹೋಗಬಲ್ಲವು. ಕೆಲವು ಲೋಹಗಳು ಮತ್ತು ಗಾಜು ಮಾತ್ರ ಅವನ್ನು ತಡೆಯಬಲ್ಲವು. ಗ್ಯಾಮಾ ಕಿರಣಗಳು ಸುಲಭವಾಗಿ ಚರ್ಮದ ಮೂಲಕ ಹಾದು ಹೋಗಿ ಜೀವಕೋಶಗಳನ್ನು ನಾಶಪಡಿಸಬಹುದು. ಅವುಗಳನ್ನು ತಡೆಯಲು ಸಾಧ್ಯವಿಲ್ಲ.

ವಿಕಿರಣಮಾಲಿನ್ಯದ ಆಕರಗಳು 
  • ನ್ಯೂಕ್ಲೀಯ ಶಕ್ತಿ ಸ್ಥಾವರಗಳು
  • ನ್ಯೂಕ್ಲೀಯ ಶಸ್ತ್ರಗಳು
  • ನ್ಯೂಕ್ಲೀಯ ತ್ಯಾಜ್ಯಗಳ ಅಸಮರ್ಪಕ ವಿಲೇವಾರಿ
  • ವಿಕಿರಣ ಪಟುತ್ವದ ಸಮಸ್ಥಾನಿ ತಯಾರಿಕೆ.
  • ಯುರೇನಿಯಮ್-ನಂಥ ವಿಕಿರಣಶೀಲ ವಸ್ತುಗಳ ಗಣಿಗಾರಿಕೆ ಮತ್ತು ಸಂಸ್ಕರಣೆ.
ಸರಿಯಾಗಿ ಬಳಸಿದಾಗ ಪರಮಾಣು ಶಕ್ತಿ ಉಪಯುಕ್ತ ನಿಜ, ಆದರೆ ಅದರ ಸುರಕ್ಷಿತ ಬಳಕೆ ಬಹಳ ಮುಖ್ಯ. ಪರಮಾಣು ಸುರಕ್ಷತೆ ಬಗ್ಗೆ ಕಣಜದಲ್ಲಿರುವ ಲೇಖನ ಓದಿ!

ಜೈವಿಕ ಅಣುಗಳನ್ನು ತಲುಪಿ ಅವುಗಳ ಜೊತೆ ಪ್ರತಿವರ್ತಿಸಿದಾಗ ವಿಕಿರಣಶೀಲತೆಯು ಹಾನಿಕಾರಿಯಾಗಬಹುದು. ಇದು ಡಿಎನ್ಎ ಅಣುವಿಗೆ ಹಾನಿ ಉಂಟುಮಾಡುವುದರಿಂದ ಕ್ಯಾನ್ಸರ್ ಹಾಗೂ ಜನನ ಸಂಬಂಧೀ ಖಾಯಿಲೆಗಳು ಉಂಟಾಗಬಹುದು.

ನಿಮಗೆ ತಿಳಿದಿರಲಿ
ಜಪಾನಿನ ಹಿರೋಶಿಮಾ ಹಾಗೂ ನಾಗಸಾಕಿಯಲ್ಲಿ 1945ರಲ್ಲಿ ಹಾಕಲಾದ ಬಾಂಬ್ಗಳ ಪರಿಣಾಮ ವಿಕಿರಣ ಮಾಲಿನ್ಯದ ದುಷ್ಪರಿಣಾಮಗಳಿಗೆ ಜ್ವಲಂತ ಉದಾಹರಣೆ. ಅಲ್ಲಿ ಬದುಕುಳಿದ ವ್ಯಕ್ತಿಗಳ ಮೇಲೆ ಮಾಡಲಾದ ಸಂಶೋಧನೆಗಳಿಂದಾಗಿ ತಿಳಿದು ಬಂದಿದ್ದು ಅಂಥವರಲ್ಲಿ ಕ್ಯಾನ್ಸರ್, ಲ್ಯುಕೇಮಿಯ ಮುಂತಾದ ಭಯಾನಕ ರೋಗಗಳು ಕಾಣಿಸಿಕೊಂಡಿರುವುದು.

* * * * *

ಅಭ್ಯಾಸ 
  1. ವಿಘಟನೆಗೆ ಒಳಗಾಗುವ ಮತ್ತು ಒಳಗಾಗದ ಮಾಲಿನ್ಯಕಾರಕಗಳ ನಡುವಣ ವ್ಯತ್ಯಾಸ ತಿಳಿಸಿ.
  2. ವಾಯುಮಾಲಿನ್ಯದ ಪ್ರಮುಖ ಆಕರಗಳನ್ನು ಹೆಸರಿಸಿ.
  3. ಸಾಗರ ಮಾಲಿನ್ಯದ ಬಗ್ಗೆ ಸಂಕ್ಷಿಪ್ತ ವಿವರಣೆ ಕೊಡಿ.
  4. ಚರಂಡಿ ನೀರಿನ ಸಂಸ್ಕರಣೆಯ ಅವಶ್ಯಕತೆಯ ಬಗ್ಗೆ ತಿಳಿಸಿ.
  5. ಶಬ್ದ ಮಾಲಿನ್ಯದ ಪರಿಣಾಮಗಳನ್ನು ಪಟ್ಟಿಮಾಡಿ.
  6. ವಿಕಿರಣ ಮಾಲಿನ್ಯದ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿ.
  7. ಭೂಮಿಯ ಮೇಲೆ ನೈಸರ್ಗಿಕ ಹಸಿರುಮನೆ ಪರಿಣಾಮದ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿ.
  8. ಆಮ್ಲ ಮಳೆಯನ್ನು ನಿಯಂತ್ರಿಸುವ ಬಗ್ಗೆ ಸಲಹೆಗಳನ್ನು ನೀಡಿ.

3 comments:

  1. Very useful,beneficial post in Kannada language

    ReplyDelete
  2. Secondly, if you're 로스트아크 unfortunately dropping, you must be strong-willed. Don’t chase your losses by increasing the stakes, and certainly don’t load up more money for extra chips if it isn't in your obtainable bankroll. Chasing losses and enjoying in} whereas beneath duress leads to bad decision-making, which might only worsen your performance. An even-money roulette bet like Red/Black is best for long-term earnings.

    ReplyDelete